Please enable javascript.ಕನ್ನಡ ಸಾಹಿತ್ಯಕ್ಕೆ ವಿದ್ವತ್ತಿನ ಬರ - ಕನ್ನಡ ಸಾಹಿತ್ಯಕ್ಕೆ ವಿದ್ವತ್ತಿನ ಬರ - Vijay Karnataka

ಕನ್ನಡ ಸಾಹಿತ್ಯಕ್ಕೆ ವಿದ್ವತ್ತಿನ ಬರ

ವಿಕ ಸುದ್ದಿಲೋಕ 6 Jun 2017, 4:35 pm
Subscribe

ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣದ ಜೊತೆಗೆ ಕನ್ನಡ ಸಾಹಿತ್ಯಕ್ಕೆ ವಿದ್ವತ್ತಿನ ಬರವೂ ಕಾಡುತ್ತಿದ್ದು, ಇದರಿಂದ ಕನ್ನಡ ಭಾಷೆ ಹೆಚ್ಚು ಸಂಕಟ ಎದುರಿಸುತ್ತಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಆತಂಕ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯಕ್ಕೆ ವಿದ್ವತ್ತಿನ ಬರ

ಕಲಬುರಗಿ: ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಕಾರಣದ ಜೊತೆಗೆ ಕನ್ನಡ ಸಾಹಿತ್ಯಕ್ಕೆ ವಿದ್ವತ್ತಿನ ಬರವೂ ಕಾಡುತ್ತಿದ್ದು, ಇದರಿಂದ ಕನ್ನಡ ಭಾಷೆ ಹೆಚ್ಚು ಸಂಕಟ ಎದುರಿಸುತ್ತಿದೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಐಡಿಯಲ್‌ ಫೈಲ್‌ ಆರ್ಟ್‌ ಸಂಸ್ಥೆಯ ಅನಿಕೇತನ ಸಭಾಂಗಣದಲ್ಲಿ ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ಸಂವಾದ ಸಮಾರಂಭದಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ಷ್ಮ ದೃಷ್ಟಿ ಇರಬೇಕಾಗುತ್ತದೆ. ಅದರಲ್ಲೂ, ಸ್ವಚ್ಛ ಮನಸ್ಸಿನ ಜೊತೆಗೆ ಮತ್ತು ಪೂರ್ವಗ್ರಹ ಪೀಡಿತವಲ್ಲದ ಮನಸ್ಸುಗಳು ಸಹ ಕಾರ್ಯಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿದೆ ಎಂಬುದೀಗ ಸಮಾಧಾನವಾಗಿ ಉಳಿದಿಲ್ಲ. ಪಕ್ಕದ ತಮಿಳು ಭಾಷೆಗೆ ಇಂಥದ್ದೇ ಸ್ಥಾನ ದೊರೆತ ನಂತರ ಅಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಆದರೆ ನಮ್ಮಲ್ಲಿ ಇನ್ನೂ ಅಂತಹ ಯಾವುದೇ ಹೇಳಿಕೊಳ್ಳುವ ಕೆಲಸ ಆಗಿಲ್ಲ. ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡ ಸಂಪುಟೀಕರಣ ಆಗದ ಹೊರತು; ಕನ್ನಡ ಕಟ್ಟುವ ದಾರಿಯಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ ಎಂದು ಹೇಳಿದರು.

ನಮ್ಮಲ್ಲಿ ಹೆಚ್ಚು ಜನರು ಕನ್ನಡ ಸಂಗೋಪನಾ ಭಾಷೆ ಎಂಬುದನ್ನು ಮರೆತ್ತಿದ್ದಾರೆ. ಮಾತೃಭಾಷೆ ಎಂಬುದು ಮೋಕ್ಷದ ಸಾಧನೆ ಎನ್ನುವಂತಾಗಬೇಕು. ಅದನ್ನು ಬಿಟ್ಟು ಕೇವಲ ಕಮರ್ಷಿಯಲ್‌ ಯತ್ನಗಳು ನಡೆದರೆ ಆ ಪ್ರಯತ್ನ ಪ್ರಾಣಘಾತುಕ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂಗ್ಲಿಷ್‌ನಿಂದಲೇ ಎಲ್ಲವೂ ಸಾಧ್ಯ ಎನ್ನುವ ನಂಬಿಕೆ ಬೇಡ. ಜರ್ಮನಿ, ಜಪಾನ್‌, ಟರ್ಕಿ ತಮ್ಮ ತಮ್ಮ ಮಾತೃಭಾಷೆಯಲ್ಲೇ ತಂತ್ರಜ್ಞಾನ ಅಭಿವೃದ್ಧಿಪಡಿಸಿಕೊಂಡಿವೆ. ತಪ್ಪಿಯೂ ಇಂಗ್ಲಿಷ್‌ ಬಳಸುವುದಿಲ್ಲ. ಅಂತಹ ಸಾಂಸ್ಕೃತಿಕ ಮತ್ತು ವಿದ್ವತ್ತನ್ನು ಕನ್ನಡಕ್ಕೆ ಅಳವಡಿಸುವ ಕೆಲಸ ಆಗಬೇಕು ಎಂದರು.

ಇದಕ್ಕೂ ಮುನ್ನ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಹಿ.ಚಿ.ಬೋರಲಿಂಗಯ್ಯ ಸಮಾರಂಭ ಉದ್ಘಾಟಿಸಿ, ಆತುರಕ್ಕೆ ಕತೆ, ಕವನ ಬರೆದವರೇ ಮೊದಲ ಸಾಲಿನ ಲೇಖಕರಾಗಿ ಗುರ್ತಿಸಿಕೊಳ್ಳುವಂತಾಗಿದೆ. ಹೀಗಾಗಿ, ಕನ್ನಡದ ಪರಂಪರೆ ಕುರಿತು ಬರೆಯುವವರು ಎರಡನೇ ಸಾಲಿಗೆ ನಿಲ್ಲುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂತಾರಾಷ್ಟ್ರೀಯ ಚಿತ್ರಕಲಾವಿದ ಡಾ.ವಿ.ಜಿ.ಅಂದಾನಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಚ್‌.ಟಿ.ಪೋತೆ ಮಾತನಾಡಿದರು.

ಡಾ.ಎಂ.ಬಿ.ಕಟ್ಟಿ ಸ್ವಾಗತಿಸಿದರು. ಡಾ.ವಸಂತ ನಾಸಿ ನಿರೂಪಿಸಿದರು. ರೇವಣಸಿದ್ದಪ್ಪ ವಂದಿಸಿದರು.

ಬಿಡಿಬಿಡಿ ಅಲ್ಲ; ಸಮಗ್ರ ಕಲ್ಪನೆ ಅಗತ್ಯ

ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ದೊರಕಿದೆ ಎಂಬುದು ಬಿಟ್ಟರೆ ಆ ನಿಟ್ಟಿನಲ್ಲಿ ಏನೂ ಆಗಿಲ್ಲ. ಅದಕ್ಕಾಗಿ 10 ವರ್ಷಗಳ ಸಮಗ್ರ ಯೋಜನೆ ರೂಪಿಸಬೇಕು. ಅದಕ್ಕಾಗಿ ಸಮಗ್ರ ಕಲ್ಪನೆ ಇರಬೇಕೆ ಹೊರತು; ಬಿಡಿಬಿಡಿ ಪ್ರಯತ್ನಗಳು ನಡೆದರೆ ಅದರ ಲಾಭ ದಕ್ಕುವುದಿಲ್ಲ ಎಂದು ಪ್ರೊ.ಮಲ್ಲೇಪುರಂ ಕಿವಿಮಾತು ಹೇಳಿದರು.

ಇಂಗ್ಲಿಷ್‌ ಮತ್ತು ಸಂಸ್ಕೃತ ಬೌದ್ಧಿಕ ಭಾಷೆಗಳಾದರೂ, ಕನ್ನಡ ನಮ್ಮ ಹೃದಯವಷ್ಟೇ ಅಲ್ಲ; ಭಾವಾಭಿವ್ಯಕ್ತಿಗೆ ಹೆಚ್ಚು ಹತ್ತಿರದ ಮಾಧ್ಯಮ. ಡಾ.ಬಿ.ಆರ್‌.ಅಂಬೇಡ್ಕರ್‌ ಎಷ್ಟೇ ಇಂಗ್ಲಿಷ್‌ನಲ್ಲಿ ಬರೆದಿದ್ದರೂ ಅವರು ಮಾತೃಭಾಷೆಯಾಗಿದ್ದ ಮರಾಠಿಯ ತಳಪಾಯ ಚೆನ್ನಾಗಿ ಬಲ್ಲವರಾಗಿದ್ದರು. ಅದೇ ರೀತಿ ಇದೀಗ ಹುಟ್ಟಿರುವ ಹಿಂದಿ ವಿರುದ್ಧ ಭಾವ ಒಳ್ಳೆಯದು-ಕೆಟ್ಟದ್ದು ಎಂದು ಚರ್ಚಿಸುವುದಕ್ಕಿಂತಲೂ ಇಡಿ ರಾಷ್ಟ್ರದ ಆಡಳಿತಕ್ಕೆ ಭಾವ ಬೆಸೆಯುವ ಹಿಂದಿಯ ಜೊತೆಗೆ, ಸಾಂಸ್ಕೃತಿಕ ಭಾಷೆಯಾಗಿ ಕನ್ನಡ ಯಾವತ್ತೂ ನಮ್ಮೊಟ್ಟಿಗೆ ಇರಬೇಕಾಗುತ್ತದೆ ಎಂದು ನುಡಿದರು.

ಆಳ, ಸತ್ವ, ಅಂತಃಸತ್ವದ ಕೊರತೆ

ಇಂದು ಬಹುತೇಕರು ಹಳೆಗನ್ನಡದ ತಂಟೆಗೆ ಹೋಗುವುದಿಲ್ಲ. ಹೀಗಾಗಿ, ಕನ್ನಡ ಪರಂಪರೆಯ ಮಹತ್ವ ಗೊತ್ತಿಲ್ಲದೆ ಬರೆಯುವವರು ಹೆಚ್ಚಾಗಿದ್ದಾರೆ. ಇದು ಸಹಜವಾಗಿಯೇ ಪರಂಪರಾ ಸಾಹಿತ್ಯ ಮತ್ತು ಇಂದಿನ ಸಾಹಿತ್ಯ ಎಂಬ ಎರಡು ವರ್ಗ ಸೃಷ್ಟಿಯಾಗುವಂತೆ ಮಾಡಿದೆ ಎಂದು ಪ್ರೊ.ಹಿ.ಚಿ.ಬೋರಲಿಂಗಯ್ಯ ಬೇಸರ ವ್ಯಕ್ತಪಡಿಸಿದರು.

ಯೂರೋಪ್‌ ಖಂಡದ ಪುಟ್ಟ ಪುಟ್ಟ ದೇಶಗಳು ತಮ್ಮ ತಮ್ಮ ಮಾತೃಭಾಷೆಯಲ್ಲಿಯೇ ತಂತ್ರಜ್ಞಾನ ಮತ್ತು ವೈದ್ಯಕೀಯ ಶಾಸ್ತ್ರದಂತಹ ಕಷ್ಟದ ವಿಷಯ ಬೋಧಿಸುತ್ತವೆ. ನಮ್ಮಲ್ಲಿ ಸ್ವತಃ ರಾಜಕಾರಣಿಗಳೇ ತಮ್ಮ ಹೆಸರಿನಲ್ಲಿ ವೈಭವದ ಖಾಸಗಿ ಶಾಲೆಗಳನ್ನು ಆರಂಭಿಸಿ ಕನ್ನಡದ ಅವನತಿಗೆ ಕಾರಣರಾಗುತ್ತಿದ್ದಾರೆ ಎಂದರು.

ನಮ್ಮ ನಮ್ಮ ಮಧ್ಯದ ಸಂಘರ್ಷಗಳ ಮಧ್ಯೆಯೂ ಸೈದ್ಥಾಂತಿಕ ಚರ್ಚೆಗಳು ನಡೆಯುವಂತಾದರೆ ನೈಜ ಚಿಂತನೆಗಳು ಹೊರಬೀಳಲು ಸಾಧ್ಯವಾಗುತ್ತದೆ.

-ಪ್ರೊ.ಎಚ್‌.ಟಿ.ಪೋತೆ, ನಿರ್ದೇಶಕರು, ಕನ್ನಡ ಅಧ್ಯಯನ ಸಂಸ್ಥೆ, ಗುವಿಕ

ಐವರಿಗೆ ಪ್ರಶಸ್ತಿ ಪ್ರದಾನ

ಪ್ರೊ.ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ 5ನೇ ವರ್ಷಾಚರಣೆ ಪ್ರಯುಕ್ತ ಐವರಿಗೆ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಡಾ.ನೀಲಗಿರಿ ತಳವಾರ ಅವರಿಗೆ ಜೀವಮಾನ ಸಾಧನೆಗಾಗಿ ಪ್ರೊ.ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ, ಡಾ.ಶಿವಾನಂದ ಕೆಳಗಿನಮನಿ ಅವರಿಗೆ ಬಿ.ಶ್ಯಾಮಸುಂದರ್‌ ಪುಸ್ತಕ ಬಹುಮಾನ (ಕನಕದಾಸರ ಕೀರ್ತನೆಗಳ ಸಾಂಸ್ಕೃತಿಕ ಅನನ್ಯತೆ), ನಾಗೇಶ ತಳವಾರ ಅವರಿಗೆ ಶರಣ ಉರಿಲಿಂಗ ಪೆದ್ದಿ ಪುಸ್ತಕ ಬಹುಮಾನ (ಅವ್ವ ಮತ್ತು ಸೈಕಲ್‌ ಕಥಾ ಸಂಕಲನ), ಪ್ರೇಮಾ ಹೂಗಾರ ಅವರಿಗೆ ರಮಾಬಾಯಿ ಅಂಬೇಡ್ಕರ್‌ ಪುಸ್ತಕ ಬಹುಮಾನ (ಗಜಲ್‌ ಸಂಕಲನ) ಹಾಗೂ ಡಾ. ಜಗನ್ನಾಥ ಸಿಂಧೆ ಅವರಿಗೆ ಜ್ಯೋತಿಬಾ ಫುಲೆ ಪುರಸ್ಕಾರ (ಸಾಮಾಜಿಕ ಹಾಗೂ ಸಾಹಿತ್ಯಿಕ ಸೇವೆ) ನೀಡಿ ಸನ್ಮಾನಿಸಲಾಯಿತು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ