ಆ್ಯಪ್ನಗರ

ವಿಕೆ ಶಶಿಕಲಾಗೆ ಕೊರೊನಾ ಸೋಂಕು, ವಿಕ್ಟೋರಿಯಾ ಆಸ್ಪತ್ರೆ ಐಸಿಯುಗೆ ಶಿಫ್ಟ್‌

ಟೈಪ್‌-2 ಡಯಾಬೆಟಿಸ್‌, ಅಧಿಕ ರಕ್ತದೊತ್ತಡ, ಹೈಪೋಥೈರಾಯ್ಡಿಸಮ್, ತೀವ್ರ ಉಸಿರಾಟದ ಸಮಸ್ಯೆಯಿಂದ ಶಶಿಕಲಾ ಬಳಲುತ್ತಿದ್ದು, ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Vijaya Karnataka 21 Jan 2021, 11:04 pm
ಬೆಂಗಳೂರು: ತಮಿಳುನಾಡು ಮಾಜಿ ಸಿಎಂ ದಿ. ಜಯಲಲಿತಾ ಆಪ್ತೆ ವಿಕೆ ಶಶಿಕಲಾಗೆ ಕೊರೊನಾ ಸೋಂಕು ತಗುಲಿರುವುದು ಗುರುವಾರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಬೌರಿಂಗ್‌ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು, ಕೋವಿಡ್‌ ಬ್ಲಾಕ್‌ನ ಐಸಿಯುಗೆ ದಾಖಲಿಸಲಾಗಿದೆ.
Vijaya Karnataka Web VK Sasikala


ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವಿಕೆ ಶಶಿಕಲಾ ಆರೋಗ್ಯದಲ್ಲಿ ಬುಧವಾರ ಏರುಪೇರು ಸಂಭವಿಸಿತ್ತು. ಜ್ವರ ಮತ್ತು ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ದಾಖಲಿಸುವ ವೇಳೆ ರ‍್ಯಾಪಿಡ್ ಆಂಟಿಜೆನ್‌ ಟೆಸ್ಟ್‌ ನಡೆಸಿದಾಗ ಕೊರೊನಾ ವರದಿ ನೆಗೆಟಿವ್‌ ಬಂದಿತ್ತು. ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ಮುಂದುವರಿಸಲಾಗಿತ್ತು.

ಬುಧವಾರವೇ ಅವರ ಸ್ವಾಬ್‌ ಸಂಗ್ರಹಿಸಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಅವರ ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಕಡಿಮೆ ಇದ್ದಿದ್ದರಿಂದ ಅವರಿಗೆ ಕೊರೊನಾ ಸೋಂಕು ತಗುಲಿರಬಹುದು ಎಂದು ಬುಧವಾರವೇ ಕಾರಾಗೃಹದ ವೈದ್ಯರು ಅಂದಾಜಿಸಿದ್ದರು. ವೈದ್ಯರ ಊಹೆ ಸರಿಯಾಗಿದ್ದು ಗುರುವಾರ ಅವರಿಗೆ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

ಬಿಡುಗಡೆಗೂ ಮುನ್ನ ವಿಕೆ ಶಶಿಕಲಾ ಆರೋಗ್ಯದಲ್ಲಿ ಏರುಪೇರು, ಬೆಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲು
ಕೊರೊನಾ ಮಾತ್ರವಲ್ಲದೆ ಟೈಪ್‌-2 ಡಯಾಬೆಟಿಸ್‌, ಅಧಿಕ ರಕ್ತದೊತ್ತಡ, ಹೈಪೋಥೈರಾಯ್ಡಿಸಮ್, ತೀವ್ರ ಉಸಿರಾಟದ ಸಮಸ್ಯೆಯಿಂದ ಶಶಿಕಲಾ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕ (ಐಸಿಯು)ಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ 2017ರಲ್ಲಿ ಶಶಿಕಲಾ, ಇಳವರಸಿ ಮತ್ತು ಸುಧಾಕರನ್‌ಗೆ 4 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಇದಾದ ಬಳಿಕ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದರು.

ಇದೇ ಜನವರಿ 27 ರಂದು ಶಶಿಕಲಾ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಎರಡು ದಿನಗಳ ಹಿಂದೆ ಅವರ ವಕೀಲ ರಾಜ ಸೆಂತೂರ್‌ ಪಾಂಡಿಯನ್‌ ತಿಳಿಸಿದ್ದರು. ಇನ್ನೇನು ಬಿಡುಗಡೆಗೆ ಒಂದು ವಾರ ಇದೆ ಎನ್ನುವಾಗ ಅವರು ಅನಾರೋಗ್ಯಕ್ಕೀಡಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ