ಆ್ಯಪ್ನಗರ

ಜಲ್ಲಿಕಟ್ಟು: ಶಾಶ್ವತ ಪರಿಹಾರಕ್ಕೆ ಒತ್ತಾಯ

ಜನತೆಯ ಹೋರಾಟದ ಪರಿಣಾಮ ಸುಗ್ರೀವಾಜ್ಞೆ ಯ ಬಲದೊಂದಿಗೆ ಭಾನುವಾರ ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಆಚರಣೆ ನಡೆಯಿತಾದರೂ ಅದು ಯಶಸ್ವಿಯಾಗಿಲ್ಲ. ಸುಗ್ರೀವಾಜ್ಞೆ ಕೇವಲ ಕಣ್ಣೊರೆಸುವ ತಂತ್ರ. ಜಲ್ಲಿಕಟ್ಟು ಆಚರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಹಾಗೂ ಪ್ರಾಣಿ ದಯಾ ಸಂಘ 'ಪೆಟಾ' ನಿಷೇಧಕ್ಕೆ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟ ಮುಂದುವರಿದಿದೆ.

Vijaya Karnataka Web 23 Jan 2017, 7:25 am

ಮದುರೈ: ಜನತೆಯ ಹೋರಾಟದ ಪರಿಣಾಮ ಸುಗ್ರೀವಾಜ್ಞೆ ಯ ಬಲದೊಂದಿಗೆ ಭಾನುವಾರ ತಮಿಳುನಾಡಿನಾದ್ಯಂತ ಜಲ್ಲಿಕಟ್ಟು ಆಚರಣೆ ನಡೆಯಿತಾದರೂ ಅದು ಯಶಸ್ವಿಯಾಗಿಲ್ಲ. ಸುಗ್ರೀವಾಜ್ಞೆ ಕೇವಲ ಕಣ್ಣೊರೆಸುವ ತಂತ್ರ. ಜಲ್ಲಿಕಟ್ಟು ಆಚರಣೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಹಾಗೂ ಪ್ರಾಣಿ ದಯಾ ಸಂಘ 'ಪೆಟಾ' ನಿಷೇಧಕ್ಕೆ ಆಗ್ರಹಿಸಿ ರಾಜ್ಯದಾದ್ಯಂತ ಹೋರಾಟ ಮುಂದುವರಿದಿದೆ.

ಗೂಳಿ ಪಳಗಿಸುವ ಜಲ್ಲಿಕಟ್ಟು ಸ್ಪರ್ಧೆಗೆ ಹೆಸರುವಾಸಿಯಾದ ಮದುರೈನ ಅಳಂಗನಲ್ಲೂರಿನಲ್ಲಿ ಕಾರ್ಯಕ್ರಮ ಉದ್ಘಾಟಿಸಲು ಬಂದಿದ್ದ ಮುಖ್ಯಮಂತ್ರಿಗೆ ಪ್ರತಿಭಟನೆಯ ಕಾವು ತಟ್ಟಿದೆ. ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಜನರು ಪ್ರತಿಭಟಿಸಿದ ಪರಿಣಾಮ ಅವರಿಗೆ ಉದ್ಘಾಟನೆಯ ಅವಕಾಶ ಸಿಕ್ಕಿಲ್ಲ. ಅಷ್ಟೇ ಅಲ್ಲದೇ ಇಲ್ಲಿ ಜಲ್ಲಿಕಟ್ಟು ಆಚರಿಸದೇ ಜನರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿಂದ ಹಿಂದೆ ಸರಿ ಸೆಲ್ವಂ ಅವರು ದಿಂಡಿಗಲ್‌ನ ನಾತಂ ಕೋವಿಲಪಟ್ಟಿಯಲ್ಲಿ ಆಯೋಜನೆಯಾಗಿದ್ದ ಜಲ್ಲಿಕಟ್ಟು ಸ್ಪರ್ಧೆ ಉದ್ಘಾಟಿಸಲು ಬಂದಾಗ, ಅಲ್ಲೂ ಪ್ರತಿಭಟನಾಕಾರರು ಅವರನ್ನು ಹಿಂದಕ್ಕೆ ಕಳುಹಿಸಿದರು. ವಿಧಿಯಿಲ್ಲದೇ ಸ್ವಲ್ಪ ಹೊತ್ತು ಮದುರೈನ ಹೋಟೆಲೊಂದರಲ್ಲಿ ತಂಗಿ, ಬಳಿಕ ಚೆನ್ನೈಗೆ ಮರಳಿದರು.

ಮರೀನಾ ಬೀಚ್‌ನಲ್ಲಿ ಪ್ರತಿಟಭನೆ: ಜಲ್ಲಿಕಟ್ಟು ವಿವಾದಕ್ಕೆ ತಾತ್ಕಾಲಿಕ ಪರಿಹಾರ ಬೇಡ, ಶಾಶ್ವತ ಪರಿಹಾರ ಹುಡುಕಬೇಕು ಎಂದು ಆಗ್ರಹಿಸಿ ಭಾನುವಾರವೂ ಸಾವಿರಾರು ಜನರು ಚೆನ್ನೈನ ಮರೀನಾ ಬೀಚ್‌ನಲ್ಲಿ ಪ್ರತಿಭಟನೆ ನಡೆಸಿದರು. ಬೆಳಗ್ಗೆಯಿಂದಲೇ ಜನರು ಸಾಗರೋಪಾದಿಯಲ್ಲಿ ಬಂದು, ಸರಕಾರ ಹಾಗೂ ಪೇಟಾ ವಿರುದ್ಧ ಘೋಷಣೆಗಳನ್ನು ಕೂಗಿದರು. ಜನರ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕಮಲಹಾಸನ್‌, ವಿಜಯ್‌, ಸೂರ್ಯ ಸೇರಿದಂತೆ ಚಿತ್ರತಾರೆಯರು ಪೆಟಾ ವಿರುದ್ಧ ವಾಗ್ದಾಳಿ ನಡೆಸಿದರು. ಈ ಮಧ್ಯೆ ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಪ್ರತಿಭಟನಾಕಾರರಿಗೆ ಭಾನುವಾರವೂ ಸಾಥ್‌ ನೀಡಿದರು.

ಜನ ನಿರ್ಧರಿಸಿದ ದಿನ ಜಲ್ಲಿಕಟ್ಟು: ಇತ್ತ ಚೆನ್ನೈಗೆ ಮರಳುವ ಮುನ್ನ ಮದುರೈನಲ್ಲಿ ಮಾತನಾಡಿದ ಪನ್ನೀರ್‌ಸೆಲ್ವಂ, 'ಸುಗ್ರೀವಾಜ್ಞೆ ಶಾಶ್ವತ ಪರಿಹಾರವಾಗಿದ್ದು, ಅನುಮಾನ ಬೇಡ. ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಈ ಸಂಬಂಧ ಕಾನೂನು ತರಲಾಗುವುದು. ಪ್ರತಿಭಟನೆ ಕೈಬಿಡಿ,'ಎಂದು ಜನತೆಯನ್ನು ಕೋರಿಕೊಂಡರು. ಇದೇ ವೇಳೆ ಅವರು, ಅಳಂಗನಲ್ಲೂರಿನಲ್ಲಿ ಜನ ನಿರ್ಧರಿಸಿದ ದಿನದಂದು ಜಲ್ಲಿಕಟ್ಟು ಆಯೋಜಿಸಲಾಗುವುದು ಎಂದು ಹೇಳಿದರು.

ಮೂರು ಸಾವು: ಈ ಮಧ್ಯೆ ತಿರುಚರಪಳ್ಳಿಯ ಮನಪರೈನ ಪುದುಪಟ್ಟಿ ಗ್ರಾಮವೂ ಸೇರಿದಂತೆ ಹಲವು ಕಡೆ ಜಲ್ಲಿಕಟ್ಟು ಸ್ಪರ್ಧೆ ನಡೆದಿದೆ. ಮದುರೈನಲ್ಲಿ ಪ್ರತಿಭಟನಾಕಾರ ಚಂದ್ರಮೋಹನ್‌ ನಿರ್ಜಲೀಕರಣದಿಂದ ಮೃತಪಟ್ಟಿದ್ದರೆ, ಪುದುಕೋಟೆ ಜಿಲ್ಲೆಯ ರಪೂಸಲ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಗೂಳಿ ಹಾಯ್ದು ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ.

Vijaya Karnataka Web tamilnadu people seeking permanent solution for jallikattu
ಜಲ್ಲಿಕಟ್ಟು: ಶಾಶ್ವತ ಪರಿಹಾರಕ್ಕೆ ಒತ್ತಾಯ


ಹೋರಾಟದಿಂದ ದೂರ ಸರಿದ ಆದಿ

ಜಲ್ಲಿಕಟ್ಟು ಹೋರಾಟದ ಪರ 'ತಕಾರು ತಕಾರು' ಕ್ರಾಂತಿ ಗೀತೆಗೆ ಸಂಗೀತ ಆಯೋಜಿಸಿ ಸದ್ದು ಮಾಡಿದ್ದ ಸಂಗೀತ ನಿರ್ದೇಶಕ ಆದಿ(ಆದಿತ್ಯ ರಾಮಚಂದ್ರನ್‌ ವೆಂಕಟಪತಿ) ಹೋರಾಟದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. 'ಮರೀನಾ ಬೀಚ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ದೇಶ ವಿರೋಧಿ ಹಾಗೂ ಪ್ರಧಾನಿ ಮೋದಿ ವಿರೋಧಿ ಘೋಷಣೆಗಳು ಕೇಳಿಬಂದಿರುವುದರಿಂದ ನನಗೆ ಬೇಸರ ತರಿಸಿದೆ. ದೇಸಿ ಕ್ರೀಡೆಯ ಉಳಿವಿಗೆ ನಡೆಸಿದ ಹೋರಾಟ ದಿಕ್ಕು ತಪ್ಪುತ್ತಿರುವುದು ನನಗೆ ಇಷ್ಟವಿಲ್ಲ. ಹಾಗಾಗಿ ಹಿಂದೆ ಸರಿಯುತ್ತಿದ್ದೇನೆ'ಎಂದು ಅವರು ಹೇಳಿದ್ದಾರೆ.


ಜಲ್ಲಿಕಟ್ಟನ್ನು ಸುರಕ್ಷಿತವಾಗಿ ನಡೆಸಲು ತಮಿಳುನಾಡು ಸರಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.

* ಭಾಗವಹಿಸುವ ಸ್ಪರ್ಧಿಗಳು ಮತ್ತು ಎತ್ತುಗಳ ದಾಖಲಾತಿ ನಡೆಯಬೇಕು.

* ಗೂಳಿಗಳನ್ನು ಕಣಕ್ಕಿಳಿಸುವ ಮೊದಲು 20 ನಿಮಿಷ ವಿಶ್ರಾಂತಿ ನೀಡಬೇಕು.

* ಗೂಳಿಗಳನ್ನು ಪಶುವೈದ್ಯರ ಪರೀಕ್ಷೆಗೆ ಒಳಪಡಬೇಕು.

* ಗೂಳಿಗಳಿಗೆ 60 ಚದರಡಿ ಸ್ಥಳಾವಕಾಶ ನೀಡಬೇಕು ಮತ್ತು ಅವುಗಳಿಗೆ ಸುರಕ್ಷಿತ ಭಾವನೆ ಮೂಡಿಸಲು ಮಾಲೀಕರು ಪಕ್ಕದಲ್ಲೇ ನಿಂತಿರಬೇಕು.

* ಸ್ಪರ್ಧೆ ನಡೆಯುವ ಪ್ರದೇಶಕ್ಕೆ ಸಿಸಿ ಟಿವಿ ಕಣ್ಗಾವಲಿರಬೇಕು.

* ಸ್ಪರ್ಧಿಗಳು ಗೂಳಿಗಳ ಬೆನ್ನಿನ ಉಬ್ಬನ್ನು 15 ಮೀಟರ್‌ ವರೆಗೆ ಮಾತ್ರ ಹಿಡಿಯಬಹುದು. ಬಾಲ ಎಳೆಯಬಾರದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ