ಆ್ಯಪ್ನಗರ

ಇಂದು ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ

ಜುಲೈ 15ರಂದು ಉಡ್ಡಯನಕ್ಕೆ 56 ನಿಮಿಷ ಬಾಕಿ ಇರುವಾಗ ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದದ್ದರಿಂದ ಉಡಾವಣೆಯನ್ನು ರದ್ದುಪಡಿಸಲಾಗಿತ್ತು. ಇದಾದ ಮೂರು ದಿನಗಳ ಬಳಿಕ ಹೊಸ ದಿನಾಂಕವನ್ನು ಇಸ್ರೊ ಪ್ರಕಟಿಸಿತ್ತು.

Agencies 22 Jul 2019, 5:00 am
ಶ್ರೀಹರಿಕೋಟ: ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದ್ದ ಭಾರತದ ಮಹಾತ್ವಾಕಾಂಕ್ಷೆಯ ಚಂದ್ರಯಾನ-2 ಗಗನನೌಕೆಯ ಮರು ಉಡ್ಡಯನಕ್ಕೆ ಇಸ್ರೊ ಸಜ್ಜಾಗಿದೆ.
Vijaya Karnataka Web taking billion dreams to moon chandrayaan 2 to be launched monday
ಇಂದು ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ


ಜುಲೈ 15ರಂದು ಉಡ್ಡಯನದ ವೇಳೆ ಕಂಡು ಬಂದಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು, ಮಂಗಳವಾರ ಮಧ್ಯಾಹ್ನ 2.43ಕ್ಕೆ ವ್ಯೋಮನೌಕೆಯನ್ನು ಹೊತ್ತ 'ಬಾಹುಬಲಿ' ರಾಕೆಟ್‌ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಬಾನಂಗಳಕ್ಕೆ ಜಿಗಿಯಲಿದೆ. ಭಾನುವಾರ ಸಂಜೆ 6.43ರಿಂದಲೇ ಕೌಂಟ್‌ಡೌನ್‌ ಆರಂಭವಾಗಿದೆ.

''ಹಿಂದೆ ಕಾಣಿಸಿಕೊಂಡಿದ್ದ ಎಲ್ಲ ತಾಂತ್ರಿಕದೋಷಗಳನ್ನು ನಿವಾರಣೆ ಮಾಡಲಾಗಿದೆ. ಜತೆಗೆ ಪ್ರಾಯೋಗಿಕ ಪರೀಕ್ಷೆ ಕೂಡ ನಡೆಸಲಾಗಿದೆ. ಎಲ್ಲ ಪರೀಕ್ಷೆಗಳೂ ಯಶಸ್ವಿಯಾಗಿದ್ದು, ನಾವು ಉಡಾವಣೆಗೆ ಸಿದ್ಧವಾಗಿದ್ದೇವೆ,'' ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಹೇಳಿದ್ದಾರೆ.

''ಚಂದ್ರಯಾನ-2 ಕೋಟಿ ಕೋಟಿ ಕನಸುಗಳನ್ನು ಚಂದ್ರನಲ್ಲಿಗೆ ಹೊತ್ತೊಯ್ಯಲು ಸಿದ್ಧವಾಗಿದೆ. ಅದು ಈಗ ಮೊದಲಿಗಿಂತಲೂ ಬಲಿಷ್ಠವಾಗಿದೆ. ಜು.22ರಂದು ಮಧ್ಯಾಹ್ನ 2.43ಕ್ಕೆ ಉಡ್ಡಯನದ ವೇಳೆ ನಮ್ಮ ಜತೆ ಕೈಜೋಡಿಸಿ,'' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಟ್ವೀಟ್‌ ಮೂಲಕ ಮನವಿ ಮಾಡಿದೆ.

ಜುಲೈ 15ರಂದು ಉಡ್ಡಯನಕ್ಕೆ 56 ನಿಮಿಷ ಬಾಕಿ ಇರುವಾಗ ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದದ್ದರಿಂದ ಉಡಾವಣೆಯನ್ನು ರದ್ದುಪಡಿಸಲಾಗಿತ್ತು. ಇದಾದ ಮೂರು ದಿನಗಳ ಬಳಿಕ ಹೊಸ ದಿನಾಂಕವನ್ನು ಇಸ್ರೊ ಪ್ರಕಟಿಸಿತ್ತು.

ಬದಲಾವಣೆಗಳೇನು?
ತಾಂತ್ರಿಕ ದೋಷವನ್ನು ಸರಿಪಡಿಸಿದ ನಂತರ ಇಸ್ರೊ ಚಂದ್ರಯಾನ-2 ಯೋಜನೆಯಲ್ಲಿ ಕೊಂಚ ಮಾರ್ಪಾಡು ಮಾಡಿದ್ದು, ಉಪಗ್ರಹವು ಭೂಮಿಯ ಪರಧಿಯಲ್ಲಿ ಉಳಿಯುವ ಸಮಯವನ್ನು 17ರಿಂದ 23 ದಿನಕ್ಕೆ ಹೆಚ್ಚಿಸಲಾಗಿದೆ.

3,850 ಕೆ.ಜಿ
ರೋವರ್‌, ಲ್ಯಾಂಡರ್‌ ಸೇರಿದಂತೆ ಉಪಗ್ರಹದ ಒಟ್ಟು ತೂಕ

13
ರಾಕೆಟ್‌ ಹೊತ್ತೊಯ್ಯಲಿರುವ ಒಟ್ಟು ಪೆಲೋಡ್‌ಗಳ ಸಂಖ್ಯೆ

48 ದಿನ
ಭೂಮಿಯಿಂದ ಹೊರಟ ಗಗನನೌಕೆ ಚಂದ್ರನ ಮೇಲ್ಮೈ ತಲುಪಲು ತೆಗೆದುಕೊಳ್ಳುವ ಸಮಯ

978 ಕೋಟಿ ರೂ.
ಚಂದ್ರಯಾನ-2 ಯೋಜನೆಯ ಒಟ್ಟು ವೆಚ್ಚ

44 ಮೀಟರ್‌
ದೈತ್ಯ ಗಾತ್ರದಿಂದಾಗಿ 'ಬಾಹುಬಲಿ' ಎಂದೇ ಹೆಸರಾಗಿರುವ ಜಿಎಸ್‌ಎಲ್‌ವಿ ಮಾರ್ಕ್‌-3 ರಾಕೆಟ್‌ ಎತ್ತರ


ಸೆ.6ರಂದು ಚಂದ್ರನ ಅಂಗಳಕ್ಕೆ ಪದಾರ್ಪಣೆ
ಚಂದ್ರಯಾನ-2 ಉಪಗ್ರಹ ಹಾಗೂ ವ್ಯೋಮನೌಕೆಯನ್ನು ಜಿಎಸ್‌ಎಲ್‌ವಿ ಎಂಕೆ-3 ರಾಕೆಟ್‌ ಭೂಮಿಯ 170/40400 ಕಿ.ಮೀ ಕಕ್ಷೆಗೆ ತಲುಪಿಸಲಿದೆ. ಅಲ್ಲಿಂದ ಇಸ್ರೊ ವಿಜ್ಞಾನಿಗಳು ವಿವಿಧ ಹಂತಗಳಲ್ಲಿ ಬಗೆ ಬಗೆಯ ಕಸರತ್ತು ನಡೆಸಿ ಗಗನನೌಕೆಯನ್ನು ಬೇರೆ ಬೇರೆ ದಿಕ್ಕು ಮತ್ತು ಕೋನಗಳಲ್ಲಿ ಚಾಲನೆ ಮಾಡಲಿದ್ದಾರೆ. ಉಡಾವಣೆಗೊಂಡ ಮೊದಲ 23 ದಿನಗಳ ಕಾಲ ವ್ಯೋಮನೌಕೆಯು ಭೂಮಿಯ ಕಕ್ಷೆಯಲ್ಲೇ ಇರಲಿದೆ. ಬಳಿಕ ಅದನ್ನು 1.05 ಲಕ್ಷ ಕಿ.ಮೀ. ಎತ್ತರಕ್ಕೆ ಕಳುಹಿಸಲಾಗುವುದು. ಆ ಬಳಿಕ ಅದನ್ನು 'ಲೂನಾರ್‌ ಟ್ರಾನ್ಸ್‌ಫರ್‌ ಟ್ರಜೆಕ್ಟರಿ'ಗೆ ಪ್ರವೇಶಿಸುವಂತೆ ಮಾಡಲಾಗುವುದು. ನಂತರದ ಎರಡು ದಿನದಲ್ಲಿ ಅದನ್ನು ಕ್ರಮೇಣ ಚಂದ್ರನ ಸನಿಹಕ್ಕೆ ಕೊಂಡೊಯ್ಯಲಾಗುವುದು. ನಿಧಾನವಾಗಿ ಅದನ್ನು 100/100 ವರ್ತುಲ ಕಕ್ಷೆಗೆ ಸೇರಿಸಲಾಗುವುದು. ಅಲ್ಲಿ ಲ್ಯಾಂಡರ್‌ನಿಂದ ವ್ಯೋಮನೌಕೆಯು ಬೇರ್ಪಡಲಿದೆ. ಹಲವು ದಿನಗಳ ಪ್ರದಕ್ಷಣೆ ಬಳಿಕ, ಚಂದ್ರನ ದಕ್ಷಿಣ ಧ್ರುವದಿಂದ 70 ಡಿಗ್ರಿಯಲ್ಲಿ ಎರಡು ಬೃಹತ್‌ ಕಂದರಗಳ ನಡುವಿನ ಬಯಲು ಪ್ರದೇಶದಲ್ಲಿ ರೋವರ್‌ ಅನ್ನು 'ಸಾಫ್ಟ್‌' ಲ್ಯಾಂಡಿಂಗ್‌ ಮಾಡಲಾಗುವುದು. ಇದೇ ಮೊದಲ ಬಾರಿಗೆ ಸಾಫ್ಟ್‌ ಲ್ಯಾಂಡಿಂಗ್‌' ಪ್ರಕ್ರಿಯೆಗೆ ಸ್ವದೇಶಿ ತಂತ್ರಜ್ಞಾನವನ್ನು ಇಸ್ರೊ ಬಳಸಲಿದೆ. ಚಂದ್ರನ ಮೇಲೆ ಇಳಿಯುವುದಕ್ಕೂ ಮುನ್ನ ರೋವರ್‌ ಅಲ್ಲಿಂದ ಕಳುಹಿಸುವ ಚಿತ್ರಗಳನ್ನು ಆಧರಿಸಿ, ಅದು ಇಳಿಯಲು ಸುರಕ್ಷಿತ ತಾಣವನ್ನು ಇಸ್ರೊ ನಿರ್ಧರಿಸಲಿದೆ. ಸೆ.6ರಂದು ವ್ಯೋಮನೌಕೆಯು ಚಂದ್ರನ ಅಂಗಳದಲ್ಲಿ ಕಾಲಿರಿಸಬಹುದೆಂದು ಅಂದಾಜಿಸಲಾಗಿದೆ.

ವಿಶೇಷವೇನು?
ಇದುವರೆಗೂ ಯಾರೂ ಪ್ರವೇಶಿಸಿದ ಚಂದ್ರನ ದಕ್ಷಿಣ ಧ್ರುವಕ್ಕೆ ವ್ಯೋಮನೌಕೆಯನ್ನು ಕಳುಹಿಸಿ, ಅಲ್ಲಿನ ಮೇಲ್ಮೈ ಮೇಲೆ ಅಧ್ಯಯನ ನಡೆಸುವುದು ಈ ಯೋಜನೆಯ ಉದ್ದೇಶವಾಗಿದೆ. ಸದಾ ಉತ್ತರ ಧ್ರುವದ ನೆರಳಿನಲ್ಲೇ ಇರುವ ದಕ್ಷಿಣ ಧ್ರುವದಲ್ಲಿ ನೀರಿನ ಲಭ್ಯತೆ ಬಗ್ಗೆ ರೋವರ್‌ ಅಧ್ಯಯನ ನಡೆಸಲಿದೆ. ದಕ್ಷಿಣ ಧೃವದಲ್ಲಿರುವ ಚಂದ್ರಕುಳಿಗಳ ಆಳದಲ್ಲಿ ತೇವದ ಅಂಶವಿದ್ದು, ಆರಂಭದ ಸೌರ ವ್ಯವಸ್ಥೆಯ ಪಳಿಯುಳಿಕೆಗಳನ್ನೂ ಹೊಂದಿದೆ. ಈ ಬಗ್ಗೆ ಅಧ್ಯಯನ ನಡೆಸಲಾಗುವುದು ಎಂದು ಇಸ್ರೊ ಹೇಳಿದೆ.


ಆರ್ಬಿಟರ್‌, ಲ್ಯಾಂಡರ್‌ ಮತ್ತು ರೋವರ್‌
ಭಾರತೀಯ ಬಾಹ್ಯಾಕಾಶ ಯೋಜನೆಯ ಪಿತಾಮಹ ಡಾ. ವಿಕ್ರಮ್‌ ಸಾರಾಭಾಯಿ ಅವರ ಹೆಸರನ್ನು ನಾಮಕರಣ ಮಾಡಲಾದ 'ವಿಕ್ರಮ್‌ ಲ್ಯಾಂಡರ್‌', 27 ಕೆ.ಜಿ ತೂಕದ 'ಪ್ರಜ್ಞಾನ್‌' ಹೆಸರಿನ ರೋಬಾಟಿಕ್‌ ರೋವರ್‌ (6 ಚಕ್ರದ ವ್ಯೂಮನೌಕೆ) ಮತ್ತು ಇವೆರಡನ್ನೂ ಒಳಗೊಂಡ 'ಆರ್ಬಿಟರ್‌' ಅನ್ನು ರಾಕೆಟ್‌ ನಭಕ್ಕೆ ಕೊಂಡೊಯ್ಯಲಿದೆ. 'ಲ್ಯಾಂಡರ್‌' ಸಾಧನವು ವ್ಯೋಮನೌಕೆಯನ್ನು ಚಂದ್ರನ ಮೇಲೆ ಇಳಿಸಲು ನೆರವಾಗಲಿದೆ. ಚಂದ್ರನ ಮೇಲ್ಮೈಮೇಲೆ ಅಡ್ಡಾಡಿ, ಮಾಹಿತಿ ಸಂಗ್ರಹಿಸಿ ಭೂಮಿಗೆ ಕಳುಹಿಸುವ ಕೆಲಸವನ್ನು ರೋವರ್‌ ಮಾಡಲಿದೆ. ಸೌರಶಕ್ತಿಯನ್ನು ಬಳಸಿ ರೋವರ್‌ ದಿನಕ್ಕೆ ಅರ್ಧ ಕಿ.ಮೀ ಚಲಿಸಬಲ್ಲದು.

=============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ