ಆ್ಯಪ್ನಗರ

ಜೈಷೆ ಉಗ್ರರ ವಿರುದ್ಧ ಪ್ರಹಾರ ಶುರು

ಗುಪ್ತಚರ ಇಲಾಖೆ ನೀಡಿದ ಮಾಹಿತಿ ಜಾಡು ಹಿಡಿದು ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ (ಎಟಿಎಸ್‌) ಇಬ್ಬರು ಜೈಷೆ ಉಗ್ರರನ್ನು ಸಹರನ್‌ಪುರ ಜಿಲ್ಲೆಯ ದೇವಬಂದ್‌ನಲ್ಲಿ ಶುಕ್ರವಾರ ಬಂಧಿಸಿದೆ.

Vijaya Karnataka 23 Feb 2019, 5:00 am
ಏಜೆನ್ಸೀಸ್‌ ಲಖನೌ/ಶ್ರೀನಗರ
Vijaya Karnataka Web two terrorists arrested suspected of links with jem
ಜೈಷೆ ಉಗ್ರರ ವಿರುದ್ಧ ಪ್ರಹಾರ ಶುರು


ಪುಲ್ವಾಮಾ ದಾಳಿ ಬಳಿಕ ಜೈಷೆ ಮೊಹಮದ್‌ ಸಂಘಟನೆ ವಿರುದ್ಧ ತೀವ್ರ ಕಾರ್ಯಾಚರಣೆಗೆ ಇಳಿದಿರುವ ಭಾರತೀಯ ಪಡೆಗಳು ಶುಕ್ರವಾರ ಇಬ್ಬರು ಉಗ್ರರನ್ನು ಸೆರೆ ಹಿಡಿದಿದ್ದು, ಇನ್ನಿಬ್ಬರನ್ನು ಹೊಡೆದುರುಳಿಸಿವೆ.

ಗುಪ್ತಚರ ಇಲಾಖೆ ನೀಡಿದ ಮಾಹಿತಿ ಜಾಡು ಹಿಡಿದು ಉತ್ತರ ಪ್ರದೇಶದ ಉಗ್ರ ನಿಗ್ರಹ ದಳ (ಎಟಿಎಸ್‌) ಇಬ್ಬರು ಜೈಷೆ ಉಗ್ರರನ್ನು ಸಹರನ್‌ಪುರ ಜಿಲ್ಲೆಯ ದೇವಬಂದ್‌ನಲ್ಲಿ ಶುಕ್ರವಾರ ಬಂಧಿಸಿದೆ. ನಗರದ ಖಾಸಗಿ ಹಾಸ್ಟೆಲ್‌ವೊಂದರ ಮೇಲೆ ದಾಳಿ ನಡೆಸಿ ಕಾಶ್ಮೀರದ ಕುಲ್ಗಾಂ ನಿವಾಸಿ ಶಹನಾವಾಜ್‌ ತೇಲಿ ಮತ್ತು ಪುಲ್ವಾಮಾ ಜಿಲ್ಲೆಯ ನಿವಾಸಿ ಅಕಿಬ್‌ ಅಹ್ಮದ್‌ ಮಲಿಕ್‌ನನ್ನು ಬಂಧಿಸಲಾಗಿದೆ. ಇದರ ಜತೆಗೆ 10 ಶಂಕಿತ ಉಗ್ರರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದೆ.

ಗ್ರೆನೇಡ್‌ಗಳನ್ನು ತಯಾರಿಸುವಲ್ಲಿ ಪಳಗಿರುವ ಶಹನಾವಾಜ್‌ ತೇಲಿ ಜೈಷೆ ಸಂಘಟನೆಯ ಕಮಾಂಡರ್‌ಗಳ ಜತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದು, ಪುಲ್ವಾಮಾ ದಾಳಿಯಲ್ಲಿ ಈತನ ಕೈವಾಡವಿರುವ ಬಗ್ಗೆ ಎಟಿಎಸ್‌ ತಂಡ ಬಲವಾದ ಅನುಮಾನ ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಆತನಿಂದ ವಶಪಡಿಸಿಕೊಳ್ಳಲಾಗಿರುವ ಮೊಬೈಲ್‌ ಪೋನ್‌, ಲ್ಯಾಪ್‌ಟಾಪ್‌ಗಳಲ್ಲಿ ಇರುವ ಮಾಹಿತಿ ಜಾಲಾಡಲಾಗುತ್ತಿದೆ. ತೇಲಿ ಹಾಗೂ ಅಕಿಬ್‌ ಅಹ್ಮದ್‌ ಇಬ್ಬರೂ ಜಿಹಾದ್‌ ಹೆಸರಿನಲ್ಲಿ ಸ್ಥಳೀಯ ಯುವಕರ ತಲೆಕೆಡಿಸಿ ಅವರನ್ನು ಜೈಷೆ ಉಗ್ರ ಸಂಘಟನೆಗೆ ನೇಮಿಸಿಕೊಳ್ಳುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

''ಬಂಧಿತರಿಂದ ವಶಪಡಿಸಿಕೊಳ್ಳಲಾಗಿರುವ ಮೊಬೈಲ್‌ ಫೋನ್‌ಗಳಲ್ಲಿ ತೇಲಿ ಹಾಗೂ ಅಹ್ಮದ್‌ ಇಬ್ಬರೂ ಜೈಷೆ ಮೊಹಮ್ಮದ್‌ ಸಂಘಟನೆಯ ಕಮಾಂಡರ್‌ಗಳ ಜತೆ ಕೋಡ್‌ವರ್ಡ್‌ಗಳಲ್ಲಿ ಸಂಭಾಷಣೆ ನಡೆಸಿರುವುದು, ಜಿಹಾದಿ ಸಾಹಿತ್ಯ ಸಂಗ್ರಹಿಸಿರುವುದು ಪತ್ತೆಯಾಗಿದೆ. ಹೆಚ್ಚಿನ ತನಿಖೆಗಾಗಿ ಇವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ,'' ಎಂದು ಉತ್ತರ ಪ್ರದೇಶ ಡಿಜಿಪಿ ಒ.ಪಿ.ಸಿಂಗ್‌ ಹೇಳಿದ್ದಾರೆ.

ಟ್ರಾನ್ಸಿಟ್‌ ರಿಮ್ಯಾಂಡ್‌: ''ಬಂಧಿತ ಉಗ್ರರಿಂದ ಎರಡು .32 ಬೋರ್‌ ಪಿಸ್ತೂಲ್‌ ಮತ್ತು 30 ಕಾಟ್ರಿಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರಿಬ್ಬರೂ ಕಾಶ್ಮೀರದಿಂದ ಇಲ್ಲಿಗೆ ಬಂದದ್ದೇಕೆ? ಅವರ ಹಿಂದಿನ ಆರ್ಥಿಕ ಮೂಲ ಯಾವುದು? ಅವರ ಟಾರ್ಗೆಟ್‌ ಏನಾಗಿತ್ತು? ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಟ್ರಾನ್ಸಿಟ್‌ ರಿಮ್ಯಾಂಡ್‌ ಕೋರಿ ನ್ಯಾಯಾಲಯದ ಮೊರೆ ಹೋಗಲಾಗುವುದು,'' ಎಂದು ಎಟಿಎಸ್‌ ಐಜಿ ಅಸಿಮ್‌ ಅರುಣ್‌ ತಿಳಿಸಿದ್ದಾರೆ.

ಇಬ್ಬರು ಜೈಷೆ ಉಗ್ರರ ಹತ್ಯೆ: ಇತ್ತ ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಜಿಲ್ಲೆಯಲ್ಲಿ ಇಬ್ಬರು ಜೈಷೆ ಉಗ್ರರನ್ನು ಭದ್ರತಾ ಪಡೆ ಕೊಂದುಹಾಕಿದ್ದು, ಘಟನಾ ಸ್ಥಳದಿಂದ ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ಮುಂಬಯಿಯಲ್ಲಿ ಸ್ಫೋಟ

ವಾಣಿಜ್ಯ ನಗರಿ ಮುಂಬಯಿ ಹೊರವಲಯದ ಠಾಣೆಯ ಮಿರಾ ರೋಡ್‌ನಲ್ಲಿ ಶುಕ್ರವಾರ ಲಘು ಬಾಂಬ್‌ ಸ್ಫೋಟ ಸಂಭವಿಸಿದೆ. ಇತ್ತ ರಾಯಗಢ ಜಿಲ್ಲೆಯ ಅಪ್ಟಾ ಗ್ರಾಮದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಸುಧಾರಿತ ಸ್ಫೋಟಕ ಸಾಧನ ಪತ್ತೆಯಾಗಿದೆ. ಪುಲ್ವಾಮಾ ದಾಳಿ ಬಳಿಕ ಮುಂಬಯಿನ ಆಯಕಟ್ಟಿನ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಿರುವ ಮಧ್ಯೆಯೇ ಈಗ ಮಹಾರಾಷ್ಟ್ರದಾದ್ಯಂತ ಮತ್ತೊಮ್ಮೆ ಹೈ ಅಲರ್ಟ್‌ ಘೋಷಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ