ಆ್ಯಪ್ನಗರ

ಎಸ್ಪಿ, ಬಿಎಸ್ಪಿ ನಾಯಕರ ಸೆಳೆಯಲು ಬಿಜೆಪಿ ಪ್ಲ್ಯಾನ್‌

ಶಿವಪಾಲ್‌ ಜತೆ ಬಿಜೆಪಿ ಸೇರಲು ಅಮರ್‌ಸಿಂಗ್‌ ಚಿಂತನೆ

Vijaya Karnataka Web 28 Aug 2018, 9:20 pm
ಲಖನೌ: ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನದಲ್ಲಿ 71 ಸೀಟುಗಳನ್ನು ಗೆದ್ದು ಬೀಗಿದ್ದ ಬಿಜೆಪಿ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ತಂತ್ರ ಬದಲಿಸಿಕೊಳ್ಳಲು ಮುಂದಾಗಿದೆ.
Vijaya Karnataka Web ಎಸ್‌ಪಿ ಬಿಎಸ್‌ಪಿ
ಎಸ್‌ಪಿ ಬಿಎಸ್‌ಪಿ


ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜ ಪಕ್ಷದ ಅತೃಪ್ತ ನಾಯಕರನ್ನು ತನ್ನತ್ತ ಸೆಳೆದುಕೊಳ್ಳುವ ಕಾರ್ಯತಂತ್ರ ರೂಪಿಸುತ್ತಿದೆ. ''ಸಮಾಜವಾದಿ ಪಕ್ಷದಲ್ಲಿ ಮೂಲೆಗುಂಪಾಗಿರುವ ಮುಲಾಯಂ ಸಿಂಗ್‌ ಯಾದವ್‌ ಸಹೋದರ ಶಿವಪಾಲ್‌ ಯಾದವ್‌ ಅವರನ್ನು ಬಿಜೆಪಿ ನಾಯಕರಿಗೆ ಪರಿಚಯಿಸಿ ಸಭೆ ನಡೆಸಲು ವೇದಿಕೆ ಕಲ್ಪಿಸಿದ್ದೆ,'' ಎಂಬ ಎಸ್ಪಿಯ ಉಚ್ಛಾಟಿತ ನಾಯಕ ಅಮರ್‌ಸಿಂಗ್‌ ಹೇಳಿಕೆ ಇದನ್ನು ಪುಷ್ಟೀಕರಿಸುತ್ತದೆ.

ಉಪ ಚುನಾವಣೆಯಲ್ಲಿ ಗೋರಖ್‌ಪುರ, ಫೂಲ್ಪುರ, ಕೈರಾನ ಲೋಕಸಭೆ ಕ್ಷೇತ್ರಗಳನ್ನು ಕಳೆದುಕೊಂಡಿರುವ ಬಿಜೆಪಿ ಪ್ರತಿಪಕ್ಷಗಳಲ್ಲಿರುವ ಅತೃಪ್ತರನ್ನು ಸೆಳೆದುಕೊಂಡು ಬಲ ಹೆಚ್ಚಿಸಿಕೊಳ್ಳಲು ರಾಜಕೀಯ ತಂತ್ರಗಾರಿಕೆ ರೂಪಿಸುತ್ತಿದೆ. ಇದರ ಭಾಗವಾಗಿ ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವ ಅಮರ್‌ಸಿಂಗ್‌ ತಮ್ಮೊಂದಿಗೆ ಶಿವಪಾಲ್‌ ಅವರನ್ನೂ ಕರೆದೊಯ್ಯುವ ಸಾಧ್ಯತೆ ಇದೆ.

''ಶಿವಪಾಲ್‌ ಅವರನ್ನು ಕಮಲ ಪಾಳಯದ ನಾಯಕರೊಟ್ಟಿಗೆ ಮಾತುಕತೆ ನಡೆಸಲು ಸಭೆ ನಿಗದಿಗೊಳಿಸಿದ್ದೆ. ಆದರೆ ಶಿವಪಾಲ್‌ ಹಿಂದಡಿ ಇಟ್ಟಿದ್ದರಿಂದ ಸಭೆ ನಡೆಯಲಿಲ್ಲ,'' ಎಂದು ಅಮರ್‌ಸಿಂಗ್‌ ಮಾಧ್ಯಮಗಳ ಮುಂದೆ ಮಂಗಳವಾರ ಬಹಿರಂಗಪಡಿಸಿದ್ದಾರೆ. ಒಂದು ಹಂತದಲ್ಲಿ ಮಾಧ್ಯಮದವರು ಶಿವಪಾಲ್‌ ಏಕೆ ಬರಲಿಲ್ಲ ಎಂಬ ಪ್ರಶ್ನೆಗೆ ಅವರು 'ಇಲ್ಲೇ ಹತ್ತಿರದಲ್ಲೇ ಅವರ ನಿವಾಸವಿದೆ. ಬೇಕಿದ್ದರೆ ನೀವೇ ಹೋಗಿ ಕೇಳಿ' ಎಂದ ಅವರು, ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೋ ನೋಡೋಣ ಎಂದರು. ಅವರ ಈ ಹೇಳಿಕೆಯಲ್ಲಿ ಮತ್ತೊಂದು ಬಾರಿ ಬಿಜೆಪಿ ಜತೆ ಸಭೆ ನಡೆಸುವ ಇಂಗಿತವಾಗಿತ್ತು.

ಮುಲಾಯಂ ಸಿಂಗ್‌ ಯಾದವ್‌ ಪುತ್ರ ಅಖಿಲೇಶ್‌ ಯಾದವ್‌ ಎಸ್ಪಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಶಿವಪಾಲ್‌ ಅವರಿಗೆ ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ. ಕೆಲವು ದಿನಗಳ ಹಿಂದಷ್ಟೇ ಅವರು ಇಟಾವಾದಲ್ಲಿ ''2019ರ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸೋಣ. ಒಂದೊಮ್ಮೆ ನನ್ನನ್ನು ಕಡೆಗಣಿಸಿದರೆ ದೀರ್ಘಾವಧಿಯಲ್ಲಿ ಪಕ್ಷಕ್ಕೆ ನಷ್ಟವಾಗಲಿದೆ'' ಎಂದು ಎಚ್ಚರಿಕೆ ರವಾನಿಸಿದ್ದರು.

ಅಖಿಲೇಶ್‌ ಯಾದವ್‌ ಅವರು ಅಲ್ಪಸಂಖ್ಯಾತ ಸಮುದಾಯವನ್ನು ಓಲೈಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿಯೇ ಸಮಾಜವಾದಿ ಪಕ್ಷವು 'ನಮಾಜ್‌ವಾದಿ' ಪಕ್ಷವಾಗಿ ಮಾರ್ಪಟ್ಟಿದೆ - ಅಮರ್‌ಸಿಂಗ್‌, ಎಸ್ಪಿ ಉಚ್ಛಾಟಿತ ನಾಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ