ಆ್ಯಪ್ನಗರ

ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಬುಡಕ್ಕೇ ಬಾಂಬ್!: ಉಗ್ರ ನಿಗ್ರಹ ತೀವ್ರಗೊಳಿಸಲು ದೋವಲ್ ಪ್ಲಾನ್

ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭದ್ರತಾ ಪಡೆಗಳಿಗೆ ಸಲಹೆ ನೀಡಿದ್ಧಾರೆ. ಈ ಕಾರ್ಯಾಚರಣೆ ವೇಳೆ ಸ್ಥಳೀಯರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ದೋವಲ್ ಸೂಚಿಸಿದ್ದಾರೆ

Vijaya Karnataka 26 Sep 2019, 8:48 pm
ಶ್ರೀನಗರ (ಜಮ್ಮು-ಕಾಶ್ಮೀರ): ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರು ಭದ್ರತ ಪಡೆಗಳಿಗೆ ಸೂಚನೆ ನೀಡಿದ್ದಾರೆ.
Vijaya Karnataka Web ajit doval


ಸ್ಥಳೀಯ ಆಡಳಿತ ಮತ್ತು ಭದ್ರತಾ ಪಡೆಗಳ ಮುಖ್ಯಸ್ಥರೊಂದಿಗೆ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ ದೋವಲ್‌, ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಸ್ಥಳೀಯರಿಗೆ ತೊಂದರೆಯಾಗದಂತೆ ಎಚ್ಚರವಹಿಸಬೇಕು ಎಂದು ನಿರ್ದೇಶನ ನೀಡಿದರು.

ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ ನಂತರ ಇದು ದೋವಲ್‌ ಅವರ ಎರಡನೇ ಭೇಟಿ. ಸರಕಾರ 370 ವಿಧಿ ರದ್ದತಿ ನಿರ್ಧಾರ ಘೋಷಿಸಿದ ಬೆನ್ನಲ್ಲೇ ಕಣಿವೆ ರಾಜ್ಯಕ್ಕೆ ತೆರಳಿದ್ದ ದೋವಲ್‌, 11 ದಿನ ಕಾಶ್ಮೀರದಲ್ಲಿ ವಾಸ್ತವ್ಯ ಹೂಡಿದ್ದರು.

ಪಾಕ್‌ ಪೋಷಿತ ಉಗ್ರ ಸಂಘಟನೆಗಳ ಪ್ರಮುಖ ಮುಖಂಡರು ಹಾಗೂ ಅವರ ಸಹಚರರು ಯಾವ ಮೂಲೆಯಲ್ಲಿಅಡಗಿದ್ದರೂ ಪತ್ತೆ ಮಾಡಬೇಕು. ಇಂತಹ ಕಾರ್ಯಾಚರಣೆ ವೇಳೆ ಜನಸಾಮಾನ್ಯರ ದಿನನಿತ್ಯದ ಕೆಲಸಗಳು ಹಾಗೂ ಉದ್ಯೋಗಕ್ಕೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಜತೆಗೆ ಉಗ್ರರ ಬೆದರಿಕೆಗಳಿಂದ ಕಣಿವೆ ಜನರು ವ್ಯಾಪಾರ ವಹಿವಾಟುಗಳನ್ನು ಬಂದ್‌ ಮಾಡದಂತೆಯೂ ನೋಡಿಕೊಳ್ಳಬೇಕು ಎಂದು ದೋವಲ್‌ ಸೂಚನೆ ನೀಡಿದರು.

ಸಭೆಯಲ್ಲಿ ದೋವಲ್‌ ವಿಶೇಷ ಸ್ಥಾನಮಾನ ರದ್ದತಿ ನಂತರ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಆರೋಗ್ಯ ಸೇವೆಗಳು, ಕಣಿವೆ ರಾಜ್ಯದ ವ್ಯಾಪಾರಿಗಳ ಮುಖ್ಯ ಉದ್ಯಮವಾದ ಸೇಬು ಮಾರಾಟ ಹಾಗೂ ವರ್ಗಾವಣೆಗೆ ಆದಷ್ಟು ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಲೆಫ್ಟಿನೆಂಟ್‌ ಗವರ್ನರ್‌ಗಳು ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಅ.31ರಂದು ಜಮ್ಮು-ಕಾಶ್ಮೀರ ಮತ್ತು ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳು ವಿಧ್ಯುಕ್ತವಾಗಿ ಅಸ್ತಿತ್ವಕ್ಕೆ ಬರಲಿವೆ.

370 ರದ್ದತಿಗೆ ಕಾಶ್ಮೀರಿಗಳ ಸಂತಸ

370ನೇ ವಿಧಿ ರದ್ದುಪಡಿಸಿದ ಕೇಂದ್ರ ಸರಕಾರದ ಕ್ರಮದ ಕುರಿತು ಜಮ್ಮು-ಕಾಶ್ಮೀರದ ಜನರಿಗೆ ಅಸಮಾಧಾನ ಇಲ್ಲ. ಅದರಲ್ಲಿಯೂ ಕಾಶ್ಮೀರದ ಜನ ಸಹ ಖುಷಿಯಾಗಿದ್ದಾರೆ. ಆದರೆ ಅವರಿಗೆ ತಮ್ಮ ಭೂಮಿ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಏಕೆಂದರೆ ಸ್ಥಳೀಯರಿಗೆ ವಿಶೇಷಾಧಿಕಾರ ನೀಡುವ 35ಎ ವಿಧಿ ರದ್ದತಿಯಿಂದ ಜಮ್ಮು-ಕಾಶ್ಮೀರದಲ್ಲಿ ಯಾರು ಬೇಕಾದರೂ ಭೂಮಿ ಖರೀದಿಸಬಹುದಾಗಿದೆ. ಈ ಆತಂಕವನ್ನು ಕೇಂದ್ರ ಸರಕಾರ ಹೋಗಲಾಡಿಸಬೇಕು ಎಂದು ವಸ್ತುಸ್ಥಿತಿ ಅಧ್ಯಯನ ನಡೆಸಿದ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಭಾರತದ ವಿರುದ್ಧ ಐಸಿಸ್, ಅಲ್ ಖೈದಾ ಹೊಸ ಸಂಚು!: ಇಸ್ರೇಲ್ ಪ್ರಜೆಗಳೇ ಉಗ್ರರ ಟಾರ್ಗೆಟ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ