ಆ್ಯಪ್ನಗರ

ಪದಾತಿ ದಳಕ್ಕೂ ಬರಲಿವೆ ಅತ್ಯಾಧುನಿಕ ರೈಫಲ್‌ಗಳು

ಪದಾತಿ ದಳಕ್ಕೂ ಅತ್ಯಾಧುನಿಕ, ಹೊಸ ಪೀಳಿಗೆಯ ಘಾತಕ ರೈಫಲ್‌ಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಚಿಂತನೆ ನಡೆದಿದೆ.

ಏಜೆನ್ಸೀಸ್ 29 Sep 2016, 6:09 am
ಹೊಸದಿಲ್ಲಿ: ದೇಶದ ರಕ್ಷಣಾ ಪಡೆಗಳಿಗೆ ಸಬ್‌ಮೆರಿನ್‌ಗಳು, ಕ್ಷಿಪಣಿಗಳು, ಯುದ್ಧ ವಿಮಾನಗಳ ಸೇರ್ಪಡೆ ಕ್ಷಿಪ್ರ ಗತಿಯಲ್ಲಿ ನಡೆಯುತ್ತಿದೆಯಾದರೂ ಪದಾತಿ ದಳದ ಮೂಲ ರಕ್ಷಣಾ ಸಾಮಗ್ರಿಗಳಿನ್ನೂ ಹಳೆಯದೇ ಆಗಿ ಉಳಿದಿವೆ. ಪದಾತಿ ದಳಕ್ಕೂ ಅತ್ಯಾಧುನಿಕ, ಹೊಸ ಪೀಳಿಗೆಯ ಘಾತಕ ರೈಫಲ್‌ಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಚಿಂತನೆ ನಡೆದಿದೆ.
Vijaya Karnataka Web sophisticated rifles to army
ಪದಾತಿ ದಳಕ್ಕೂ ಬರಲಿವೆ ಅತ್ಯಾಧುನಿಕ ರೈಫಲ್‌ಗಳು


ಅತ್ಯಾಧುನಿಕ ರೈಫಲ್‌ಗಳ ಖರೀದಿ ಸಂಬಂಧ ಮುಂದಿನ ವರ್ಷದ ಏಪ್ರಿಲ್‌ನಲ್ಲಿ ಜಾಗತಿಕವಾಗಿ ಟೆಂಡರ್‌ ಕರೆಯುವ ಸಾಧ್ಯತೆಗಳಿದ್ದು, ಇದಕ್ಕೆ ಪೂರ್ವಭಾವಿಯಾಗಿ ರೈಫಲ್‌ಗಳ ತಾಂತ್ರಿಕ ಸಾಮರ್ಥ್ಯ‌ ಮತ್ತು ಮಾನದಂಡಗಳ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಸುಮಾರು 6647 ಕೋಟಿ ರೂ. ಮೊತ್ತದ (1 ಬಿಲಿಯನ್‌ ಡಾಲರ್‌) ಈ ವಹಿವಾಟಿನ ಕುರಿತು ಅಂತಾರಾಷ್ಟ್ರೀಯ ಕಂಪನಿಗಳಿಂದ ರಕ್ಷಣಾ ಸಚಿವಾಲಯವು ಆರ್‌ಎಫ್‌ಐ (ರಿಕ್ವೆಸ್ಟ್‌ ಫಾರ್‌ ಇನ್‌ಫಾರ್ಮೆಷನ್‌) ಹೊರಡಿಸಿದೆ. ಈ ಟೆಂಡರ್‌ನಲ್ಲಿ ಅಮೆರಿಕದ ‘ಕೋಲ್ಟ್‌’, ಇಟಲಿಯ ‘ಬೆರೆಟ್ಟಾ’, ಐರೋಪ್ಯ ಒಕ್ಕೂಟದ ‘ಸಿಗ್‌ ಸೋರ್‌’, ಜೆಕ್‌ ಗಣರಾಜ್ಯದ ‘ಸೆಸಾ’್ಕ, ಇಸ್ರೇಲ್‌ನ ‘ಇಸ್ರೇಲ್‌ ವೆಪನ್‌ ಇಂಡಸ್ಟ್ರಿ’ ಪಾಲ್ಗೊಳ್ಳುವ ನಿರೀಕ್ಷೆ ಇದೆ.

12 ಲಕ್ಷ ಯೋಧರು ಹಾಗೂ ಅಧಿಕಾರಿಗಳ ಬಲವನ್ನು ಹೊಂದಿರುವ ಭಾರತೀಯ ಸೇನೆಗೆ ಸುಮಾರು 4 ಲಕ್ಷಕ್ಕೂ ಹೆಚ್ಚು ಅತ್ಯಾಧುನಿಕ ರೈಫಲ್‌ಗಳ ಅಗತ್ಯವಿದೆ. ಬಿಡ್‌ನಲ್ಲಿ ಯಶಸ್ವಿಯಾಗುವ ಕಂಪನಿಯಿಂದ ಮೊದಲನೇ ಹಂತದಲ್ಲಿ 65 ಸಾವಿರ ಬಂದೂಕುಗಳನ್ನು ಆಮದು ಮಾಡಿಕೊಂಡು, ನಂತರದಲ್ಲಿ 1,20,000 ರೈಫಲ್‌ಗಳನ್ನು ಭಾರತದಲ್ಲಿಯೇ ಉತ್ಪಾದಿಸುವ ಗುರಿ ಹೊಂದಲಾಗಿದೆ.

5.56 ಎಂ.ಎಂ. ಇನ್ಸಾಸ್‌ (ಇಂಡಿಯನ್‌ ಸ್ಮಾಲ್‌ ಆರ್ಮ್ಸ್‌ ಸಿಸ್ಟಮ್‌) ರೈಫಲ್‌ಗಳ ಬದಲಿಗೆ, ಗುರಿ ಸಾಧನೆಯಲ್ಲಿ ನಿಖರತೆ ಸಾಧಿಸುವ ಹೆಚ್ಚಿನ ಸಾಮರ್ಥ್ಯ‌ದ 7.62*51 ಎಂ.ಎಂ. ಬಂದೂಕುಗಳನ್ನು ಖರೀದಿಸುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಸೇನಾ ಮೂಲಗಳು ತಿಳಿಸಿವೆ.

ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಸೇನಾ ಕಮಾಂಡರ್‌ಗಳ ಸಮಾವೇಶದಲ್ಲಿ ಡಿಆರ್‌ಡಿಒಉತ್ಪಾದಿಸುತ್ತಿದ್ದ 5.56 ಎಂ.ಎಂ. ರೈಫಲ್‌ ಖರೀದಿಸಬೇಕೇ ಅಥವಾ ಶಕ್ತಿಶಾಲಿಯಾದ 7.62 ಎಂ.ಎಂ. ರೈಫಲ್‌ ಖರೀದಿಸಬೇಕೇ ಎನ್ನುವ ಕುರಿತು ಚರ್ಚೆ ನಡೆದಿತ್ತು. ಈ ಸಮಾವೇಶದಲ್ಲಿ ಡಿಆರ್‌ಡಿಒ ಮುಂದಿಟ್ಟಿದ್ದ 5.56*45 ಎಂ.ಎಂ.ನ ಎಕ್ಸ್‌ ಕ್ಯಾಲಿಬರ್‌ ರೈಫಲ್ಸ್‌ಗಳನ್ನು ತಿರಸ್ಕರಿಸಲಾಗಿತ್ತು. ಇದೀಗ ಹೆಚ್ಚಿನ ಸಾಮರ್ಥ್ಯ‌, ನಿರ್ದಿಷ್ಟ ಗುರಿ ಸಾಧನೆ ಮತ್ತು 500 ಮೀಟರ್‌ ದೂರದ ಗುರಿಯನ್ನೂ ಹೊಡೆಯಬಲ್ಲ ತಾಕತ್ತಿನ 7.62 ಎಂ.ಎಂ. ರೈಫಲ್‌ಗಳ ಖರೀದಿಗೆ ಹೆಚ್ಚು ಒಲವು ವ್ಯಕ್ತವಾಗಿದೆ ಎನ್ನಲಾಗಿದೆ.

ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ
5.56 ಎಂಎಂನ ರೈಫಲ್‌ಗಳು ಸಾಂಪ್ರದಾಯಿಕ ಯುದ್ಧಗಳಿಗೆ ಹೆಚ್ಚು ಸೂಕ್ತ. ಆದರೆ, ಅಕ್ರಮ ಪ್ರವೇಶವನ್ನು ತಡೆಯಲು, ಉಗ್ರರೊಂದಿಗೆ ಕಾದಾಡಲು 7.62 ಎಂ.ಎಂ. ರೈಫಲ್‌ಗಳೇ ಬೇಕು. ಭವಿಷ್ಯದ ಅಗತ್ಯತೆ ಮನಗೊಂಡಿರುವ ಸೇನೆಯು 7.62 ಎಂ.ಎಂ. ರೈಫಲ್‌ಗಳನ್ನು ಖರೀದಿಸುವ ಮುನ್ನ ಅವುಗಳಿಗೆ ಟೆಲಿಸ್ಕೋಪಿಕ್‌ ಸೈಟ್ಸ್‌, ಲೇಸರ್‌ ಟಾರ್ಗೆಟ್‌ ಪಾಯಿಂಟರ್ಸ್‌, ಹೋಲೋಗ್ರಾಫಿಕ್ಸ್‌ ಸಲಕರಣೆಗಳನ್ನು ಒದಗಿಸಿಕೊಡುವಂತೆ ಕಂಪನಿಗಳಿಗೆ ಮನವಿ ಮಾಡಿಕೊಳ್ಳಲಿದೆ. ಅಲ್ಲದೇ ತಿರುಚ್ಚಿಯ ಡಿಆರ್‌ಡಿಒ ಶಸ್ತ್ರಾಸ್ತ್ರ ಫ್ಯಾಕ್ಟರಿಯಲ್ಲಿ ತಯಾರಾಗುವ 40 ಎಂ.ಎಂ. ಅಂಡರ್‌ ಬ್ಯಾರೆಲ್‌ ಗ್ರೇನೇಡ್‌ ಲ್ಯಾಂಚರ್‌ಗಳಿಗೂ ಅಳವಡಿಸುವಂತೆ ಈ ರೈಫಲ್‌ಗಳನ್ನು ತಯಾರಿಸಬೇಕು ಎಂಬ ಷರತ್ತು ವಿಧಿಸಲಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ