ಆ್ಯಪ್ನಗರ

ವಾಯುಮಾರ್ಗದಲ್ಲಿಯೂ ಯೋಗಿಗೆ ಭದ್ರತೆ

ಉತ್ತರ ಪ್ರದೇಶ ಸಿಎಂ ಅವರಿಗೆ ಈಗ ರಾಷ್ಟ್ರೀಯ ಭದ್ರತಾ ಕಮಾಂಡೊ ರಕ್ಷಣೆ ಇದೆ. ಇನ್ನುಮುಂದೆ ಯಾವ ಮಾರ್ಗದಲ್ಲಿ ಅವರು ಪ್ರಯಾಣ ಕೈಗೊಂಡರೂ ಭದ್ರತೆ ಇರುತ್ತದೆ.

Vijaya Karnataka 2 Dec 2018, 5:00 am
ಲಖನೌ: ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಪ್ರಯಾಣದ ವೇಳೆ ಭೂ ಮಾರ್ಗ ಮಾತ್ರವಲ್ಲದೇ ವಾಯು ಹಾಗೂ ಜಲಮಾರ್ಗಗಳಲ್ಲಿಯೂ ರಕ್ಷಣೆ ನೀಡಲು ಸರಕಾರ ತೀರ್ಮಾನಿಸಿದೆ.
Vijaya Karnataka Web 0112BN0328YOGI

''ಮುಖ್ಯಮಂತ್ರಿಗೆ ಜೀವ ಬೆದರಿಕೆ ಇರುವ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಸಂಪುಟವು ಈ ನಿರ್ಧಾರ ಕೈಗೊಂಡಿದೆ. ಆ ಬಳಿಕ ಮುಖ್ಯಮಂತ್ರಿಯವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಈ ಸಂಬಂಧ ನಿಯಮಗಳಿಗೆ ಅಗತ್ಯ ತಿದ್ದುಪಡಿ ತರಲಾಗಿದೆ,'' ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ''ಮುಖ್ಯಮಂತ್ರಿಯವರಿಗೆ ಈಗ ರಾಷ್ಟ್ರೀಯ ಭದ್ರತಾ ಕಮಾಂಡೊ (ಎನ್‌ಎಸ್‌ಜಿ) ರಕ್ಷಣೆ ಇದೆ. ಇನ್ನುಮುಂದೆ ಯಾವ ಮಾರ್ಗದಲ್ಲಿ ಅವರು ಪ್ರಯಾಣ ಕೈಗೊಂಡರೂ ಭದ್ರತೆ ಇರುತ್ತದೆ. ಇದು ರಹಸ್ಯ ವಿಷಯವಾಗಿರುವುದರಿಂದ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ,'' ಎಂದು ಅಧಿಕಾರಿ ತಿಳಿಸಿದ್ದಾರೆ.
ಆದಿತ್ಯನಾಥ್‌ ಅವರ ನಿವಾಸ ಹಾಗೂ ಕಚೇರಿಯಲ್ಲಿ ಈಗಾಗಲೇ ಭದ್ರತೆ ಹೆಚ್ಚಿಸಲಾಗಿದೆ. ರಸ್ತೆ ಮೂಲಕ ಪ್ರಯಾಣಿಸುವಾಗ ನೀಡುತ್ತಿದ್ದ ಭದ್ರತೆಯನ್ನೂ ಹೆಚ್ಚಿಸಲಾಗಿದೆ.

ವಾಯುಮಾರ್ಗದಲ್ಲಿ ಹೇಗೆ?
ಈಗ ಮುಖ್ಯಮಂತ್ರಿ ಹೆಲಿಕಾಪ್ಟರ್‌ ಅಥವಾ ವಿಮಾನದಲ್ಲಿ ಪ್ರಯಾಣಿಸಿದರೆ ಅವರೊಂದಿಗೆ ಆಪ್ತ ಸಿಬ್ಬಂದಿ, ಸಚಿವರು ಮತ್ತು ಕಾಕ್‌ಪಿಟ್‌ ಸಿಬ್ಬಂದಿ ಪ್ರಯಾಣಿಸಬಹುದು. ಇನ್ನುಮುಂದೆ ಅವರೊಂದಿಗೆ ಭದ್ರತಾ ಸಿಬ್ಬಂದಿಯೂ ಇರುತ್ತಾರೆ. ಸದ್ಯದ ವ್ಯವಸ್ಥೆಯಲ್ಲಿ ವಿಮಾನ ನಿಲ್ದಾಣ ಅಥವಾ ಹೆಲಿಪ್ಯಾಡ್‌ವರೆಗೆ ಎನ್‌ಎಸ್‌ಜಿ ಸಿಬ್ಬಂದಿ ರಕ್ಷಣೆ ನೀಡುತ್ತಾರೆ. ವಿಮಾನ/ಕಾಪ್ಟರ್‌ ಇಳಿಯುತ್ತಿದ್ದಂತೆ ಪುನಃ ಅಲ್ಲಿ ಭದ್ರತಾ ಸಿಬ್ಬಂದಿ ರಕ್ಷಣೆ ನೀಡುತ್ತಾರೆ. ವಿಮಾನ/ಕಾಪ್ಟರ್‌ ಅನಿರೀಕ್ಷಿತವಾಗಿ ಬೇರೆ ಸ್ಥಳಗಳಲ್ಲಿ ಲ್ಯಾಂಡ್‌ ಆದರೆ ಭದ್ರತೆ ಇರುವುದಿಲ್ಲ ಎಂಬ ಕಾರಣದಿಂದ ಭದ್ರತಾ ಸಿಬ್ಬಂದಿ ಜತೆಗೇ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಜಲಮಾರ್ಗದಲ್ಲಿ ಏನು?
ಒಂದೊಮ್ಮೆ ಮುಖ್ಯಮಂತ್ರಿ ಜಲಮಾರ್ಗದಲ್ಲಿ ಪ್ರಯಾಣಿಸಬೇಕಾಗಿ ಬಂದರೆ, ಭದ್ರತಾ ಸಿಬ್ಬಂದಿಯೂ ಜತೆಯಲ್ಲಿಯೇ ಪ್ರಯಾಣಿಸಬೇಕೇ ಅಥವಾ ಬೆಂಗಾವಲು ನೌಕೆಯಲ್ಲಿ ತೆರಳಬೇಕೇ ಎಂಬ ಜಿಜ್ಞಾಸೆ ನಡೆಯುತ್ತಿದೆ.

ಬೆದರಿಕೆ ಯಾರಿಂದ?
ಯೋಗಿ ಆದಿತ್ಯನಾಥ್‌ ಅವರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಮಧ್ಯಪ್ರದೇಶ ಸರಕಾರ ಕಳೆದ ಆಗಸ್ಟ್‌ನಲ್ಲಿ ಉತ್ತರ ಪ್ರದೇಶ ಸರಕಾರಕ್ಕೆ ಮಾಹಿತಿ ನೀಡಿತ್ತು. ಕೆಲವೇ ದಿನಗಳ ಬಳಿಕ ಕೇಂದ್ರ ಗುಪ್ತಚರ ಇಲಾಖೆಯೂ ಯೋಗಿ ಜೀವಕ್ಕೆ ಬೆದರಿಕೆ ಇದೆ ಎಂಬ ಮಾಹಿತಿ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ