ಆ್ಯಪ್ನಗರ

ಪ್ಯಾಂಗಾಂಗ್ ಪ್ರದೇಶದಿಂದ ಸೇನೆ ಹಿಂಪಡೆಯಲ್ಲ ಎಂದ ಚೀನಾ; ಗಡಿಯಲ್ಲಿ ಭಾರತೀಯ ಸೇನೆಯಿಂದ ಹೈ ಅಲರ್ಟ್‌

ಭಾರತ ಹಾಗೂ ಚೀನಾ ನಡುವಿನ ಗಡಿ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಪ್ಯಾಂಗಾಂಗ್‌ ತ್ಸೋ ಪ್ರದೇಶದಿಂದ ಚೀನಾ ಹಿಂದಕ್ಕೆ ಸರಿಯುವುದಿಲ್ಲ ಎಂದು ಹೇಳಿದ ಬೆನ್ನಲ್ಲಿಯೇ ಭಾರತೀಯ ಸೇನೆ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿದೆ ಎನ್ನಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Agencies 16 Jul 2020, 5:46 pm
ಹೊಸದಿಲ್ಲಿ: ಭಾರತ - ಚೀನಾ ನಡುವಿನ ಗಡಿ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಗಲ್ವಾನ್‌ ಕಣಿವೆಯ ಸಂಘರ್ಷದ ಬಳಿಕ ಆಯ್ದ ಗಡಿ ಪ್ರದೇಶದಲ್ಲಿನ ಸೇನೆಯನ್ನು ವಾಪಸ್‌ ತೆಗೆದುಕೊಳ್ಳುವ ಕುರಿತು ಉಭಯ ದೇಶಗಳ ನಡುವೆ ಮಾತುಕತೆ ನಡೆಯುತ್ತಿದೆ. ಇದರ ನಡುವೆಯೇ ಪ್ಯಾಂಗಾಂಗ್‌ ತ್ಸೋ ಸರೋವರ ಪ್ರದೇಶದ ಫಿಂಗರ್‌ 4 ಪ್ರದೇಶದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ನಿರಾಕರಿಸಿದೆ ಎಂದು ವರದಿಗಳು ತಿಳಿಸಿವೆ.
Vijaya Karnataka Web report india army on high alert as china refuses to step back from finger 4 area in ladakh
ಪ್ಯಾಂಗಾಂಗ್ ಪ್ರದೇಶದಿಂದ ಸೇನೆ ಹಿಂಪಡೆಯಲ್ಲ ಎಂದ ಚೀನಾ; ಗಡಿಯಲ್ಲಿ ಭಾರತೀಯ ಸೇನೆಯಿಂದ ಹೈ ಅಲರ್ಟ್‌


ಪ್ಯಾಂಗಾಂಗ್ ತ್ಸೋನ ಫಿಂಗರ್ 4 ಪ್ರದೇಶದಿಂದ ಚೀನಾ ಸೇನೆ ಹಿಂದೆ ಸರಿಯಲು ನಿರಾಕರಿಸಿದ ಹಿನ್ನೆಲೆ ಪೂರ್ವ ಲಡಾಖ್ ಪ್ರದೇಶದಲ್ಲಿ ಭಾರತೀಯ ಸೇನೆ ಹೈ ಅಲರ್ಟ್ ಘೋಷಿಸಿದ್ದು ಯುದ್ಧ ಟ್ಯಾಂಕ್ ಸೇರಿ ಯೋಧರನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯೋಜಿಸುತ್ತಿದೆ ಎಂದು ವರದಿ ತಿಳಿಸಿದೆ. ಇನ್ನು, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಯಾವುದೇ ಬೆದರಿಕೆಯನ್ನು ಎದುರಿಸಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ಸಂಭಾವ್ಯ ದಾಳಿಯನ್ನು ತಡೆಯಲು ಪೂರ್ವ ಲಡಾಖ್‌ನ ಗಡಿ ವಾಸ್ತವಿಕ ರೇಖೆ ಬಳಿ ಸುಮಾರು 60 ಸಾವಿರ ಭಾರತೀಯ ಯೋಧರು ಬೀಡುಬಿಟ್ಟಿದ್ದಾರೆ ಎನ್ನಲಾಗಿದ್ದು, ಭೀಷ್ಮ ಯುದ್ಧ ಟ್ಯಾಂಕರ್‌, ಅಪಾಚೆ ಹೆಲಿಕಾಪ್ಟರ್‌, ಸುಖೋಯ್‌ ಯುದ್ಧ ವಿಮಾಣ, ಚಿನೂಕ್‌ ಮತ್ತು ರುದ್ರ ಹೆಲಿಕಾಪ್ಟರ್‌ಗಳನ್ನು ಎಲ್‌ಎಸಿ ಬಳಿ ಸಿದ್ಧವಾಗಿಡಲಾಗಿದೆ ಎಂದು ಸೇನಾ ಮೂಲಗಳು ಹೇಳಿವೆ.

ಜುಲೈ 17-18ರಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಲಡಾಖ್‌ ಭೇಟಿಗೆ ನಿರ್ಧರಿಸಿದ್ದರೂ. ಅದಕ್ಕೂ ಮುನ್ನಾ ದಿನ ಈ ಬೆಳವಣಿಗೆಗಳಾಗಿರುವುದು ಮಹತ್ವ ಪಡೆದಿದೆ. ಇನ್ನು, ನಾರ್ಥನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮುಖ್ಯಸ್ಥ ವೈ.ಕೆ.ಜೋಶಿ ದೆಹಲಿಗೆ ಆಗಮಿಸುವ ಸಾಧ್ಯತೆ ಇದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಅಧಿಕಾರಿಗಳ ಜತೆ ಗಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.

ಬುಧವಾರ ಭಾರತ ಮತ್ತು ಚೀನಾ ನಡುವಿನ ಕಮಾಂಡರ್ ಹಂತದ ನಾಲ್ಕನೇ ಸುತ್ತಿನ ಮಾತುಕತೆ ನಡೆದಿತ್ತು. ಸುದೀರ್ಘ ಮಾತುಕತೆಯ ವೇಳೆ ಚೀನಾ ಫ್ಯಾಂಗನ್‌ ತ್ಸೋ ಸರೋವರದ ಫಿಂಗರ್ 4ರಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು ಎಂದು ಮೂಲಗಳು ತಿಳಿಸಿವೆ. ಗಲ್ವಾನ್ ಕಣಿವೆ ಪ್ರದೇಶ, ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾದಲ್ಲಿ ಸೇನೆ ವಾಪಸಾತಿಗೆ ಉಭಯ ದೇಶಗಳು ಒಪ್ಪಿಗೆ ಸೂಚಿಸಿದ್ದವು. ಆದರೆ, ಎಲ್ಲಾ ಪ್ರದೇಶಗಳಿಂದ ಚೀನಾ ಸೇನೆ ವಾಪಸ್ ಆಗಬೇಕೆಂದು ಭಾರತ ಬೇಡಿಕೆ ಇಟ್ಟಿರುವುದಾಗಿ ವರದಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ