ಆ್ಯಪ್ನಗರ

ಹೆಣ್ಮಕ್ಕಳಿಗೆ ಶಾಪವೇ ಅಮೆರಿಕದ ಗಂಡ?

ಎಚ್‌4 ವೀಸಾದ ಕಠಿಣ ನಿರ್ಬಂಧಗಳಿಂದ ಸ್ವಾತಂತ್ರ್ಯಕ್ಕೇ ಹೊಡೆತ | ಉದ್ಯೋಗ ಮಾಡುವಂತಿಲ್ಲ, ಉದ್ಯಮ ಸ್ಥಾಪಿಸುವಂತಿಲ್ಲ, ಮನೆಯೇ ಗತಿ ಹೊಸದಿಲ್ಲಿ: ಅಮೆರಿಕದಲ್ಲಿ ಕೆಲಸ ಮಾಡುವ ...

Agencies 15 Jul 2019, 5:00 am
ಹೊಸದಿಲ್ಲಿ: ಅಮೆರಿಕದಲ್ಲಿ ಕೆಲಸ ಮಾಡುವ ಹುಡುಗ ಎಂದರೆ ಭಾರತದಲ್ಲಿ ಮೋಸ್ಟ್‌ ಎಲಿಜಿಬಲ್‌ ಬ್ಯಾಚುಲರ್‌(ಅತ್ಯಂತ ಅರ್ಹ ವರ) ಎಂಬ ಕಲ್ಪನೆ ಇದೆ. ಯುವತಿಯರು ಕೂಡಾ ಅಮೆರಿಕದ ಉದ್ಯೋಗಿಯನ್ನು ಮದುವೆಯಾಗಲು ಹಾತೊರೆಯುತ್ತಾರೆ. ಅದರಲ್ಲೂ ವಿದ್ಯಾವಂತ ಯುವತಿಯರಿಗೆ ಅಮೆರಿಕ ದೊಡ್ಡ ಕನಸು.
Vijaya Karnataka Web america

ಆದರೆ, ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ವರನನ್ನು ಮದುವೆಯಾಗಿ ಆ ದೇಶ ಸೇರಿರುವ ಹುಡುಗಿಯರ ಬದುಕನ್ನು ನೋಡಿದರೆ ಅತ್ಯಂತ ಹತಾಶ ಸ್ಥಿತಿಯಲ್ಲಿರುವುದು ಕಂಡುಬರುತ್ತದೆ. ಇದಕ್ಕೆ ಕಾರಣವಾಗಿರುವುದು ಎಚ್‌4 ವೀಸಾ ನಿಯಮಗಳು.
ಎಚ್‌4 ವೀಸಾ ಎಂದರೆ ಗಂಡನನ್ನು ಅವಲಂಬಿಸಿ ಅಮೆರಿಕಕ್ಕೆ ಬಂದಿರುವ ಪತ್ನಿಯರಿಗೆ ನೀಡುವ ತಾತ್ಕಾಲಿಕ ವಾಸ ಪರವಾನಗಿ. ಅಮೆರಿಕಕ್ಕೆ ಪತ್ನಿಯರಾಗಿ ಬರುವ ಯುವತಿಯರು ಸಾಕಷ್ಟು ವಿದ್ಯಾವಂತರಾಗಿದ್ದರೂ ಎಚ್‌ 4 ವೀಸಾದಲ್ಲಿ ಬಂದಿದ್ದರೆ ಅವರು ಆ ಆದೇಶದಲ್ಲಿ ಉದ್ಯೋಗ ಮಾಡುವುದಕ್ಕೆ ಅವಕಾಶವಿಲ್ಲ. ಯಾವುದೇ ಉದ್ಯಮ ಆರಂಭಿಸುವಂತಿಲ್ಲ. ಹೀಗಾಗಿ ಸಾಮಾಜಿಕ ಭದ್ರತಾ ಸಂಖ್ಯೆಯೂ ಅವರಿಗೆ ದೊರೆಯುವುದಿಲ್ಲ. ಉದ್ಯೋಗಸ್ಥರಿಗೆ ಎಚ್‌1ಬಿ ವೀಸಾ ನೀಡಲಾಗುತ್ತದೆ.
ಒಂದೊಮ್ಮೆ ಸಣ್ಣ ಪುಟ್ಟ ಉದ್ಯೋಗಗಳಲ್ಲಿ ಸೇರಿಕೊಳ್ಳುವುದಿದ್ದರೂ ಅದಕ್ಕೆ ಮನೆಯವರಿಂದಲೇ ಅಡ್ಡಿ ಇರುತ್ತದೆ. ಗಂಡನ ಬೆಂಬಲ ಇರುವುದಿಲ್ಲ. ಮನೆಯವರೂ ಒಂದಿಷ್ಟು ಸಂಪ್ರದಾಯಸ್ಥರಾಗಿರುತ್ತಾರೆ. ಹಾಗಾಗಿ ಸಾಕಷ್ಟು ವಿದ್ಯಾವಂತರಾಗಿದ್ದರೂ ಅಮೆರಿಕದಲ್ಲಿ ಅಸಹಾಯಕರಾಗಿ ಬಿಡುತ್ತಾರೆ ಭಾರತದಿಂದ ಮದುವೆಯಾಗಿ ಹೋದ ಹೆಣ್ಮಕ್ಕಳು. ಇದು ಎಷ್ಟರ ಮಟ್ಟಿಗೆ ಎಂದರೆ ಹಣಕಾಸು ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಅವರು ತಮ್ಮ ಪತಿಯನ್ನೇ ಅವಲಂಬಿಸಬೇಕಾದ ಅನಿವಾರ್ಯ ಸ್ಥಿತಿ.
ಹನಿಮೂನ್‌ ತುಂಬ ದಿನ ಇರುವುದಿಲ್ಲ! : ನಿಜವೆಂದರೆ, ಮದುವೆಯಾಗಿ ಅಮೆರಿಕಕ್ಕೆ ಹೋಗುವುದು ಎನ್ನುವುದು ಎಲ್ಲ ಹೆಣ್ಮಕ್ಕಳಿಗೆ ಖುಷಿ ಕೊಡುತ್ತದೆ. ಅಮೆರಿಕ ತಲುಪಿದ ಕೂಡಲೇ ಆರಾಮವಾಗಿ ಊರು ಸುತ್ತುವುದು ಸಂಭ್ರಮ ಮೂಡಿಸುತ್ತದೆ. ಕೆಲವರು ಹೊಸ ಹವ್ಯಾಸಗಳನ್ನು ಬೆಳೆಸಿಕೊಂಡು ಸಂಭ್ರಮಿಸುತ್ತಾರೆ, ಹಳೆ ಹವ್ಯಾಸಗಳನ್ನು ಮುಂದುವರಿಸುತ್ತಾರೆ. ಆದರೆ, ಇನ್ನು ಇಡೀ ಜೀವನ ಹೀಗೇ ಇರಬೇಕು ಎಂಬುದು ಅರ್ಥವಾದಾಗ ಕನಸಿನ ಸೌಧವೇ ಕುಸಿದಂತಾಗುತ್ತದೆ.
ಬದುಕಿಗೆ ಉದ್ದೇಶವೇ ಇಲ್ಲ! : ''ನಾನು ಕೆಲಸ ಮಾಡುವಂತಿಲ್ಲ. ಬದುಕಿಗೊಂದು ಉದ್ದೇಶವೇ ಇಲ್ಲ ಎಂದು ಅರಿವಾದಾಗ ಆತಂತಕವಾಯಿತು. ಬದುಕು ಅಂದರೆ ಕೇವಲ ವಾಕಿಂಗ್‌, ಪೈಂಟಿಂಗ್‌ ಅಲ್ಲವಲ್ಲ,'' ಎನ್ನುತ್ತಾರೆ ದಾಮನಿ. ದಾಮನಿ ಮದುವೆಗೆ ಮೊದಲು ಮುಂಬಯಿಯ ಜಾಹೀರಾತು ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ''ನಾನೊಂದು ಇಂಟರ್ನ್‌ಶಿಪ್‌ಗೂ ಅರ್ಜಿ ಹಾಕುವಂತಿರಲಿಲ್ಲ. ಯಾಕೆಂದರೆ, ನಾನೊಬ್ಬ ಎಚ್‌4 ಬಿ ವೀಸಾದಾರಳು. ಕೇವಲ ಅಡುಗೆ ಮತ್ತು ಕ್ಲೀನಿಂಗ್‌ ಅಷ್ಟೆ ನಾನು ಮಾಡಬಹುದಾದದ್ದು,'' ಎಂದು ಹೇಳುವಾಗ ದಾಮನಿಯ ಕಣ್ಣಲ್ಲಿ ಸಾಕಷ್ಟು ನೋವು ತುಂಬಿತ್ತು.
ಸ್ವಾತಂತ್ರ್ಯವೇ ಇಲ್ಲ! : ಸ್ವಾತಂತ್ರ್ಯ! ಮುಕ್ತ ಬದುಕಿನ ಈ ದೇಶಕ್ಕೆ ಕಾಲಿಟ್ಟ ಕೂಡಲೇ ನಾನು ಮೊದಲು ಕಳೆದುಕೊಂಡಿದ್ದೇ ಅದನ್ನು: ಮಾಜಿ ಮಾಡೆಲ್‌, ಬ್ಯುಸಿನೆಸ್‌ ಸ್ಕೂಲ್‌ ಪದವೀಧರೆಯೊಬ್ಬರು ತನ್ನದೇ ಬದುಕಿನ ಬಗ್ಗೆ ಮಾಡಿರುವ ಡಾಕ್ಯುಮೆಂಟರಿಯ ಮೊದಲ ಮಾತೇ ಇದು.
ಎಚ್‌1 ಬಿಗೆ ಪ್ರಾಯೋಜಕರು ಬೇಕು: ಹಾಗಿದ್ದರೆ, ಸಾಕಷ್ಟು ವಿದ್ಯಾವಂತರಾಗಿರುವ ಹೆಣ್ಮಕ್ಕಳು ಮದುವೆಯಾಗಿ ಹೋದ ಮೇಲೆ ಅಲ್ಲಿ ಉದ್ಯೋಗ ಮಾಡಬಾರದಾ? ಅವರೂ ಎಚ್‌1ಬಿ ವೀಸಾ ಹೊಂದಬಾರದಾ ಎನ್ನುವ ಪ್ರಶ್ನೆ ಏಳುತ್ತದೆ. ಅಮೆರಿಕದಲ್ಲಿ ಎಚ್‌1 ಬಿ ವೀಸಾ ಪಡೆಯಬೇಕಾದರೆ ಪ್ರಾಯೋಜಕತ್ವ ಬೇಕು. ಒಂದು ಕಂಪನಿ ಸಾಕಷ್ಟು ಹಣ ಕೊಟ್ಟು ಅಭ್ಯರ್ಥಿಯನ್ನು ಆರಿಸಬೇಕು. ಸಾಕಷ್ಟು ಕಂಪನಿಗಳು ಉದ್ಯೋಗ ಕೊಡಲು ಉತ್ಸುಕವಾಗಿದ್ದರೂ ಸ್ಪಾನ್ಸರ್‌ಷಿಪ್‌ ವಹಿಸಿಕೊಳ್ಳುವುದಿಲ್ಲ ಎಂದು ದಾಮನಿ ಅವರ ಡಾಕ್ಯುಮೆಂಟರಿ ಹೇಳುತ್ತದೆ.
ಮರಳಿ ಬರುವಂತೆಯೂ ಇಲ್ಲ :
ಹಾಗಂತ, ಭಾರತಕ್ಕೆ ಮರಳಿ ಬರೋಣವೇ ಎಂದರೆ ಮಹಿಳೆಯರು ಅದಕ್ಕೂ ಒಪ್ಪುವುದಿಲ್ಲ. ಅಮೆರಿಕದಲ್ಲಿರುವ ಮಧ್ಯಮ ವರ್ಗದ ಗೃಹಿಣಿಯರಿಗೆ ಮರಳಿ ಬರುವುದು ಒಂದು ದೊಡ್ಡ ಪ್ರತಿಷ್ಠೆಯ ವಿಷಯ. ಅವರು ಒಪ್ಪಿದರೂ ಗಂಡ ಒಪ್ಪುವುದಿಲ್ಲ. ಅಮೆರಿಕಕ್ಕೆ ಹೋದವರೆಲ್ಲ ಸುಖವಾಗಿರುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಾರೆ. ಆದರೆ, ನಮ್ಮ ಸ್ಥಿತಿ ಹೀಗಿದೆ ನೋಡಿ ಎನ್ನುತ್ತಾರೆ ಗೃಹಿಣಿಯೊಬ್ಬರು.
------------
ಮಾನಸಿಕ ಯಾತನೆ
- ಎಚ್‌4 ಬಿ ವೀಸಾದಲ್ಲಿ ಹೋಗುವುದೆಂದರೆ ಅದು ಗಂಡನಿಗೆ ಅಡಿಯಾಳಾಗಿ ಬದುಕಬೇಕಾದ ಅನಿವಾರ್ಯ ಪರಿಸ್ಥಿತಿ.
- ಅನ್ಯ ದೇಶವೊಂದರಲ್ಲಿ ಅಸಹಾಯಕ ಸ್ಥಿತಿಯಲ್ಲಿ ಬದುಕುವುದೆಂದರೆ ಇದುವೆ.
- ಹೀಗೆ ಹೋದ ಹೆಚ್ಚಿನವರು ಹಣಕಾಸು ಮತ್ತು ಮಾನಸಿಕ ಒತ್ತಡವನ್ನು ಅನುಭವಿಸುತ್ತಿರುತ್ತಾರೆ.
------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ