ಆ್ಯಪ್ನಗರ

ಸವಾಲು ಸ್ವೀಕರಿಸುವ ನಾಯಕಿಯಾಗಿದ್ದರು ಸುಷ್ಮಾ

ಸಂಪುಟದ ಸಂತಾಪ: ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸುಷ್ಮಾ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದೆ.

PTI 14 Aug 2019, 5:00 am
ಹೊಸದಿಲ್ಲಿ: ಉತ್ತಮ ವಾಗ್ಮಿ ಎನಿಸಿದ್ದ ವಿದೇಶಾಂಗ ವ್ಯವಹಾರಗಳ ಖಾತೆ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಪ್ರಭಾವಿ ಹಾಗೂ ಸ್ಫೂರ್ತಿಯ ನಾಯಕಿ ಎನಿಸಿಕೊಂಡಿದ್ದರು. ಸವಾಲುಗಳನ್ನು ಸ್ವೀಕರಿಸಲೂ ಅವರು ಸದಾ ಸಿದ್ಧರಾಗಿರುತ್ತಿದ್ದರು ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಅಗಲಿದ ಬಿಜೆಪಿ ನಾಯಕಿಯ ಗುಣಗಾನ ಮಾಡಿದ್ದಾರೆ.
Vijaya Karnataka Web sushma


''ಪ್ರಖರ ಭಾಷಣಗಳನ್ನು ಮಾಡುತ್ತಿದ್ದ ಸುಷ್ಮಾಜೀ ಸವಾಲುಗಳನ್ನು ಸ್ವೀಕರಿಸಲು ಹಿಂಜರಿಯುತ್ತಿರಲಿಲ್ಲ. ನನಗಿನ್ನೂ ಚೆನ್ನಾಗಿ ನೆನಪಿದೆ, 1999ರಲ್ಲಿ ಕರ್ನಾಟಕದ ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕಣಕ್ಕಿಳಿಯುವಂತೆ ನಾನು ಹಾಗೂ ವೆಂಕಯ್ಯ ನಾಯ್ಡು ಅವರು ಸುಷ್ಮಾ ಅವರಲ್ಲಿ ಮನವಿ ಮಾಡಿಕೊಂಡಾಗ ಅವರು ಅದನ್ನು ಬಹಳ ವಿಶ್ವಾಸದಿಂದ ಸ್ವೀಕರಿಸಿದ್ದರು. ಸೋಲು-ಗೆಲುವು ಬೇರೆ ಮಾತು. ಆದರೆ ಸವಾಲುಗಳಿಗೆ ಅವರು ಎಂದಿಗೂ ಹೆದರುತ್ತಿರಲಿಲ್ಲ,'' ಎಂದು ಮೋದಿ ಮಂಗಳವಾರ ನಡೆದ ವಿಶೇಷ ಸಂತಾಪ ಸಭೆಯಲ್ಲಿ ನೆನಪಿಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಸುಷ್ಮಾ ಸ್ವರಾಜ್‌ ಕಡಿಮೆ ಅಂತರದಲ್ಲಿ ಸೋತಿದ್ದರೂ ಬಳ್ಳಾರಿ ಜನತೆಯ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

''ಶಿಸ್ತು ಹಾಗೂ ಪಾರದರ್ಶಕತೆ ಸುಷ್ಮಾ ಅವರಲ್ಲಿ ಮೇಳೈಸಿತ್ತು. ಯಾವುದೇ ಖಾತೆಯ ಜವಾಬ್ದಾರಿ ನೀಡಿದರೂ ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಅವರದ್ದು ಮಾನವೀಯತೆಗೆ ಮಿಡಿಯುವ ಹೃದಯ. ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿದ್ದ ಸಂದರ್ಭದಲ್ಲಿ ಟ್ವಿಟರ್‌ ಮೂಲಕ ತಕ್ಷಣವೇ ಸ್ಪಂದಿಸುವ ಮೂಲಕ ಲಕ್ಷಾಂತರ ಜನರ ಪ್ರೀತಿ ಗಳಿಸಿದ್ದರು,'' ಎಂದು ಮೋದಿ ಹೊಗಳಿದ್ದಾರೆ.

ಸಂಪುಟದ ಸಂತಾಪ: ಮಂಗಳವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸುಷ್ಮಾ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ