ಆ್ಯಪ್ನಗರ

ಇಂಡಿಯಾ ಡೇ ಪರೇಡ್‌ನಲ್ಲಿ ಬಾಹುಬಲಿ ತಾರೆಯರು

ಭಾರತದ 71ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ನ್ಯೂಯಾರ್ಕ್‌ ನಗರದ ಹೃದಯ ಭಾಗದಲ್ಲಿ ಭಾನುವಾರ ನಡೆದ 'ಇಂಡಿಯಾ ಡೇ ಪರೇಡ್‌' ಗಮನ ಸೆಳೆಯಿತು...

Agencies 22 Aug 2017, 5:00 am

ನ್ಯೂಯಾರ್ಕ್‌: ಭಾರತದ 71ನೇ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ನ್ಯೂಯಾರ್ಕ್‌ ನಗರದ ಹೃದಯ ಭಾಗದಲ್ಲಿ ಭಾನುವಾರ ನಡೆದ 'ಇಂಡಿಯಾ ಡೇ ಪರೇಡ್‌' ಗಮನ ಸೆಳೆಯಿತು.

ಸಾವಿರಾರು ಅನಿವಾಸಿ ಭಾರತೀಯರು ಪ್ರತಿವರ್ಷ ಹೀಗೆ 'ಇಂಡಿಯಾ ಡೇ' ಆಚರಿಸುವುದು ಸಾಮಾನ್ಯವಾಗಿದ್ದರೂ, ಈ ಬಾರಿ ಬಾಹುಬಲಿ ಚಿತ್ರದ ತಾರೆಯರು ಇದಕ್ಕೆ ಸಾಥ್‌ ನೀಡಿದ್ದು ವಿಶೇಷವಾಗಿತ್ತು.

ನ್ಯೂಯಾರ್ಕ್‌, ನ್ಯೂಜೆರ್ಸಿ ಮತ್ತು ಕನೆಕ್ಟಿಕಟ್‌ನ 'ಫೆಡರೇಷನ್‌ ಆಫ್‌ ಇಂಡಿಯನ್‌ ಅಸೋಸಿಯೇಷನ್ಸ್‌' ಏರ್ಪಡಿಸಿದ್ದ 37ನೇ 'ಇಂಡಿಯಾ ಡೇ ಪರೇಡ್‌'ನಲ್ಲಿ ನಟರಾದ ರಾಣಾ ದಗ್ಗುಬಾಟಿ ಹಾಗೂ ತಮನ್ನಾ ಭಾಟಿಯಾ ಪಾಲ್ಗೊಂಡರು.

ಭಾರತ ನೆಲದಿಂದ ಆಚೆ ನಡೆಯುವ ಅತಿದೊಡ್ಡ ಪರೇಡ್‌ಗಳಲ್ಲಿ ಒಂದೆನಿಸಿರುವ ಈ ಕಾರ್ಯಕ್ರಮದ ಅಂಗವಾಗಿ ಮ್ಯಾನ್ಹಟನ್‌ನ ಮ್ಯಾಡಿಸನ್‌ ಅವೆನ್ಯೂನ ಹಲವು ಬೀದಿಗಳಲ್ಲಿ ಓಟ ಏರ್ಪಡಿಸಲಾಗಿತ್ತು. ಭಾರತೀಯ ಅಮೆರಿಕನ್‌ ಸಂಘ ಸಂಸ್ಥೆಗಳು ರೂಪಿಸಿದ್ದ ಸ್ತಬ್ಧಚಿತ್ರಗಳು, ವಾದ್ಯವೃಂದ ಹಾಗೂ ಭಾರತೀಯ ಮೂಲದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ವರ್ಣರಂಜಿತವಾಗಿ ಮೂಡಿಬಂದಿತು.

ಭಾರಿ ಬಿಗಿ ಭದ್ರತೆ ನಡುವೆ ಈ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡವರಿಗೆ ನ್ಯೂಯಾರ್ಕ್‌ ನಗರದ ಮೇಯರ್‌ ಬಿಲ್‌ ಡಿ ಬ್ಲಾಸಿಯೋ ಅವರು ಶುಭಾಶಯ ಕೋರಿದರು.

ಭಾರತದ ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದು, ಅಲ್ಲಿ ನೆರೆದಿದ್ದ ಸಾವಿರಾರು ಜನರತ್ತ ತೋರಿಸುವ ಮೂಲಕ ಮೇಯರ್‌ ಅವರು ಭಾರತೀಯರಲ್ಲಿ ತಾಯ್ನಾಡಿನ ಪ್ರೀತಿಯನ್ನು ಉತ್ತೇಜಿಸಿದರು. ಈ ಕಾರ್ಯಕ್ರಮವು ಭಾರತೀಯ ಮೂಲದ ಅಮೆರಿಕನ್ನರ 'ಅದ್ಭುತ ಕೊಡುಗೆ' ಎಂದು ಮೇಯರ್‌ ಬಿಲ್‌ ಕೊಂಡಾಡಿದರು.

ಹೆಮ್ಮೆಯ ಕ್ಷಣ ಎಂದ ದಗ್ಗುಬಾಟಿ:'ಗ್ರಾಂಡ್‌ ಮಾರ್ಷಲ್‌' ಆಗಿ ಪರೇಡ್‌ನಲ್ಲಿ ಪಾಲ್ಗೊಂಡ ನಟ ರಾಣಾ ದಗ್ಗುಬಾಟಿ, ಇಷ್ಟೊಂದು ಮಂದಿ ಭಾರತೀಯ ಮೂಲದ ಅಮೆರಿಕನ್ನರ ಜತೆ ದೇಶದ ಸ್ವಾತಂತ್ರ್ಯೋತ್ಸವ ಆಚರಿಸಲು ಹೆಮ್ಮೆಯಾಗುತ್ತಿದೆ ಎಂದರು.

''ನನ್ನಲ್ಲಿ ಅತೀವ ಹೆಮ್ಮೆಯ ಭಾವ ಮೂಡುತ್ತಿದೆ. ಇಲ್ಲಿ ನೆರೆದಿರುವ ಜನರು ಭಾರತದ ರಾಯಭಾರಿಗಳಾಗಿದ್ದು, ಭಾರತದ ಹೊರಗೂ ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ,'' ಎಂದು ರಾಣಾ ಹೇಳಿದರು.

''ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಎತ್ತಿಹಿಡಿಯುವ ಆಚರಣೆಯಲ್ಲಿ ಭಾರತೀಯರು ತೊಡಗಿರುವುದು ಅತ್ಯಂತ ಸಂತೋಷದ ಸಂಗತಿ,'' ಎಂದು ನಟಿ ತಮನ್ನಾ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ