ಆ್ಯಪ್ನಗರ

ನನ್ನನ್ನು ಎನ್‌ಕೌಂಟರ್‌ನಲ್ಲಿ ಮುಗಿಸಲು ಸಂಚು-ತೊಗಾಡಿಯಾ

ಪ್ರವೀಣ್‌ ತೊಗಾಡಿಯಾ ದಿಢೀರ್‌ ನಾಪತ್ತೆ ಮತ್ತು ಪತ್ತೆ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ತೊಗಾಡಿಯಾ ಆರೋಪದ ಬೆನ್ನಿಗೇ ಕಾಂಗ್ರೆಸ್‌ ತನಿಖೆಗೆ ಆಗ್ರಹಿಸಿದೆ.

Vijaya Karnataka 17 Jan 2018, 8:52 am

ಅಹಮದಾಬಾದ್‌: ಪೊಲೀಸರು ಎನ್‌ಕೌಂಟರ್‌ನಲ್ಲಿ ನನ್ನನ್ನು ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ವಿಶ್ವ ಹಿಂದೂ ಪರಿಷತ್‌ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ ಹೊಸ ಬಾಂಬ್‌ ಸಿಡಿಸಿದ್ದಾರೆ.

ಇದರೊಂದಿಗೆ ಅವರ ದಿಢೀರ್‌ ನಾಪತ್ತೆ ಮತ್ತು ಪತ್ತೆ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ತೊಗಾಡಿಯಾ ಆರೋಪದ ಬೆನ್ನಿಗೇ ಕಾಂಗ್ರೆಸ್‌ ತನಿಖೆಗೆ ಆಗ್ರಹಿಸಿದೆ.

ನಿಷೇಧಾಜ್ಞೆ ಉಲ್ಲಂಘನೆಯ ಹಳೆಯ ಪ್ರಕರಣ ಸಂಬಂಧ ತೊಗಾಡಿಯಾ ಅವರನ್ನು ಬಂಧಿಸಲು ರಾಜಸ್ಥಾನ ಪೊಲೀಸರು ಸೋಮವಾರ ಅಹಮದಾಬಾದ್‌ಗೆ ಬಂದಿದ್ದರು. ಝಡ್‌ ಪ್ಲಸ್‌ ಭದ್ರತೆ ಹೊಂದಿದ್ದರೂ ಅವರು ಭದ್ರತಾ ಸಿಬ್ಬಂದಿಯ ನೆರವಿಲ್ಲದೇ ನಗರದಲ್ಲಿರುವ ವಿಹಿಂಪ ಕೇಂದ್ರ ಕಚೇರಿಯಿಂದ ಆಟೋ ರಿಕ್ಷಾದಲ್ಲಿ ಒಬ್ಬರೇ ಪ್ರಯಾಣಿಸಿ ನಾಪತ್ತೆಯಾಗಿದ್ದರು. ಸಂಜೆ ಹೊತ್ತಿಗೆ ಶಾಹಿಭಾಗ್‌ ಉದ್ಯಾನದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

'ರಾಮ ಮಂದಿರ ನಿರ್ಮಾಣ, ರೈತರ ಹಿತರಕ್ಷಣೆ, ಗೋ ಸಂರಕ್ಷಕರ ಕುರಿತ ನನ್ನ ಧ್ವನಿ ಅಡಿಗಿಸುವ ಯತ್ನ ನಡೆದಿದೆ. ಹಳೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ನನ್ನನ್ನು ಬಂಧಿಸಲು ಬಂದಿದ್ದರು. ಎನ್‌ಕೌಂಟರ್‌ನಲ್ಲಿ ನನ್ನನ್ನು ಮುಗಿಸುವ ಸಂಚು ನಡೆಯುತ್ತಿದೆ ಎಂದು ಕೆಲವರಿಂದ ಮಾಹಿತಿ ತಿಳಿದುಬಂತು. ಹಾಗಾಗಿಯೇ ಕಣ್ಮರೆಯಾದೆ' ಎಂದು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದು, ಅದೀಗ ರಾಜಕೀಯ ತಿರುವು ಪಡೆದುಕೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ.

ಹಾರ್ದಿಕ್‌ ಪಟೇಲ್‌ ಭೇಟಿ: ಸದ್ಯ ನಗರದ ಚಂದ್ರಮಣಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ತೊಗಾಡಿಯಾ ಅವರನ್ನು ಪಾಟೀದಾರ್‌ ಮೀಸಲು ಹೋರಾಟದ ನಾಯಕ ಹಾರ್ದಿಕ್‌ ಪಟೇಲ್‌, ಗುಜರಾತ್‌ ಕಾಂಗ್ರೆಸ್‌ ನಾಯಕ ಅರ್ಜುನ್‌ ಮೋದ್ವಾಡಿಯಾ ಪ್ರತ್ಯೇಕವಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ''ಎನ್‌ಕೌಂಟರ್‌ ವಿಚಾರಕ್ಕೆ ಬಂದರೆ ರಾಜಸ್ಥಾನದ ಪೊಲೀಸರ ಟ್ರ್ಯಾಕ್‌ ರೆಕಾರ್ಡ್‌ ಏನೆಂಬುದು ನಮಗೆಲ್ಲಾ ಗೊತ್ತಿದೆ. ತೊಗಾಡಿಯಾ ಅವರು ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಯಬೇಕು,'' ಎಂದು ಅರ್ಜುನ್‌ ಮೋದ್ವಾಡಿಯಾ ಆಗ್ರಹಿಸಿದ್ದಾರೆ. ಅವರ ಮಾತಿಗೆ ಗುಜರಾತ್‌ ಕಾಂಗ್ರೆಸ್‌ ಅಧ್ಯಕ್ಷ ಭರತ್‌ಸಿನ್ಹಾ ಸೋಲಂಕಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಅಶೋಕ್‌ ಗೆಹ್ಲೋಟ್‌ ಧ್ವನಿಗೂಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ