ಆ್ಯಪ್ನಗರ

ಲೆಕ್ಕವಿಲ್ಲದಷ್ಟು ಜೀವ ರಕ್ಷಣೆ: ಕೇರಳಿಗರ ಪಾಲಿನ ಸೂಪರ್ ಹೀರೋಗಳಿವರು

ಹಿಂದೆಂದೂ ಕಾಣದ ಭಾರಿ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿರುವ ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೀನುಗಾರರು ನಿಜಕ್ಕೂ ಸೂಪರ್ ಹೀರೋಗಳೆನಿಸಿದ್ದಾರೆ.

TIMESOFINDIA.COM 20 Aug 2018, 3:38 pm
ತಿರುವನಂತಪುರಂ: ಹಿಂದೆಂದೂ ಕಾಣದ ಭಾರಿ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿರುವ ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೀನುಗಾರರು ನಿಜಕ್ಕೂ ಸೂಪರ್ ಹೀರೋಗಳೆನಿಸಿದ್ದಾರೆ. ಅಪರಿಚಿತ ಪ್ರದೇಶಗಳಲ್ಲಿ, ನೀರಿನ ಆಳವರಿಯದ ಸಂದರ್ಭಗಳಲ್ಲೂ ಪ್ರಾಣಾಪಾಯವನ್ನು ಲೆಕ್ಕಿಸದೆ ತಮ್ಮ ಕೌಶಲ್ಯ ಮತ್ತು ಅದೃಷ್ಟವನ್ನು ನಂಬಿಕೊಂಡು ರಕ್ಷಣಾ ಕಾರ್ಯಾಚರಣೆಗಿಳಿಯುವ ಇವರು ಬದುಕುಳಿದವರನ್ನು ಸುರಕ್ಷಿತವಾಗಿ ಕರೆ ತರುವ ಮಹಾತ್ಕಾರ್ಯದಲ್ಲಿ ತೊಡಗಿದ್ದಾರೆ.
Vijaya Karnataka Web Kerala Flood



ಪರಿಸ್ಥಿತಿ ಎಷ್ಟೇ ಕ್ಲಿಷ್ಟವಾಗಿದ್ದರೂ ಸಹ ವಿಪತ್ತು ಹೆಚ್ಚುತ್ತಿರುವಾಗ ತಡ ಮಾಡುವ ಹಾಗಿಲ್ಲ. ಅಂತಹ ಸನ್ನಿವೇಶ ಪದೇ ಪದೇ ಎದುರಾಗುತ್ತದೆ. ನೀರಿನ ಸೆಳೆತಕ್ಕೆ ದೋಣಿಗಳು ನಿಯಂತ್ರಣಕ್ಕೆ ಸಿಗದಿದ್ದರೂ, ರಬ್ಬರ್ ಮರಗಳ ಕೊಂಬೆಗಳನ್ನು, ವಿದ್ಯುತ್ ತಂತಿಗಳನ್ನು ಹಿಡಿದುಕೊಂಡು ನಾವು ಅದನ್ನು ನಿಭಾಯಿಸಬೇಕಾಗುತ್ತದೆ, ಎನ್ನುತ್ತಾನೆ ವಲಿಯಾವೇಲಿ ಮೂಲದ ಮೀನುಗಾರ.

ಕಾಲಿಡಲು ಬೆನ್ನನ್ನೇ ಮೆಟ್ಟಿಲಾಗಿಸಿದ

ನೆರೆ ಸಂತ್ರಸ್ತರು ರಕ್ಷಣಾ ಬೋಟ್ ಹತ್ತುವಾಗ ಮೆಟ್ಟಿಲಾಗಿ ಬೆನ್ನು ಬಾಗಿಸಿ ನೀಡಿದ ಮೀನುಗಾರನೊಬ್ಬನ ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.ನೀರಲ್ಲಿ ಬಾಗಿ ತನ್ನ ಮೇಲೆ ಕಾಲಿಟ್ಟು ಬೋಟ್ ಹತ್ತುವಂತೆ ಹೇಳಿದ ಆ ಯುವಕ ತಾನೂರ್ ನಿವಾಸಿ ಜೈಸಲ್ ಕೆ ಪಿ. ಕೇರಳ ಪ್ರವಾಹ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ವಯಂ ಸೇವಕರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜೈಸಲ್, 2002ರಿಂದಲೂ ವಿಪತ್ತು ಪರಿಹಾರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಮೀನುಗಾರರಾಗಿರುವ ಅವರು ಮುದ್ದಾದ ಮೂರು ಮಕ್ಕಳ ತಂದೆಯಾಗಿದ್ದಾರೆ. ತಮ್ಮ ವೀಡಿಯೋ ವೈರಲ್ ಆಗಿದ್ದಕ್ಕೆ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವೀಡಿಯೋ ವೈರಲ್ ಆದಾಗಿನಿಂದ ನನಗೆ ಫೋನ್ ಕೆಳಗಿಡಲಾಗದಷ್ಟು ಫೋನ್ ಕರೆಗಳು ಬರುತ್ತಿವೆ. ಪರಿಹಾರ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದರಲ್ಲೇನೂ ದೊಡ್ಡತನವಿಲ್ಲ. ಇದು ನನ್ನ ಸಾಮಾಜಿಕ ಜವಾಬ್ದಾರಿ, ಕರ್ತವ್ಯ, ಎನ್ನುತ್ತ ಮತ್ತಷ್ಟು ವಿಶಾಲ ಹೃದಯಿ ಎನಿಸುತ್ತಾರೆ.


ನಸುಕಿನಿಂದ ರಾತ್ರಿಯವರೆಗೂ ಬಿಡುವಿಲ್ಲದ ಕಾರ್ಯಾಚರಣೆ

ಎರ್ನಾಕುಲಂನ ಹಳ್ಳಿಗಳಲ್ಲಿ ರಕ್ಷಣಾ ಕಾರ್ಯಾಚರಣೆಗಿಳಿದಿರುವ ಮೀನುಗಾರರ ತಂಡದ ಸದಸ್ಯ ಡೊಮಿನಿಕ್ ಥಾಮಸ್ ತಮ್ಮ ಅನುಭವವನ್ನು ಹೀಗೆ ಹಂಚಿಕೊಳ್ಳುತ್ತಾರೆ: ನಾವು ಅಲಂಗದ್ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪ್ರತಿಯೊಂದು ಮನೆಗಳಿಗೂ ಭೇಟಿ ಕೊಟ್ಟಿದ್ದೇವೆ. ಮುಂಜಾನೆಯಿಂದ ರಾತ್ರಿ 11.30ರವರೆಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದೇವೆ. ಕೆಲವು ಮನೆಗಳಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯೂ ಕಾಣುತ್ತಿರಲಿಲ್ಲ. ಆದರೂ ನಾವು ಹೊರಗೆ ನಿಂತು ಅವರನ್ನು ಕರೆಯಬೇಕಿತ್ತು. ಬಳಿಕ ಮನೆಯೊಳಗೆ ಅವರು ಸಿಕ್ಕಿ ಹಾಕಿಕೊಂಡಿರಬಹುದೇ ಎಂದು ನೋಡಲು ಈಜಿಕೊಂಡು ಹೋಗಬೇಕಾಗುತ್ತಿತ್ತು. ಈ ಕಾರ್ಯಾಚರಣೆಯಲ್ಲಿ ನಾವು ತುಂಬು ಗರ್ಭಿಣಿಯನ್ನು ರಕ್ಷಿಸಿದ್ದೆವು. ಸಹಾಯ ಬೇಕೆಂದು ನಾವು ಕೂಗಿ ಕೇಳಿದರೂ ಉತ್ತರಿಸಲಾಗದ ಅಸ್ವಸ್ಥ ಸ್ಥಿತಿಯಲ್ಲಿ ಅವಳಿದ್ದಳು.

ಬೆಚ್ಚಿಬೀಳಿಸುವ ಕರಾಳ ನೆನಪು

ಈ ಕಾರ್ಯಾಚರಣೆಯ ಕರಾಳ ನೆನಪುಗಳನ್ನು ಬಿಚ್ಚಿಡುವ ಇನ್ನೊಬ್ಬ ಮೀನುಗಾರರು ಮಂಜಲಿ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವಾಗ ಮೃತ ದೇಹವೊಂದು ರಕ್ಷಣೆಗಾಗಿ ಮೆಟ್ಟಿಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡ ಸ್ಥಿತಿಯಲ್ಲಿದ್ದುದನ್ನು ಸ್ಮರಿಸುತ್ತಾರೆ.


ದೃಷಿ ಹಾಯಿಸಿದಲೆಲ್ಲ ನೀರು, ಪ್ರವಾಹಕ್ಕೆ ಎದುರಾಗಿ ಈಜಲೇಬೇಕು

ಫೋನ್ ಸಂಪರ್ಕವಿಲ್ಲದಿರುವುದು ಮತ್ತು ಅಪರಿಚಿತ ಪ್ರದೇಶಗಳು ರಕ್ಷಣಾ ಕಾರ್ಯಾಚರಣೆಗೆ ಬಹುದೊಡ್ಡ ತೊಡಕಾಗಿವೆ. ನೀರಿನ ಹರಿವು ರಭಸವಾಗಿರುವುದು ನಾವು ಎದುರಿಸುತ್ತಿರುವ ದೊಡ್ಡ ಸವಾಲು. ಪ್ರವಾಹಕ್ಕೆ ಎದುರಾಗಿ ಈಜಿ , ಭೂ ಕುಸಿತವಾಗುತ್ತಿದ್ದರೂ ಲೆಕ್ಕಿಸದೆ ಮುನ್ನುಗ್ಗಬೇಕು. ಕೆಲವೊಮ್ಮೆ ಪ್ರವಾಹದಲ್ಲಿ ಏರುಪೇರಾಗುತ್ತದೆ. ರಕ್ಷಣೆಗಾಗಿ ಎತ್ತ ಸಾಗಬೇಕು ಎಂಬುದೇ ಅರ್ಥವಾಗುವುದಿಲ್ಲ, ನೋಡಿದ್ದಲ್ಲೆಲ್ಲ ನೀರು. ಸ್ಥಳವನ್ನು ಗುರುತಿಸಲು ಯಾವುದೇ ಲ್ಯಾಂಡ್ ಮಾರ್ಕ್‌ಗಳಿರುವುದಿಲ್ಲ- ಜಾಕ್ಸನ್ ಅಲಪ್ಪುಜಾದಲ್ಲಿ ರಕ್ಷಣಾ ಕಾರ್ಯಾಚರಣೆಗಿಳಿದಿದ್ದ ಮೀನುಗಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ