ಆ್ಯಪ್ನಗರ

ಐಎನ್‌ಎಕ್ಸ್ ಮೀಡಿಯಾ ಹಗರಣ: ಚಿದಂಬರಂ ಜಾಮೀನು ಅರ್ಜಿ ಪರಿಗಣಿಸಲು ಸುಪ್ರೀಂ ಸಲಹೆ

ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ 12 ದಿನಗಳಿಂದ ಸಿಬಿಐ ಕಸ್ಟಡಿಯಲ್ಲಿರುವ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಸೆ.5ರ ವರೆಗೂ ಇದೇ ಸ್ಥಿತಿಯಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಅವರ ಜಾಮೀನು ಕೋರಿಕೆ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

PTI 2 Sep 2019, 4:02 pm
ಹೊಸದಿಲ್ಲಿ: ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಕುರಿತ ಪಿ. ಚಿದಂಬರಂ ಕೋರಿಕೆಯನ್ನು ಪರಿಗಣಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ಸೂಚನೆ ನೀಡಿದೆ. ನ್ಯಾಯಾಂಗ ಕಸ್ಟಡಿಯಲ್ಲಿರುವಾಗ ತಮ್ಮನ್ನು ತಿಹಾರ್‌ ಜೈಲಿಗೆ ಕಳುಹಿಸಬಾರದು, ಬೇಕಾದರೆ ಗೃಹಬಂಧನದಲ್ಲಿ ಇರಿಸಿ ಎಂದು ಚಿದಂಬರಂ ಮನವಿ ಮಾಡಿದ ಬಳಿಕ ಕೋರ್ಟ್ ಈ ಸೂಚನೆ ನೀಡಿದೆ.
Vijaya Karnataka Web P Chidambaram


ಮಧ್ಯಂತರ ಜಾಮೀನಿಗಾಗಿ ಚಿದಂಬರಂ ಕೋರಿಕೆಯನ್ನು ವಿಚಾರಣಾ ನ್ಯಾಯಾಲಯ ಸೋಮವಾರವೇ ಪರಿಗಣಿಸದಿದ್ದಲ್ಲಿ ಸಿಬಿಐ ಕಸ್ಟಡಿಯನ್ನು ಇನ್ನೂ ಮೂರು ದಿನಗಳ ಕಾಲ ವಿಸ್ತರಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿತು.

ಆರ್ ಭಾನುಮತಿ ಮತ್ತು ಎ.ಎಸ್ ಬೋಪಣ್ಣ ಅವರನ್ನೊಳಗೊಂಡ ನ್ಯಾಯಪೀಠ, ತಮ್ಮ ವಿರುದ್ಧ ಜಾಇಗೊಳಿಸಲಾದ ಜಾಮೀನುರಹಿತ ವಾರಂಟ್ ಪ್ರಶ್ನಿಸಿದ ಚಿದಂಬರಂ ಸಲ್ಲಿಸಿದ ಅರ್ಜಿಗೆ ಉತ್ತರಿಸುವಂತೆ ಸಿಬಿಐಗೆ ಸೂಚನೆ ನೀಡಿತು.

ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಚಿದಂಬರಂ ಅವರಿಗೆ ವಿಧಿಸಿದ್ದ ಸಿಬಿಐ ಕಸ್ಟಡಿ ಇಂದಿಗೆ ಮುಗಿಯುತ್ತಿದೆ. ಚಿದಂಬರಂ ಪರ ಹಾಜರಾದ ಹಿರಿಯ ವಕೀಲ ಕಪಿಲ್ ಸಿಬಲ್‌, ತಮ್ಮ ಕಕ್ಷಿದಾರರನ್ನು ಕಳೆದ 12 ದಿನಗಳಿಂದ ಸಿಬಿಐ ತನ್ನ ಕಸ್ಟಡಿಯಲ್ಲಿಟ್ಟುಕೊಂಡಿದೆ ಎಂದು ದೂರಿದರು.

'ಜಾಮೀನುರಹಿತ ಬಂದನ ವಾರಂಟ್ ಜಾರಿ ಮಾಡುವ ಅಗತ್ಯವೇ ಇರಲಿಲ್ಲ. ನನಗೆ ಮಧ್ಯಂತರ ಜಾಮೀನು ನೀಡಿ ಅಥವಾ ಗೃಹಬಂಧನದಲ್ಲಿ ಇರಿಸಿ. ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಬಾರದು' ಎಂದು ಚಿದಂಬರಂ ಮಾಡಿಕೊಂಡ ಮನವಿಯನ್ನು ಸಿಬಲ್ ಕೋರ್ಟಿಗೆ ತಿಳಿಸಿದರು.

ವಿಚಾರಣಾ ನ್ಯಾಯಾಲಯದ ರಿಮಾಂಡ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಬಹುದು, ಅಲ್ಲದೆ ಚಿದಂಬರಂಗೆ ಮಧ್ಯಂತರ ಜಾಮೀನು ಮಂಜೂರು ಮಾಡಬಹುದು ಎಂದು ಸಿಬಲ್ ಹೇಳಿದರು.

ವಿಚಾರಣಾ ನ್ಯಾಯಾಲಯ ಜಾಮೀನು ಮಂಜೂರು ಮಾಡದಿದ್ದಲ್ಲಿ ಚಿದಂಬರಂ ಅವರ ಸಿಬಿಐ ಕಸ್ಟಡಿಯನ್ನು ಮೂರು ದಿನಗಳ ಕಾಲ ವಿಸ್ತರಿಸಲಾಗುವುದು. ಸೆಪ್ಟೆಂಬರ್ 5ರಂದು ಮತ್ತೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ