ಆ್ಯಪ್ನಗರ

ನಿರ್ಬಂಧ ತೆರವಿಗೆ ಸುಪ್ರೀಂ ನಕಾರ

ಕಾಂಗ್ರೆಸ್‌ ಕಾರ್ಯಕರ್ತ ತೆಹ್ಸೀನ್‌ ಪೂನಾವಾಲಾ, ಕೇಂದ್ರ ಸರಕಾರದ ನಿರ್ಬಂಧಗಳ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು.

PTI 14 Aug 2019, 5:00 am
ಹೊಸದಿಲ್ಲಿ: 370ನೇ ವಿಧಿ ರದ್ದತಿಗೆ ಮುನ್ನೆಚ್ಚರಿಕೆಯಾಗಿ ಹಾಗೂ ನಂತರ ಜಮ್ಮು-ಕಾಶ್ಮೀರದಲ್ಲಿ ಹೇರಲಾಗಿರುವ ನಿರ್ಬಂಧಗಳನ್ನು ಕೂಡಲೇ ತೆರವುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.
Vijaya Karnataka Web sc


''ಜಮ್ಮು ಮತ್ತು ಕಾಶ್ಮೀರದಲ್ಲಿ ಅತಿಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿದೆ. ಅದನ್ನು ತಿಳಿಯಾಗಿಸಲು ಸರಕಾರಕ್ಕೆ ಕಾಲಾವಕಾಶ ನೀಡುವುದು ಅಗತ್ಯ. ತರಾತುರಿಯಲ್ಲಿ ನಿರ್ಬಂಧಗಳನ್ನು ಕಿತ್ತೊಗೆದರೆ ಕಾನೂನು ವ್ಯವಸ್ಥೆಗೆ ಧಕ್ಕೆಯಾಗಬಹುದು. ಜನರ ಜೀವ ಒತ್ತೆ ಇಟ್ಟು ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ,'' ಎಂದು ನ್ಯಾಯಮೂರ್ತಿ ಅರುಣ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ. ಕಣಿವೆ ರಾಜ್ಯ ಸಾಧಾರಣ ಸ್ಥಿತಿಗೆ ಮರಳುವವರೆಗೆ ಸುಪ್ರೀಂ ಕೋರ್ಟ್‌ ಕಾಯಲಿದೆ. ಅಲ್ಲಿ ಒಂದೇ ಒಂದು ಜೀವ ಕೂಡ ಬಲಿಯಾಗಬಾರದು ಎಂಬುದು ನಮ್ಮ ಕಾಳಜಿ. ಹಾಗಾಗಿ ಪ್ರಕರಣದ ಕುರಿತಾದ ವಿಚಾರಣೆಯನ್ನು 2 ವಾರಗಳ ಕಾಲ ಮುಂದೂಡುತ್ತೇವೆ ಎಂದು ನ್ಯಾಯಪೀಠ ತಿಳಿಸಿತು.

ಕಾಂಗ್ರೆಸ್‌ ಕಾರ್ಯಕರ್ತ ತೆಹ್ಸೀನ್‌ ಪೂನಾವಾಲಾ, ಕೇಂದ್ರ ಸರಕಾರದ ನಿರ್ಬಂಧಗಳ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ''ಪ್ರತಿ ದಿನ ಕಣಿವೆ ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಸ್ಥಿತಿಗತಿ ಪರಿಶೀಲಿಸಲಾಗುತ್ತಿದೆ. ಆಯಾ ಜಿಲ್ಲೆಯ ಮ್ಯಾಜಿಸ್ಪ್ರೇಟ್‌ಗಳು ನೀಡಿದ ವರದಿ ಆಧರಿಸಿ ನಿರ್ಬಂಧಗಳನ್ನು ಕ್ರಮೇಣ ಸಡಿಲಿಸಲಾಗುವುದು,'' ಎಂದು ಕೇಂದ್ರ ಸರಕಾರ ವಿಚಾರಣೆ ವೇಳೆ ಕೋರ್ಟ್‌ಗೆ ತಿಳಿಸಿತು.

ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾನೂನು ವ್ಯವಸ್ಥೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಹಾಗಾಗಿ ಕಟ್ಟುನಿಟ್ಟಿನ ನಿಯಮಗಳು ಬೇಕೇಬೇಕು ಎಂದು ಸರಕಾರದ ಪರ ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಾದಿಸಿದರು.
...............

ಅಟಾರ್ನಿ ಜನರಲ್‌ ವಾದ

* 2016ರ ಜುಲೈನಲ್ಲಿ ಉಗ್ರ ಬುರ್ಹಾನ್‌ ವಾನಿ ಹತ್ಯೆಯಾದಾಗ ರಕ್ತಪಾತ ನಡೆದು 47 ಮಂದಿ ಮೃತಪಟ್ಟರು. ಅಂತಹ ಸ್ಥಿತಿ ಊಗಲೂ ಎದುರಾಗುವುದು ಬೇಡ ಎಂದು ಮುನ್ನೆಚ್ಚರಿಕೆಯಾಗಿ ನಿರ್ಬಂಧ ಹೇರಲಾಗಿದೆ.

* ನಿರ್ಬಂಧ ಹೇರಿದ ಮೇಲೆ ಕಣಿವೆ ರಾಜ್ಯದಲ್ಲಿ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ.

* ಹಿಂಸಾಚಾರ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ಸರಕಾರ ಎಚ್ಚರಿಕೆ ವಹಿಸುತ್ತಿದೆ.

ನ್ಯಾಯಪೀಠದ ಅಭಿಪ್ರಾಯ

* ಪರಿಸ್ಥಿತಿ ತಿಳಿಯಾಗಿಸಲು ಕೇಂದ್ರ ಸರಕಾರ ನಿತ್ಯ ಪರಿಶೀಲನೆ ನಡೆಸುತ್ತಿರುವುದು ಸರಿ, ಅವರಿಗೆ ಸ್ವಲ್ಪ ಸಮಯ ಕೊಡೋಣ.

* ಆತುರದಲ್ಲಿ ನಿರ್ಬಂಧ ತೆರವಿಗೆ ಸೂಚಿಸಿದರೆ, ನಾಳೆ ಒಂದು ವೇಳೆ ಹಿಂಸಾಚಾರ ಘಟಿಸಿದರೆ ಯಾರು ಹೊಣೆ?

* ಜನರ ಸ್ವಾತಂತ್ರ್ಯದ ವಿಚಾರದಲ್ಲಿ ನಾವು ನಿಮ್ಮ ಜತೆಗೆ ನಿಲ್ಲುತ್ತೇವೆ. ಆದರೆ ನಮಗೆ ಕಣಿವೆಯಲ್ಲಿನ ಸ್ಥಿತಿಗತಿಯ ಸ್ಪಷ್ಟ ಚಿತ್ರಣ ನೀಡಿ.

.........................

ಯೋಧರ ಪರವಾಗಿ ನಾಟಕಬೇಡ


ಅರ್ಜಿದಾರರ ಪರ ವಕೀಲೆ ಮೇನಕಾ ಗುರುಸ್ವಾಮಿ, ''ಕಣಿವೆಯಲ್ಲಿ ಸಂವಹನಕ್ಕೂ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಯೋಧರು ಕೂಡ ತಮ್ಮ ಕುಟುಂಬದವರೊಂದಿಗೆ ಮಾತನಾಡಲು ಆಗುತ್ತಿಲ್ಲ'', ಎಂದು ವಾದಿಸಿದರು. ಇದಕ್ಕೆ ಕೋಪದಿಂದಲೇ ಪ್ರತಿಕ್ರಿಯಿಸಿದ ನ್ಯಾಯಪೀಠ, '' ಯೋಧರ ಪರವಾದ ಕಾಳಜಿ ಕೋರಿಸಲು ನೀವ್ಯಾರು? ನಿಮ್ಮ ಅರ್ಜಿಯಲ್ಲಿನ ವಿಚಾರ ಅದಲ್ಲವಲ್ಲ. ಯೋಧರು ಶಿಸ್ತಿನಲ್ಲಿ ಕಾರ್ಯಶನಿರ್ವಹಿಸಬೇಕಿದೆ. ಅದನ್ನು ಅವರು ಮಾಡುತ್ತಾರೆ. ಅವರಿಗೆ ತೊಂದರೆಯಿದ್ದರೆ ಅವರೇ ಖುದ್ದು ಕೋರ್ಟ್‌ಗೆ ಬರುತ್ತಾರೆ. ಅವರ ವಕಾಲತ್ತು ವಹಿಸುವ ನಾಟಕ ಬೇಡ'', ಎಂದು ಚಾಟಿ ಬೀಸಿತು. ಇನ್ನೊಂದೆಡೆ, ಅರ್ಜಿದಾರರಿಗೂ ತಪರಾಕಿ ಹಾಕಿದ ಕೋರ್ಟ್‌ , ನಿಮಗೆ 370ನೇ ವಿಧಿ ರದ್ದತಿ ಹಾಗೂ ಆ ನಂತರದ ನಿರ್ಬಂಧಗಳ ಗಾಂಭೀರ್ಯತೆ ತಿಳಿದಿಲ್ಲ. ತುಂಬ ಬೇಜವಾಬ್ದಾರಿಯಿಂದ ಅರ್ಜಿ ಸಿದ್ಧಪಡಿಸಿ ಸಲ್ಲಿಸಿದ್ದೀರಿ ಎಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ