ಆ್ಯಪ್ನಗರ

ಗಡಿಯಿಂದ ಕದಲದ ಚೀನಾಗೆ ಬುದ್ಧಿ ಕಲಿಸಲು ಉನ್ನತ ರಾಜಕೀಯ ಹಾಗೂ ಮಿಲಿಟರಿ ನಾಯಕರ ಸಭೆ!

ಲಡಾಖ್ ಗಡಿಯಿಂದ ಕದಲಲು ಹಿಂದೇಟು ಹಾಕುತ್ತಿರುವ ಚೀನಾದೊಂದಿಗೆ ಯಾವ ರೀತಿಯ ವ್ಯವಹಾರ ನಡೆಸಬೇಕು ಎಂದು ನಿರ್ಧರಿಸಲು, ಇಂದು(ಸೋಮವಾರ) ದೇಶದ ಉನ್ನತ ರಾಜಕೀಯ ಹಾಗೂ ಮಿಲಿಟರಿ ನಾಯಕರ ನಡುವೆ ಸಭೆ ನಡೆಯಲಿದೆ.

Vijaya Karnataka Web 17 Aug 2020, 3:25 pm
ನವದೆಹಲಿ: ಲಡಾಖ್ ಗಡಿಯಿಂದ ಕದಲಲು ಹಿಂದೇಟು ಹಾಕುತ್ತಿರುವ ಚೀನಾದೊಂದಿಗೆ ಯಾವ ರೀತಿಯ ವ್ಯವಹಾರ ನಡೆಸಬೇಕು ಎಂದು ನಿರ್ಧರಿಸಲು, ಇಂದು(ಸೋಮವಾರ) ದೇಶದ ಉನ್ನತ ರಾಜಕೀಯ ಹಾಗೂ ಮಿಲಿಟರಿ ನಾಯಕರ ನಡುವೆ ಸಭೆ ನಡೆಯಲಿದೆ.
Vijaya Karnataka Web china-India-Army-PTI
ಸಂಗ್ರಹ ಚಿತ್ರ


ಪ್ರಮುಖವಾಗಿ ದೆಪ್ಸಾಂಗ್ ಹಾಗೂ ಗೋರ್ಗಾ ಪ್ರದೇಶಗಳಲ್ಲಿ ಚೀನಿ ಸೈನಿಕರು ಇನ್ನೂ ಬೀಡು ಬಿಟ್ಟಿದ್ದು, ಹಲವು ಸುತ್ತಿನ ಮಿಲಿಟರಿ ಮಾತುಕತೆ ಬಳಿಕವೂ ಸೈನ್ಯ ಹಿಂಪಡೆಯಲು ಮುಂದಾಗಿಲ್ಲ.

ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಲು ಈಗಾಗಲೇ ಭಾರತ-ಚೀನಾ ನಡುವೆ ಹಲವು ಸುತ್ತಿನ ಮಾತುಕತೆ ನಡೆದಿದೆ. ಆದರೆ ಪ್ರತಿ ಸಭೆಯಲ್ಲೂ ಸೈನ್ಯ ಹಿಂಪಡೆಯುವುದಾಗಿ ಹೇಳುವ ಚೀನಾ, ಸೈನಿಕರನ್ನು ನಿಯೋಜಿಸುವ ಮತ್ತದೇ ಚಾಳಿಯನ್ನೇ ಮುಂದುವರೆಸಿದೆ.

ಭಾರತದ ಗಡಿಯಿಂದ ಕದಲದ ಡ್ರ್ಯಾಗನ್‌ ರಾಷ್ಟ್ರ; ಪಾಂಗಾಂಗ್‌ ತ್ಸೊ ಸರೋವರ ಬಳಿ ಚೀನಾ ರಹಸ್ಯ ಜಮಾವಣೆ

ಮಿಲಿಟರಿ ಮಾತುಕತೆಗಳಲ್ಲಿ ಭಾರತ ತನ್ನ ಬದ್ಧತೆಯನ್ನು ಪ್ರದರ್ಶಿಸಿದರೆ, ಚೀನಾ ಮಾತ್ರ ತನ್ನ ಗೋಸುಂಬೆ ನೀತಿಯನ್ನೇ ಮುಂದುವರೆಸಿದೆ. ಇದರಿಂದ ಬೇಸತ್ತಿರುವ ಭಾರತೀಯ ಅಧಿಕಾರಿಗಳು, ಇದಕ್ಕೆ ಶಾಶ್ವತ ಪರಿಹಾರ ಏನು ಎಂಬುದರ ಕುರಿತು ಚಿಂತನೆ ನಡೆಸಿದ್ದಾರೆ.

ಇತ್ತ ರಾಜತಾಂತ್ರಿಕ ಮಾತುಕತೆಯಲ್ಲೂ ಚೀನಾ ಇಬ್ಬಗೆಯ ನೀತಿಯನ್ನೇ ಅನುಸರಿಸುತ್ತಿದ್ದು, ಇದಕ್ಕೆ ಭಾರತರ ರಾಜಕೀಯ ನಾಯಕತ್ವ ಕೂಡ ಪರಿಹಾರಕ್ಕಾಗಿ ಮಾರ್ಗ ಹುಡುಕುತ್ತಿದೆ.

ಈ ಹಿನ್ನೆಲೆಯಲ್ಲಿ ಭಾರತದ ಉನ್ನತ ರಾಜಕೀಯ ಹಾಗೂ ಮಿಲಿಟರಿ ನಾಯಕರು ಲಡಾಖ್ ಗಡಿ ತಂಟೆಗೆ ಶಾಶ್ವತ ಪರಿಹಾರ ಹುಡುಕಲು ಒಟ್ಟಾಗಿ ಸಭೆ ಸೇರಲಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ.

ಭಾರತ ಗಡಿ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟು ಮಾಡುವುದಿಲ್ಲ ಎಂಬ ಭರವಸೆ ಇದೆ: ಚೀನಾ ರಾಯಭಾರ ಕಚೇರಿ!

ಲಡಾಖ್ ಗಡಿ ಉದ್ವಿಗ್ನತೆಗೆ ಶಾಶ್ವತ ಪರಿಹಾರ ಹಾಗೂ ಚೀನಾದ ಇಬ್ಬಗೆ ನೀತಿಯನ್ನು ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳಿಂದ ಹೇಗೆ ಎದುರಿಸಬೇಕು ಎಂಬುದರ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಚೀನಾ ದೌಲತ್ ಬೇಗ್ ಓಲ್ಡಿ ಹಾಗೂ ಪೂರ್ವ ಲಡಾಖ್‌ ಗಡಿಯಿಂದ ಸೈನ್ಯವನ್ನು ಹಿಂಪಡೆಯುವಂತೆ ಭಾರತವನ್ನು ಒತ್ತಾಯಿಸುತ್ತಿದೆ. ಆದರೆ ಇವರೆಡು ಭಾರತದ ಗಡಿಯೊಳಗಿರುವ ಪ್ರದೇಶವಾಗಿದ್ದು, ಇಲ್ಲಿ ಸೈನ್ಯವನ್ನು ನಿಯೋಜಿಸುವುದು ನಮ್ಮ ಹಕ್ಕು ಎಂಬುದು ಭಾರತೀಯ ಸೇನೆಯ ಪ್ರತಿಪಾದನೆಯಾಗಿದೆ.

ಚಳಿಗಾಲ ಎದುರಿಸಿ ಗಡಿ ಕಾಯಲಿದ್ದೇವೆ: ಸಂಸದೀಯ ಸಮಿತಿಗೆ ಸೇನೆಯ ಭರವಸೆ!

ಒಟ್ಟಿನಲ್ಲಿ ಗಡಿಯಲ್ಲಿನ ಚೀನಾದ ಅಹಂಕಾರವನ್ನು ಮುರಿಯಲು ಭಾರತದ ಉನ್ನತ ರಾಜಕೀಯ ಮತ್ತು ಮಿಲಿಟರಿ ನಾಯಕರು ಸಜ್ಜಾಗಿದ್ದು, ಶೀಘ್ರದಲ್ಲೇ ಲಡಾಖ್ ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯುವ ಭರವಸೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ