ಆ್ಯಪ್ನಗರ

ನಾಯಿ ಮರಿಯನ್ನು ಎತ್ತಿ ರಸ್ತೆಗೆ ಎಸೆದಿದ್ದ ಕ್ರೂರಿ; 3 ವಾರಗಳ ಬಳಿಕ ಆರೋಪಿ ಬಂಧನ

ನಾಯಿ ಮರಿಯೊಂದನ್ನು ಎಸೆದು ರಸ್ತೆಯಲ್ಲಿ ಅಂಗಡಿ ಮಾಲೀಕನೊಬ್ಬ ಕ್ರೌರ್ಯ ಮೆರೆದಿದ್ದಾನೆ. ಆದರೆ, ಈ ಬಗ್ಗೆ ದೂರು ನೀಡಲು ಕಾನೂನು ವಿದ್ಯಾರ್ಥಿಗಳು ಹರಸಾಹಸ ಪಟ್ಟಿದ್ದು, 3 ವಾರಗಳ ಕಾಲ ಎಫ್‌ಐಆರ್‌ ದಾಖಲಿಸಿಕೊಳ್ಳುವಂತೆ ಮಾಡಲು ಹೆಣಗಾಡಿದ್ದಾರೆ. ಕೊನೆಗೂ ಆರೋಪಿಯನ್ನು ಜೈಲಿನ ಹಿಂದೆ ಕೊಳೆಯುವಂತೆ ಮಾಡಲು ವಿದ್ಯಾರ್ಥಿಗಳು ಯಶಸ್ವಿಯಾಗಿದ್ದಾರೆ.

TIMESOFINDIA.COM 27 Dec 2018, 5:09 pm

ಹೈಲೈಟ್ಸ್‌:

  • ನಾಯಿ ಮರಿಯನ್ನು ಎಸೆದಿದ್ದ ಪ್ರಾವಿಷನ್ ಸ್ಟೋರ್‌ ಮಾಲೀಕನ ವಿರುದ್ಧ ಎಫ್‌ಐಆರ್‌
  • ಎಫ್‌ಐಆರ್‌ ದಾಖಲಿಸಲು 3 ವಾರಗಳ ಕಾಲ ಹರಸಾಹಸ ಪಟ್ಟ ಕಾನೂನು ವಿದ್ಯಾರ್ಥಿಗಳು
  • ಕಮಿಷನರ್‌ ಮೊರೆ ಹೋದ ಮೇಲೆ ಕೊನೆಗೂ ಆರೋಪಿ ಬಾಲ ಮುರುಗನ್ ಬಂಧನ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
[This story originally published in Times Of India on Dec 27, 2018]
ಚೆನ್ನೈ:
ತಮಿಳುನಾಡಿನ ಚೆನ್ನೈನ ಮನಾಲಿ ಬಳಿಯಲ್ಲಿ ನಿರ್ದಯವಾಗಿ ನಾಯಿ ಮರಿಯೊಂದನ್ನು ಎಸೆದಿದ್ದ ಪ್ರಾವಿಷನ್ ಸ್ಟೋರ್‌ ಮಾಲೀಕನ ವಿರುದ್ಧ ಕೊನೆಗೂ ಎಫ್‌ಐಆರ್‌ ದಾಖಲಾಗಿದೆ. ಆರೋಪಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ತಿರುಚ್ಚಿಯ ತಮಿಳುನಾಡು ಕಾನೂನು ಕಾಲೇಜು ವಿದ್ಯಾರ್ಥಿಗಳು 3 ವಾರಗಳ ಕಾಲ ಹರಸಾಹಸ ಪಟ್ಟಿದ್ದಾರೆ. ಕೊನೆಗೂ ಆತನನ್ನು ಕಂಬಿ ಎಣಿಸುವಂತೆ ಮಾಡಲು ಯಶಸ್ವಿಯಾಗಿದ್ದಾರೆ.
ಡಿಸೆಂಬರ್ 1 ರಂದು ದುರ್ಗಾಯ್‌ ಅವೆನ್ಯೂ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಬಳಿಕ ಸಿಸಿ ಕ್ಯಾಮರಾ ದೃಶ್ಯಾವಳಿಗಳ ಆಧಾರದ ಮೇಲೆ ವಿದ್ಯಾರ್ಥಿನಿ ಕಸ್ತೂರಿ ರಾಜಮಣಿ ಹಾಗೂ ಆಕೆಯ ಐವರು ಸಹಪಾಠಿಗಳು ದೂರು ನೀಡಿದ್ದಾರೆ. ನಾಯಿಯೊಂದನ್ನು ಆ ನಾಯಿ ಮರಿ ಹಿಂಬಾಲಿಸುತ್ತಿರುತ್ತದೆ. ಆ ವೇಳೆ, ಆರೋಪಿ ಬಾಲಮುರುಗನ್‌ ತನ್ನ ಬೈಕ್‌ ಬಳಿ ನಿಂತಿರುತ್ತಾನೆ. ಆತನ ಬಳಿ ಬರುತ್ತಿದ್ದ ನಾಯಿಮರಿಯನ್ನು ಎತ್ತಿಕೊಂಡ ಆರೋಪಿ ಅದನ್ನು ರಸ್ತೆಗೆ ಜೋರಾಗಿ ಎಸೆಯುತ್ತಾನೆ. ಬಳಿಕ ನಾಯಿ ಮರಿಯ ಕೂಗಿಕೊಳ್ಳುತ್ತಿರುವ ಶಬ್ದ ಕಂಡು ಇತರೆ ನಾಯಿಗಳು ಸ್ಥಳಕ್ಕಾಗಮಿಸುತ್ತವೆ. ಅದು ನೋವಿನಿಂದ ಒದ್ದಾಡುತ್ತಿರುತ್ತದೆ. ಈ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಆಧರಿಸಿ ಬಾಲ ಮುರುಗನ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.


ಇನ್ನು, ಎಫ್‌ಐಆರ್ ಬಗ್ಗೆ ಮಾಹಿತಿ ನೀಡಿದ ಕಸ್ತೂರಿ ರಾಜಮಣಿ, ''ಡಿಸೆಂಬರ್ 13 ರಂದು ನಮಗೆ ಈ ಬಗ್ಗೆ ಮಾಹಿತಿ ಗೊತ್ತಾಯಿತು. ಅಂದಿನಿಂದಲೂ ಎಫ್‌ಐಆರ್‌ ದಾಖಲಿಸಲು ಹಲವು ಕಡೆ ಓಡಾಡಿದ್ದೇವೆ'' ಎಂದು ತಿಳಿಸಿದ್ದಾಳೆ. ಡಿಸೆಂಬರ್ 14 ರಂದು ಎಂ6 ಮನಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಬಳಿಕ, ಡಿಸೆಂಬರ್ 16ರಂದು ಸಮುದಾಯ ಸೇವೆ ನೋಂದಣಿ ಪ್ರತಿಯನ್ನು ನೀಡಿದ್ದೆವು. ಡಿಸೆಂಬರ್ 14ರಂದು ನಾವು ತೆರಳಿದಾಗ ನಮ್ಮನ್ನು ಹಲವು ಗಂಟೆಗಳ ಕಾಲ ಕಾಯಿಸಿದ್ದರು. ನಂತರವೂ ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆಯಡಿ ಕೇಸ್‌ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು ಎಂದೂ ಆಕೆ ದೂರಿದ್ದಾಳೆ.

ಅಲ್ಲದೆ, ''ಪೊಲೀಸರು ಎಫ್‌ಐಆರ್‌ ದಾಖಲಿಸಲು ಹಿಂದೇಟು ಹಾಕಿದ್ದಕ್ಕೆ ನಾವು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಭೇಟಿ ಮಾಡಿದ್ದೆವು. ಅಲ್ಲಿಂದಲೂ ಸರಿಯಾದ ಪ್ರತಿಕ್ರಿಯೆ ಬಾರದ ಹಿನ್ನೆಲೆ ನಾವು ಪೊಲೀಸ್‌ ಕಮಿಷನರ್‌ರನ್ನು ಭೇಟಿ ಮಾಡಿ ದೂರು ನೀಡಿದೆವು. ಇದಾದ ಬಳಿಕ ನಮಗೆ ಎ6 ಮನಾಲಿ ಪೊಲೀಸ್‌ ಠಾಣೆಯ ಸಿಬ್ಬಂದಿ ಕರೆ ಮಾಡಿ ಎಫ್‌ಐಆರ್‌ ದಾಖಲಿಸಲು ಒಪ್ಪಿಕೊಂಡರು'' ಎಂದು ಮತ್ತೊಬ್ಬ ಕಾನೂನು ವಿದ್ಯಾರ್ಥಿನಿ ಅಪರ್ಣಾ ಪದ್ಮಕವಿ ತಿಳಿಸಿದ್ದಾಳೆ.

ಹೀಗೆ ಡಿಸೆಂಬರ್ 24 ರಂದು ಕೊನೆಗೂ ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದ್ದು, ನಂತರ ಬಾಲ ಮುರುಗನ್‌ರನ್ನು ಬಂಧಿಸಲಾಗಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಕಸ್ತೂರಿ, ''ಕಾನೂನು ವಿದ್ಯಾರ್ಥಿಗಳಿಗೆ ಎಫ್‌ಐಆರ್ ದಾಖಲಿಸಲು ಇಷ್ಟೊಂದು ಕಷ್ಟವಾದರೆ, ಇನ್ನು ಸಾಮಾನ್ಯ ಜನರ ಪಾಡೇನು'' ಎಂದು ಹೇಳಿಕೊಂಡಿದ್ದಾಳೆ. ಆದರೆ, ಎಂ6 ಮನಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಾತ್ರ ಇದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಇನ್ನು, ಗಂಭೀರವಾಗಿ ಗಾಯಗೊಂಡಿರುವ ನಾಯಿಮರಿ ಸದ್ಯ ಚೇತರಿಸಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ