ಆ್ಯಪ್ನಗರ

ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ಪೌರತ್ವ ಸಿಂಧುತ್ವ

"ಈ ಕಾನೂನು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಧರ್ಮದ ಆಧಾರದಲ್ಲಿ ನಿರ್ದಿಷ್ಟ ಕೋಮಿನವರನ್ನು ಕಾಯಿದೆ ವ್ಯಾಪ್ತಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ. 1985ರ ಅಸ್ಸಾಂ ಒಪ್ಪಂದದ ಉಲ್ಲಂಘನೆಯಾಗಿದೆ. ಜಾತ್ಯತೀತ ಮೌಲ್ಯಗಳಿಗೆ ಘಾಸಿ ಉಂಟು ಮಾಡುತ್ತದೆ,'' ಎಂದು ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಹೇಳಿವೆ.

Vijaya Karnataka 16 Dec 2019, 10:35 pm

  • ಶಿವಾನಂದ ಹಿರೇಮಠ
ಹೊಸದಿಲ್ಲಿ: ಪಶ್ಚಿಮ ಬಂಗಾಳ, ದಿಲ್ಲಿ ಸೇರಿ ದೇಶದ ಹಲವು ಕಡೆ ಭಾರಿ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯಿದೆ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. ಕಾಂಗ್ರೆಸ್‌ ಹಾಗೂ ತ್ರಿಪುರಾದ ಕೊನೆಯ ಮಹಾರಾಜ ಪ್ರದ್ಯುತ್‌ ಕಿಶೋರ್‌ ದೇಬ್‌ ಬರ್ಮನ್‌ ಸಲ್ಲಿಸಿರುವ ಅರ್ಜಿಗಳ ಪ್ರತ್ಯೇಕ ವಿಚಾರಣೆಗೆ ನಿರಾಕರಿಸಿರುವ ಸಿಜೆಐ ಎಸ್‌.ಎ. ಬೊಬ್ಡೆ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ಎಲ್ಲ ಅರ್ಜಿಗಳ ವಿಚಾರಣೆಯನ್ನೂ ಬುಧವಾರ (ಡಿ.18) ನಡೆಸುವುದಾಗಿ ಹೇಳಿದೆ. ಕಾಂಗ್ರೆಸ್‌ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು ಈ ಎರಡೂ ಅರ್ಜಿಗಳ ತುರ್ತು ವಿಚಾರಣೆಗೆ ಆಗ್ರಹಿಸಿದಾಗ ನ್ಯಾಯಪೀಠವು, ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ ಸೇರಿ ಅನೇಕ ಪಕ್ಷಗಳು ಇದೇ ವಿಚಾರದಲ್ಲಿ ಮನವಿ ಸಲ್ಲಿಸಿವೆ. ಎಲ್ಲಾ ಅರ್ಜಿಗಳನ್ನೂ ಬುಧವಾರವೇ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿತು.
Vijaya Karnataka Web Supre Court


2014ರ ಡಿಸೆಂಬರ್‌ 31ಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಿಂದ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್‌, ಬೌದ್ಧ, ಪಾರ್ಸಿ, ಜೈನ ಹಾಗೂ ಕ್ರಿಶ್ಚಿಯನ್‌ ಸಮುದಾಯದವರಿಗೆ ಭಾರತೀಯ ಪೌರತ್ವ ನೀಡುವುದು ಹೊಸ ಪೌರತ್ವ ಕಾಯಿದೆಯ ಉದ್ದೇಶವಾಗಿದೆ. ಇಂತಹ ವಲಸಿಗರಿಗೆ ಈ ಮೊದಲು ಪೌರತ್ವ ಸಿಗಲು ಇದ್ದ 11 ವರ್ಷಗಳ ಕಾಲ ಭಾರತದಲ್ಲಿ ನೆಲೆಸಿರಬೇಕೆಂಬ ನಿಯಮದ ಮಿತಿಯನ್ನು ಈಗ 5 ವರ್ಷಕ್ಕೆ ಇಳಿಸಲಾಗಿದೆ.

''ಈ ಕಾನೂನು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಧರ್ಮದ ಆಧಾರದಲ್ಲಿ ನಿರ್ದಿಷ್ಟ ಕೋಮಿನವರನ್ನು ಕಾಯಿದೆ ವ್ಯಾಪ್ತಿಯಿಂದ ಉದ್ದೇಶಪೂರ್ವಕವಾಗಿ ಹೊರಗಿಡಲಾಗಿದೆ. 1985ರ ಅಸ್ಸಾಂ ಒಪ್ಪಂದದ ಉಲ್ಲಂಘನೆಯಾಗಿದೆ. ಜಾತ್ಯತೀತ ಮೌಲ್ಯಗಳಿಗೆ ಘಾಸಿ ಉಂಟು ಮಾಡುತ್ತದೆ,'' ಎಂದು ಪ್ರತಿಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳಲ್ಲಿ ಹೇಳಿವೆ.

ಸರಕಾರ ಬೇಕಿದ್ದರೂ ವಜಾಗೊಳಿಸಿ, ಸಿಎಎಗೆ ಅವಕಾಶ ನೀಡಲ್ಲ: ಗುಡುಗಿದ ದೀದಿ

18 ಅರ್ಜಿ ಸಲ್ಲಿಕೆ: ಹೊಸ ಕಾನೂನಿನ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್‌, ಟಿಎಂಸಿ, ಅಸ್ಸಾಂ ಗಣ ಪರಿಷತ್‌, ಎಐಎಂಐಎಂ, ಐಯುಎಂಎಲ್‌, ಪೀಸ್‌ ಪಾರ್ಟಿ ಸೇರಿ ವಿವಿಧ ಪಕ್ಷ/ಎನ್‌ಜಿಒ/ಒಕ್ಕೂಟಗಳಿಂದ ಒಟ್ಟು 18 ಅರ್ಜಿ ಗಳು ಸಲ್ಲಿಕೆಯಾಗಿವೆ.

ಕಾನೂನಿಗೆ ವಿರೋಧವೇಕೆ?

* ಪೌರತ್ವ ಕಾನೂನು ಜಾರಿಯಿಂದ 14 ಮತ್ತು 21ನೇ ಪರಿಚ್ಛೇದದಡಿ ಸಂವಿಧಾನ ನೀಡಿರುವ ಜೀವಿಸುವ ಹಕ್ಕು ಮತ್ತು ಸಮಾನತೆಯ ಉಲ್ಲಂಘನೆ ಆರೋಪ.

* ಅಸ್ಸಾಂ ಸ್ಟೂಡೆಂಟ್‌ ಯೂನಿಯನ್‌, ಅಸ್ಸಾಂ ಗಣ ಸಂಗ್ರಾಮ್‌ ಪರಿಷತ್‌ ಮತ್ತು ಕೇಂದ್ರ ಸರಕಾರದ ನಡುವೆ 1985ರ ಆಗಸ್ಟ್‌ನಲ್ಲಿ ನಡೆದ ಒಪ್ಪಂದದ ಕಡೆಗಣನೆ.

* ಧರ್ಮದ ಆಧಾರದಲ್ಲಿನಿರ್ದಿಷ್ಟ ಕೋಮಿನವರನ್ನು ಕಾಯಿದೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಸಂವಿಧಾನದ ಜಾತ್ಯತೀತ ಮೌಲ್ಯಗಳಿಗೆ ಹಾನಿ.

* ಅಂತಾರಾಷ್ಟ್ರೀಯ ಒಪ್ಪಂದಗಳ ಮೂಲಕ ಭಾರತ ಅಂಗೀಕರಿಸಿದ ಹಲವು ನಿಯಮಾವಳಿಗಳ ಉಲ್ಲಂಘನೆ ಆರೋಪ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ