ಆ್ಯಪ್ನಗರ

ದಂಪತಿಗೆ ಥಳಿಸಿ ಚಿನ್ನಾಭರಣ, ನಗದು ಕಳವು

ಮನೆಯ ಕಿಟಕಿಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ ಅನಾಮತ್ತಾಗಿ ತೆಗೆದಿರಿಸಿ ಮನೆಯೊಳಗೆ ನುಗ್ಗಿದ್ದಲ್ಲದೆ, ಮನೆಯ ಮಾಲೀಕರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಘಟನೆ ನಗರದ ಗಾಬ್ರೆ ಬಡಾವಣೆಯಲ್ಲಿ ನಡೆದಿದೆ.

Vijaya Karnataka 14 Mar 2019, 4:55 pm
ಕಲಬುರಗಿ :ಮನೆಯ ಕಿಟಕಿಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್‌ ಅನಾಮತ್ತಾಗಿ ತೆಗೆದಿರಿಸಿ ಮನೆಯೊಳಗೆ ನುಗ್ಗಿದ್ದಲ್ಲದೆ, ಮನೆಯ ಮಾಲೀಕರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಘಟನೆ ನಗರದ ಗಾಬ್ರೆ ಬಡಾವಣೆಯಲ್ಲಿ ನಡೆದಿದೆ.
Vijaya Karnataka Web
ದಂಪತಿಗೆ ಥಳಿಸಿ ಚಿನ್ನಾಭರಣ, ನಗದು ಕಳವು


ಇಲ್ಲಿನ ಹೈಕೋರ್ಟ್‌ ಪೀಠದ ನ್ಯಾಯವಾದಿ ವೀರಣ್ಣಗೌಡ ಬಿರಾದಾರ್‌ ಅವರ ಮನೆಗೆ ಬುಧವಾರ ನಸುಕಿನ ಸುಮಾರು 3ರ ಹೊತ್ತಿನಲ್ಲಿ ನುಸುಳಿದ ಇಬ್ಬರು ಮುಸುಕುಧಾರಿ ಕಳ್ಳರು ಮೊದಲು ವೀರಣ್ಣಗೌಡ ಹಾಗೂ ಅವರ ಪತ್ನಿ ಸಂಗೀತಾ ಬಿರಾದಾರ್‌ ಮೇಲೆ ಕಟ್ಟಡ ನಿರ್ಮಾಣದ ವೇಳೆ ಸೆಂಟ್ರಿಂಗ್‌ ಬಿಗಿಯಲು ಬಳಸುವ ಕಟ್ಟಿಗೆಯಿಂದ ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ, ದಂಪತಿ ಅಸ್ವಸ್ಥರಾದ ಬಳಿಕ ಮನೆಯಲ್ಲಿದ್ದ 20 ತೊಲಾ ಚಿನ್ನಾಭರಣ ಹಾಗೂ ರೂ. 50 ಸಾವಿರ ನಗದು ಹೊತ್ತೊಯ್ದಿದ್ದಾರೆ.

ಕಳ್ಳರು ನಡೆಸಿದ ಹಲ್ಲೆಯಿಂದ ಗಾಯಗೊಂಡಿರುವ ದಂಪತಿಯನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ಅರಿಯುತ್ತಿದ್ದಂತೆಯೇ ಸ್ಟೇಷನ್‌ ಬಜಾರ್‌ ಪೊಲೀಸರು ಹಾಗೂ ಶ್ವಾನದಳ ಸಿಬ್ಬಂದಿ ಬಿರಾದಾರ್‌ ನಿವಾಸಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಅಗತ್ಯ ಪುರಾವೆಗಳನ್ನು ಸಂಗ್ರಹಿಸಿದ್ದಾರೆ.

ಈ ಮಧ್ಯೆ, ಎಸ್ಪಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಸ್ಟೇಷನ್‌ ಬಜಾರ್‌ ಸಿಪಿಐ ಹಾಗೂ ಪಿಎಸ್‌ಐ ಸೇರಿದಂತೆ ಇನ್ನಿತರರು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎರಡು ವಿಶೇಷ ತಂಡ ರಚನೆ

ನ್ಯಾಯವಾದಿ ವೀರಣ್ಣಗೌಡ ಬಿರಾದಾರ್‌ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣ ಬೇಧಿಸಲು ಎರಡು ಪ್ರತ್ಯೇಕ ಪೊಲೀಸ್‌ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌ ತಿಳಿಸಿದರು.

ವಿಜಯ ಕರ್ನಾಟಕ ಪ್ರತಿನಿಧಿಯೊಂದಿಗೆ ಮಾತನಾಡಿ ಈ ಕುರಿತು ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಮಧ್ಯಾಹ್ನ ಹಾಗೂ ಸಂಜೆ ಪೊಲೀಸ್‌ ಅಧಿಕಾರಿಗಳೊಂದಿಗೆ ಎರಡು ಸುತ್ತಿನ ವಿಶೇಷ ಸಭೆ ಕೈಗೊಳ್ಳಲಾಗಿದೆ. ದೊರೆತಿರುವ ಪುರಾವೆಗಳ ಆಧಾರದ ಮೇಲೆ ಕಳ್ಳರನ್ನು ಶೀಘ್ರ ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ