ಆ್ಯಪ್ನಗರ

ಗೋವಾ ಜಿಪಂ ಚುನಾವಣೆಯಲ್ಲೂ 'ಬಿಜೆಪಿ' ವಿಜಯ ಯಾತ್ರೆ..! ಪ್ರಮೋದ್‌ ಸಾವಂತ್‌ ಆಡಳಿತ ಮೆಚ್ಚಿದ ಜನ

ರಾಷ್ಟ್ರಾದ್ಯಂತ ಕೇಸರಿ ಪಡೆಯ ಗೆಲುವಿನ ನಾಗಾಲೋಟ ಮುಂದುವರೆದಿದೆ. ಅದು ಗ್ರಾಮೀಣ ಗೋವಾದಲ್ಲೂ ಮುಂದುವರೆದಿದ್ದು, ಆಡಳಿತ ವಿರೋಧಿ ಅಲೆಯಲ್ಲೂ ಗೋವಾ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮುಂದಿನ ವರ್ಷ ನಡೆಯಲಿರುವ ಚುನಾವಣೆಗೆ ಪ್ರಮೋದ್‌ ಸಾವಂತ್‌ ರೆಡಿಯಾಗಿದ್ದಾರೆ.

Vijaya Karnataka Web 15 Dec 2020, 2:34 pm
ಪಣಜಿ (ಗೋವಾ): ಬಿಜೆಪಿಯ ಗೆಲುವಿನ ನಾಗಾಲೋಟ ಮುಂದುವರೆದಿದ್ದು, ಗ್ರಾಮೀಣ ಗೋವಾದಲ್ಲಿ ಕೇಸರಿ ಪಸರನ್ನು ಹರಡಲು ಕಮಲ ಪಡೆ ಯಶಸ್ವಿಯಾಗಿದೆ. ಗೋವಾದ ಎರಡು ಜಿಲ್ಲಾ ಪಂಚಾಯಿತಿಗಳಲ್ಲೂ ಬಿಜೆಪಿ ಅಭೂತ್‌ಪೂರ್ವ ಗೆಲುವನ್ನು ಸಾಧಿಸಿದ್ದು, ಕಾಂಗ್ರೆಸ್‌ ನಿರಾಸೆ ಅನುಭವಿಸಿದೆ.
Vijaya Karnataka Web BJP
ಸಾಂದರ್ಭಿಕ ಚಿತ್ರ


ದಕ್ಷಿಣ ಗೋವಾ ಜಿಲ್ಲಾ ಪಂಚಾಯತ್‌ನಲ್ಲಿ 24 ಸೀಟುಗಳ ಪೈಕಿ 14 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ನಿಧನದಿಂದ ಒಂದು ಕ್ಷೇತ್ರದ ಚುನಾವಣೆ ನಡೆದಿಲ್ಲ. ಉತ್ತರ ಗೋವಾ ಜಿಲ್ಲಾ ಪಂಚಾಯತ್‌ನ 25 ಸೀಟುಗಳ ಪೈಕಿ 19ರಲ್ಲಿ ಕಮಲದ ಕಲಿಗಳು ಗೆಲುವು ಸಾಧಿಸಿದ್ದಾರೆ.

ಇನ್ನು, ಕಾಂಗ್ರೆಸ್‌ ಮೊದಲ ಬಾರಿಗೆ ಅಧಿಕೃತವಾಗಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿತ್ತು. ಆದರೆ, ಬಿಜೆಪಿ ಅಬ್ಬರದ ಮುಂದೆ ಉತ್ತರ ಗೋವಾದಲ್ಲಿ 1 ಹಾಗೂ ದಕ್ಷಿಣ ಗೋವಾದಲ್ಲಿ ಮೂರು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಮಾತ್ರ ಯಶಸ್ವಿಯಾಗಿದೆ.

ವಿಧಾನಸಭೆ ಚುನಾವಣೆಗೆ ಇನ್ನು 13 ತಿಂಗಳು ಇದ್ದು, ಈ ಸಂದರ್ಭದಲ್ಲಿ ಬಿಜೆಪಿಗೆ ಈ ಗೆಲುವು ಮತ್ತಷ್ಟು ಬೂಸ್ಟ್‌ ನೀಡಿದಂತಾಗಿದೆ. ಆದರೆ, ಕಾಂಗ್ರೆಸ್‌ಗೆ ಮಾತ್ರ ಈ ಫಲಿತಾಂಶ ನುಂಗಲಾರದ ತುತ್ತಾಗಿದೆ. ಎರಡು ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿ, ಸಿಎಂ ಪ್ರಮೋದ್‌ ಸಾವಂತ್‌ ಕಾರ್ಯವೈಖರಿಯನ್ನು ಜನ ಮೆಚ್ಚಿಕೊಂಡು ಈ ಫಲಿತಾಂಶ ನೀಡಿದ್ದಾರೆ ಎಂದು ಹೇಳಿದೆ.

ರಾಜಸ್ಥಾನ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಹಿಂದಿಕ್ಕಿದ ಕಾಂಗ್ರೆಸ್‌

ಆದರೆ, ಕೊರೊನಾ ವೈರಸ್‌ ನಿರ್ವಹಣೆಯಲ್ಲಿ ಪ್ರಮೋದ್‌ ಸಾವಂತ್‌ ವಿಫಲರಾಗಿದ್ದಾರೆ ಎಂದು ವಿಪಕ್ಷಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಲ್ಲದೇ ಮಹದಾಯಿ ಸೇರಿ ಅನೇಕ ವಿಷಯಗಳಲ್ಲಿ ಸಾವಂತ್‌ ಹಿನ್ನಡೆ ಅನುಭವಿಸಿದ್ದರು. ಈ ಹಿನ್ನೆಲೆ ಈ ಬಾರಿಯ ಜಿಲ್ಲಾ ಪಂಚಾಯತ್‌ ಚುನಾವಣೆಯನ್ನು ಪ್ರಮೋದ್‌ ಸಾವಂತ್‌ಗೆ ಅಗ್ನಿ ಪರೀಕ್ಷೆ ಎಂದೇ ಬಿಂಬಿಸಲಾಗಿತ್ತು.

ಮಹದಾಯಿ ವಿವಾದ: ಕರ್ನಾಟಕದ ಜೊತೆ ಮಾತುಕತೆ ಅಸಾಧ್ಯ ಎಂದ ಗೋವಾ ಸಿಎಂ ಸಾವಂತ್‌

ಮಾಜಿ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ನಿಧನದ ಬಳಿಕ ಗೋವಾ ಸಿಎಂ ಆದ ಪ್ರಮೋದ್‌ ಸಾವಂತ್‌ ನೇತೃತ್ವದಲ್ಲಿ ಗೋವಾದಲ್ಲಿ ಬಿಜೆಪಿ ಎದುರಿಸಿದ ಮೊದಲ ಪೂರ್ಣಕಾಲಿಕ ಚುನಾವಣೆ ಇದಾಗಿದೆ. ಲೋಕಸಭೆಯಲ್ಲಿ ಮೋದಿ ಅಲೆಯಿದ್ದರೂ ಕೇವಲ ಉತ್ತರ ಗೋವಾದಲ್ಲಿ ಮಾತ್ರ ಬಿಜೆಪಿಗೆ ಗೆಲುವು ದಕ್ಕಿತು. ಅದಾದ ನಂತರ ನಡೆದ ಉಪಚುನಾವಣೆಯಲ್ಲಿ 4 ಕ್ಷೇತ್ರಗಳ ಪೈಕಿ 3 ರಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಆದರೆ, 25 ವರ್ಷಗಳಿಂದ ಪರಿಕ್ಕರ್‌ ಪ್ರತಿನಿಧಿಸುತ್ತಿದ್ದ ಪ್ರತಿಷ್ಠಿತ ಪಣಜಿ ವಿಧಾನಸಭಾ ಕ್ಷೇತ್ರ ಬಿಜೆಪಿ ಕೈತಪ್ಪಿತ್ತು.

ಮಹದಾಯಿ ಅಧಿಸೂಚನೆ: ರಾಜ್ಯ ಪಾಲಿಗೆ ಸಿಕ್ಕಿದ್ದು ಏನೇನು? ಇಲ್ಲಿದೆ ವಿವರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ