ಆ್ಯಪ್ನಗರ

ತಮಿಳುನಾಡು ಚುನಾವಣೆ: ಅಣ್ಣಾಮಲೈ, ಕಮಲ ಹಾಸನ್, ಖುಷ್ಬೂ ಸೇರಿದಂತೆ ಪ್ರಮುಖರ ಸೋಲು!

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ ಅನೇಕ ತಾರಾ ಅಭ್ಯರ್ಥಿಗಳು ಸೋಲಿನ ಕಹಿ ಅನುಭವಿಸಿದ್ದಾರೆ. ಇದರಲ್ಲಿ ಮೊದಲ ಬಾರಿಗೆ ಕಣಕ್ಕಿಳಿಸಿದ್ದ ನಟ ಕಮಲ ಹಾಸನ್, ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಸೇರಿದ್ದಾರೆ.

Agencies 3 May 2021, 11:32 am
ಚೆನ್ನೈ: ತಮಿಳುನಾಡಿನಲ್ಲಿ ಬಹುತೇಕ ಸಮೀಕ್ಷೆಗಳು ನಿಜವಾಗಿವೆ. ಸತತ ಎರಡು ಅವಧಿಗಳಲ್ಲಿ ವಿರೋಧಪಕ್ಷದ ಸ್ಥಾನದಲ್ಲಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಜೆ. ಜಯಲಲಿತಾ ಅವರ ಗೈರುಹಾಜರಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಬೆಂಬಲದೊಂದಿಗೆ ವಿಧಾನಸಭೆ ಚುನಾವಣೆ ಎದುರಿಸಿದ್ದ ಎಐಎಡಿಎಂಕೆಗೆ ಸೋಲಿನ ಕಹಿ ಎದುರಾಗಿದೆ.
Vijaya Karnataka Web Tamil nadu election result


ತಮಿಳುನಾಡಿನ ಚುನಾವಣೆಯಲ್ಲಿ ಅನೇಕ 'ತಾರೆ'ಯರು ನೆಲಕಚ್ಚಿದ್ದಾರೆ. ಖ್ಯಾತಿ, ಅಭಿಮಾನ ಮತ್ತು ಪ್ರಬಲರ ಬೆಂಬಲ ಮತದಾರರ ಅನುಮೋದನೆ ಸಿಗುವ ಅರ್ಹತೆಯಾಗಲಾರದು ಎನ್ನುವುದಕ್ಕೆ ಇದು ಸಾಕ್ಷಿ. ನಟ ಕಮಲ ಹಾಸನ್, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ, ನಟಿ ಖುಷ್ಬೂ ಸೇರಿದಂತೆ ಅನೇಕ ಪ್ರಮುಖರು ಸೋಲು ಅನುಭವಿಸಿದ್ದಾರೆ.

ಮತ್ತೊಬ್ಬ ಸ್ಟಾರ್ ನಟ ರಜನಿಕಾಂತ್ ಅವರು ಈ ಚುನಾವಣೆಗೂ ಮುನ್ನ ತಮ್ಮದೇ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಕಾಲಿಡಲು ಸಿದ್ಧತೆ ನಡೆಸಿದ್ದರು. ಆದರೆ ಅನಾರೋಗ್ಯದ ಕಾರಣದಿಂದ ಅವರು ಚುನಾವಣಾ ರಂಗದಿಂದ ಹಿಂದೆ ಸರಿದಿದ್ದರು.

ಆಡಳಿತ ವಿರೋಧಿ ಅಲೆ ಮೆಟ್ಟಿ ನಿಂತ 3 ರಾಜ್ಯ ಸರ್ಕಾರಗಳು..! ಮಮತಾ, ಪಿಣರಾಯಿ, ಸೋನಾವಲ್‌ಗೆ ಫುಲ್‌ ಮಾರ್ಕ್ಸ್‌

ಕಮಲ ಹಾಸನ್
ಮಕ್ಕಳ್ ನೀಧಿ ಮಯ್ಯಮ್ (ಎಂಎನ್ಎಂ) ಪಕ್ಷ ಸ್ಥಾಪಿಸಿ ಭರ್ಜರಿ ಪ್ರಚಾರ ನಡೆಸಿದ್ದ ನಟ ಕಮಲ ಹಾಸನ್, ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಸ್ವತಃ ಕಮಲ ಹಾಸನ್ ಸೇರಿದಂತೆ ಪಕ್ಷದ ಯಾರೊಬ್ಬರೂ ಗೆಲುವಿನ ಆರಂಭ ಕಾಣಲು ವಿಫಲರಾಗಿದ್ದಾರೆ. ಕೊಯಮತ್ತೂರು ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಕಮಲ ಹಾಸನ್, ಬಿಜೆಪಿ ಅಭ್ಯರ್ಥಿ ವನತಿ ಶ್ರೀನಿವಾಸನ್ ಎದುರು 1,540 ಮತಗಳ ಅಲ್ಪ ಅಂತರದಿಂದ ಸೋಲು ಕಂಡಿದ್ದಾರೆ.

ಅಣ್ಣಾಮಲೈ
ತಮಿಳುನಾಡಿನಲ್ಲಿ ತೀವ್ರ ಕುತೂಹಲ ಮೂಡಿಸಿದ ಕದನಗಳಲ್ಲಿ ಅರವಕುರಿಚಿ ವಿಧಾನಸಭೆ ಕ್ಷೇತ್ರದ ಚುನಾವಣೆಯೂ ಒಂದು. ಕರ್ನಾಟಕದಲ್ಲಿ 'ಸಿಂಗಂ' ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ. ಅಣ್ಣಾಮಲೈ ಅವರು ಡಿಎಂಕೆಯ ಪ್ರಬಲ ಕೋಟೆಯಲ್ಲಿ ಪರಾಭವ ಹೊಂದಿದ್ದಾರೆ. ಅಣ್ಣಾಮಲೈ ಅವರನ್ನು ಗೆಲ್ಲಿಸಲು ಬಿಜೆಪಿ ಇಲ್ಲಿ ಭರ್ಜರಿ ಪ್ರಚಾರ ನಡೆಸಿತ್ತು. ಶಾಸಕ ಎಂ ಮುನಿರತ್ನ ಮತ್ತು ಸಂಸದ ತೇಜಸ್ವಿ ಸೂರ್ಯ ಅರವಕುರಿಚಿಯಲ್ಲಿ ಬೀಡುಬಿಟ್ಟು ಪ್ರಚಾರ ನಡೆಸಿದ್ದರು. ಆದರೆ ಅಣ್ಣಾಮಲೈ ಅವರ ಕನಸು ಭಗ್ನವಾಗಿದೆ.

ಖುಷ್ಬೂ ಸುಂದರ್
ನಟಿಯಾಗಿ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ ಖುಷ್ಬೂ ಸುಂದರ್ ಹೆಸರಿನಲ್ಲಿ ತಮಿಳುನಾಡಿನ ಜನರು ದೇವಸ್ಥಾನವನ್ನೇ ಕಟ್ಟಿಸಿದ್ದರು. ಈ ಜನಪ್ರಿಯತೆಯ ಆಧಾರದಲ್ಲಿಯೇ ರಾಜಕಾರಣಕ್ಕೂ ಬಂದ ಖುಷ್ಬೂ, ಕಾಂಗ್ರೆಸ್‌ನ ನಾಯಕಿಯಾಗಿ ಬೆಳೆಯುವ ಸೂಚನೆ ನೀಡಿದ್ದರು. ಆದರೆ ಕಳೆದ ವರ್ಷ ಕಾಂಗ್ರೆಸ್ ತೊರೆದ ಅವರು ಬಿಜೆಪಿಗೆ ಜಿಗಿದಿದ್ದರು. ಥೌಸಂಡ್ ಲೈಟ್ಸ್ ಕ್ಷೇತ್ರದಲ್ಲಿ ಖುಷ್ಬೂ ಸುಂದರ್, ಡಿಎಂಕೆ ಅಭ್ಯರ್ಥಿ ಎದುರು ಸೋಲು ಕಂಡಿದ್ದಾರೆ.

ಟಿಟಿವಿ ದಿನಕರನ್
ಎಐಎಡಿಎಂಕೆಯ ಮಾಜಿ ನಾಯಕಿ ಶಶಿಕಲಾ ನಟರಾಜನ್ ಅವರ ಸೋದರಳಿಯ, ಟಿಟಿವಿ ದಿನಕರನ್ ತಮ್ಮದೇ ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪಕ್ಷ ಸ್ಥಾಪಿಸಿದ್ದರು. 2016ರಲ್ಲಿ ಡಾ. ರಾಧಾಕೃಷ್ಣನ್ ನಗರ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಅವರು, ಈ ಬಾರಿ ಕೋವಿಲ್‌ಪಟ್ಟಿ ಕ್ಷೇತ್ರದಲ್ಲಿ ಎಐಎಡಿಎಂಕೆಯ ಕಡಂಬೂರ್ ರಾಜು ಎದುರು ಸೋಲುಂಡಿದ್ದಾರೆ.

ಮುಂದಿನ ಲೇಖನ