ಆ್ಯಪ್ನಗರ

ಅತ್ಯಾಚಾರ ಪ್ರಕರಣದ ಆರೋಪಿ ಕೇರಳದ ಬಿಷಪ್‌ರಿಂದ ಅಧಿಕಾರ ಹಸ್ತಾಂತರ

ಸನ್ಯಾಸಿನಿ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಕೇರಳದ ಬಿಷಪ್ ಫ್ರಾಂಕೊ ಮುಳ್ಳಕಾಲ್ ಶನಿವಾರ ಜಲಂಧರ್ ಧರ್ಮಪ್ರಾಂತ್ಯದ ಅಧಿಕಾರವನ್ನು ಫಾ. ಮ್ಯಾಥ್ಯೂ ಕೊಕ್ಕಂಡಮ್‌ ಅವರಿಗೆ ಹಸ್ತಾಂತರಿಸಿದ್ದಾರೆ.

Vijaya Karnataka Web 15 Sep 2018, 8:24 pm
ಕೊಟ್ಟಾಯಂ: ಸನ್ಯಾಸಿನಿ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಕೇರಳದ ಬಿಷಪ್ ಫ್ರಾಂಕೊ ಮುಳ್ಳಕಾಲ್ ಶನಿವಾರ ಜಲಂಧರ್ ಧರ್ಮಪ್ರಾಂತ್ಯದ ಅಧಿಕಾರವನ್ನು ಫಾ. ಮ್ಯಾಥ್ಯೂ ಕೊಕ್ಕಂಡಮ್‌ ಅವರಿಗೆ ಹಸ್ತಾಂತರಿಸಿದ್ದಾರೆ.
Vijaya Karnataka Web bishop (1)


ಅಧಿಕಾರ ಹಸ್ತಾಂತರಿಸಿರುವ ಬಗ್ಗೆ ಸುತ್ತೋಲೆ ಹೊರಡಿಸಿರುವ ಬಿಷಪ್ ಫ್ರಾಂಕೋ, ನನ್ನ ಅನುಪಸ್ಥಿತಿಯಲ್ಲಿ ಮ್ಯಾಥ್ಯೂ ಅವರು ಧರ್ಮಪ್ರಾಂತ್ಯದ ಕಾರ್ಯಗಳನ್ನು ನಡೆಸಿಕೊಡಲಿದ್ದಾರೆ. ನನ್ನ ಮೇಲೆ ಆರೋಪ ಬಂದಾಗ ಬೆಂಬಲ ನೀಡಿದ ಮತ್ತು ಧೈರ್ಯ ತುಂಬಿದ, ಜತೆಗಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ನನ್ನ ಮೇಲೆ ಆರೋಪ ಹೊರಿಸಿದವರಿಗೆ, ಅವರ ಬೆಂಬಲಿಗರಿಗೆ ಮತ್ತು ನನಗಾಗಿ ನಾನು ಪ್ರಾರ್ಥಿಸುತ್ತೇನೆ. ಸತ್ಯ ಎಲ್ಲರಿಗೂ ಗೊತ್ತಾಗಲಿ ಎಂದಿದ್ದಾರೆ.

ದೇವರು ಎಲ್ಲವನ್ನೂ ನಿರ್ಧರಿಸುತ್ತಾನೆ, ಅದಕ್ಕಾಗಿ ನಾನು ಕಾಯುತ್ತೇನೆ ಎಂದು ಬಿಷಪ್ ತಿಳಿಸಿದ್ದಾರೆ.

ಮುಳಕ್ಕಲ್‌ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಒತ್ತಡ ಹೆಚ್ಚುತ್ತಿದ್ದಂತೆಯೇ ಎರ್ನಾಕುಲಂ ಐಜಿಪಿ ಸಖಾರೆ, ಕೊಟ್ಟಾಯಂ ಎಸ್‌ಪಿ ಹರಿಶಂಕರ್‌, ವೈಕೋಂ ಡಿವೈಎಸ್‌ಪಿ ಕೆ. ಸುಭಾಶ್‌ ಅವರು ಗುರುವಾರ ಸಭೆ ನಡೆಸಿ ಬಿಷಪ್‌ಗೆ ಸಮನ್ಸ್‌ ನೀಡಲು ನಿರ್ಧರಿಸಿದ್ದರು. ಈ ನಡುವೆ, ಪಂಜಾಬ್‌ನ ಜಲಂಧರ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಸೆ.19ರಂದು ವಿಚಾರಣೆಗೆ ಹಾಜರಾಗುವಂತೆ ಅಲ್ಲಿನ ಪೊಲೀಸರು ಮುಳಕ್ಕಲ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದ್ದಾರೆ.

ಏನಿದು ಪ್ರಕರಣ?:
ಬಿಷಪ್‌ ಮುಳಕ್ಕಲ್‌ ಅವರು 2014ರಿಂದ 2016ರ ನಡುವೆ ತಮ್ಮ ಮೇಲೆ 13 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ಆರೋಪ ಮಾಡಿದ್ದರು. ರಾಜಕೀಯ ಮತ್ತು ಹಣ ಬಲದಿಂದ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿರುವ ಅವರನ್ನು ಶಿಕ್ಷಿಸಿ, ತನಗೆ ನ್ಯಾಯ ಒದಗಿಸಲು ಮಧ್ಯ ಪ್ರವೇಶ ಮಾಡಬೇಕು ಎಂದು ವ್ಯಾಟಿಕನ್‌ಗೂ ಮನವಿ ಸಲ್ಲಿಸಿದ್ದರು. ಜತೆಗೆ ಕಳೆದ ಎಂಟು ದಿನಗಳಿಂದ ಹಲವಾರು ಕ್ರೈಸ್ತ ಸನ್ಯಾಸಿನಿಯರು ಸೇರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನೆಗೆ ಧರ್ಮಗುರುಗಳ ಬೆಂಬಲ

ಕ್ರೈಸ್ತ ಸನ್ಯಾಸಿನಿಗೆ ನ್ಯಾಯ ಆಗ್ರಹಿಸಿ ಕ್ಯಾಥೊಲಿಕ್‌ ಸುಧಾರಣಾವಾದಿ ಸಂಘಟನೆಗಳು ಕೊಚ್ಚಿಯಲ್ಲಿ ಕಳೆದ ಎಂಟು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆಗೆ ಕ್ಯಾಥೊಲಿಕ್‌ ಧರ್ಮಗುರುಗಳ ಗುಂಪೊಂದು ಬೆಂಬಲ ಘೋಷಿಸಿದೆ. ಕೇರಳ ಕ್ಯಾಥೊಲಿಕ್‌ ಬಿಷಪ್‌ ಕೌನ್ಸಿಲ್‌ ಪ್ರತಿಭಟನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರೂ ತಂಡವೊಂದು ಈ ರೀತಿ ಬಹಿರಂಗ ಬೆಂಬಲ ನೀಡಿರುವುದು ಹೋರಾಟಕ್ಕೆ ಬಲ ತುಂಬಿದೆ. ನಾವಿಲ್ಲಿ ಯಾರ ಬಗ್ಗೆಯೂ ತೀರ್ಮಾನ ಹೇಳಲು ಬಂದಿಲ್ಲ. ಚರ್ಚ್‌ ಕ್ರೈಸ್ತ ಸನ್ಯಾಸಿನಿಯರಿಗೆ ನ್ಯಾಯ ನೀಡಬೇಕೆನ್ನುವುದು ನಮ್ಮ ಆಶಯ ಎಂದು ಧರ್ಮಗುರುಗಳು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ