ಆ್ಯಪ್ನಗರ

ಗುತ್ತಿಗೆದಾರ ನಾಪತ್ತೆ; ಪಾಲಿಕೆ ಅಧಿಕಾರಿಗಳಿಗೆ ಚಿಂತೆ

ಇಲ್ಲಿನ ಜಗತ್‌-ಎಸ್‌ವಿಪಿ ವೃತ್ತದವರೆಗೆ 'ಸಿಎಂ ಪ್ಯಾಕೇಜ್‌ -3' ಅಡಿ ಕೈಗೆತ್ತಿಕೊಂಡಿದ್ದ ಚರಂಡಿ ಮತ್ತು ರಸ್ತೆ ಮರು ನಿರ್ಮಾಣ ಕಾಮಗಾರಿಯ ಟೆಂಡರ್‌ ಪಡೆದ ಕಂಟ್ರಾಕ್ಟರ್‌ ನಾಪತ್ತೆ ಆಗಿರುವ ಕಾರಣಕ್ಕೆ ಕಾಮಗಾರಿ ನಿಂತು ಹೋಗಿದೆ. ಕಳೆದ ಏಪ್ರಿಲ್‌ 30ಕ್ಕೆ ಪೂರ್ಣಗೊಳ್ಳಬೇಕಿದ್ದ ಈ ಕಾಮಗಾರಿಯ ಕುರಿತು ಆಸಕ್ತಿ ತೋರದ ಗುತ್ತಿಗೆದಾರನನ್ನು ಪತ್ತೆ ಹಚ್ಚಲಾಗದೆ ಪಾಲಿಕೆ ಅಧಿಕಾರಿಗಳು ಪರದಾಡುತ್ತಿದ್ದಾರೆ.

Vijaya Karnataka 24 Nov 2018, 5:00 am
ಮಹೇಶ್‌ ಕುಲಕರ್ಣಿ ಕಲಬುರಗಿ :ಇಲ್ಲಿನ ಜಗತ್‌-ಎಸ್‌ವಿಪಿ ವೃತ್ತದವರೆಗೆ 'ಸಿಎಂ ಪ್ಯಾಕೇಜ್‌ -3' ಅಡಿ ಕೈಗೆತ್ತಿಕೊಂಡಿದ್ದ ಚರಂಡಿ ಮತ್ತು ರಸ್ತೆ ಮರು ನಿರ್ಮಾಣ ಕಾಮಗಾರಿಯ ಟೆಂಡರ್‌ ಪಡೆದ ಕಂಟ್ರಾಕ್ಟರ್‌ ನಾಪತ್ತೆ ಆಗಿರುವ ಕಾರಣಕ್ಕೆ ಕಾಮಗಾರಿ ನಿಂತು ಹೋಗಿದೆ. ಕಳೆದ ಏಪ್ರಿಲ್‌ 30ಕ್ಕೆ ಪೂರ್ಣಗೊಳ್ಳಬೇಕಿದ್ದ ಈ ಕಾಮಗಾರಿಯ ಕುರಿತು ಆಸಕ್ತಿ ತೋರದ ಗುತ್ತಿಗೆದಾರನನ್ನು ಪತ್ತೆ ಹಚ್ಚಲಾಗದೆ ಪಾಲಿಕೆ ಅಧಿಕಾರಿಗಳು ಪರದಾಡುತ್ತಿದ್ದಾರೆ.
Vijaya Karnataka Web contractor missing worry about the corporation authorities
ಗುತ್ತಿಗೆದಾರ ನಾಪತ್ತೆ; ಪಾಲಿಕೆ ಅಧಿಕಾರಿಗಳಿಗೆ ಚಿಂತೆ


ಮಹಾನಗರ ಪಾಲಿಕೆಗೆ ಮುಖ್ಯಮಂತ್ರಿಗಳ ಮೂರನೇ ವಿಶೇಷ ಪ್ಯಾಕೇಜ್‌ ಅಡಿ ಒಟ್ಟು ರೂ.9 ಕೋಟಿ 90 ಲಕ್ಷ ಅಂದಾಜು ವೆಚ್ಚದಲ್ಲಿ ಬೃಹತ್‌ ಚರಂಡಿ ಮತ್ತು ರಸ್ತೆಯ ರಿ-ಕಾರ್ಪೆಟಿಂಗ್‌ ( ಮರು ನಿರ್ಮಾಣ) ಕಾಮಗಾರಿಯನ್ನು ಆಂಧ್ರ ಪ್ರದೇಶ ಮೂಲದ ಗುತ್ತಿಗೆದಾರ ಪಡೆದಿದ್ದಾರೆ. 2018ರ ಏಪ್ರಿಲ್‌ 30ಕ್ಕೆ ಈ ಕಾಮಗಾರಿ ಪೂರ್ಣಗೊಳಿಸಬೇಕೆಂದು ಡೆಡ್‌ಲೈನ್‌ ನೀಡಲಾಗಿತ್ತು. ಆದರೆ, ಡೆಡ್‌ಲೈನ್‌ ಮುಗಿದು ಏಳು ತಿಂಗಳಾದರೂ ಕಾಮಗಾರಿ ಪೂರ್ಣಗೊಳ್ಳುವ ಮಾತಿರಲಿ; ಕಾಮಗಾರಿ ಶೇ.10ರಷ್ಟು ಸಹ ಪ್ರಗತಿ ಕಾಣದಿರುವುದು ಪಾಲಿಕೆ ಅಧಿಕಾರಿಗಳಿಗೆ ಕೈ ಕೈ ಹಿಸುಕಿಕೊಳ್ಳುವ ಅಸಹಾಯಕ ಸ್ಥಿತಿ ಸೃಷ್ಟಿಸಿದೆ.

ಜಗತ್‌-ಎಸ್‌ವಿಪಿ ವೃತ್ತ ಮಧ್ಯದ ಈ ರಸ್ತೆಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಆಳುದ್ದದ ತಗ್ಗು ತೋಡಿಟ್ಟಿರುವುದು ಬಿಟ್ಟರೆ ಉಳಿದಂತೆ ನಯಾಪೈಸೆ ಕಾಮಗಾರಿಯೂ ಪ್ರಗತಿ ಕಂಡಿಲ್ಲ. ಈ ಗುತ್ತಿಗೆದಾರ ಸೃಷ್ಟಿಸಿದ ಕೆಟ್ಟ ಪರಂಪರೆಯಿಂದಾಗಿ ಪಾಲಿಕೆಗೆ ಕೆಟ್ಟ ಹೆಸರು ಬರಬಾರದು ಎನ್ನುವ ಕಾರಣಕ್ಕೆ ಈವರೆಗೆ ಮೂರು ಬಾರಿ ಈ ಕಂಟ್ರಾಕ್ಟರ್‌ ಹೆಸರನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಆದಾಗ್ಯೂ, ಈ ಪ್ರಭಾವಿ ವ್ಯಕ್ತಿಯ ಕೈಯಿಂದ ಕಾಮಗಾರಿ ಕಸಿದುಕೊಂಡು, ಮರು ಟೆಂಡರ್‌ ಆಹ್ವಾನಿಸುವ ಗೋಜಿಗೆ ಪಾಲಿಕೆ ಅಧಿಕಾರಿಗಳು ಹೋಗದೆ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅತಿ ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಉದ್ದೇಶಿತ ಕಾಮಗಾರಿ ಕೈಗೊಳ್ಳದೆ ಇರುವುದರಿಂದ ಸುಗಮ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಆದರೆ, ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪಾಲಿಕೆಯ ಅಧಿಕಾರಿಗಳು ಮಾತ್ರ ಗುತ್ತಿಗೆದಾರ ತಮ್ಮ ಫೋನ್‌ ಕರೆ ಸ್ವೀಕರಿಸುತ್ತಿಲ್ಲ ಎಂಬ ನೆಪ ಮುಂದಿಟ್ಟು ನಿರ್ಲಿಪ್ತ ನೀತಿಗೆ ಜೋತು ಬಿದ್ದಿದ್ದಾರೆ ಎಂದು ಮಾಜಿ ಮೇಯರ್‌ವೊಬ್ಬರು ಟೀಕಿಸುತ್ತಾರೆ.

ಡಿಎಚ್‌ಒ ಕಚೇರಿ ದಾರಿ ಬಂದ್‌

ಮೂರನೇ ಸಿಎಂ ಪ್ಯಾಕೇಜ್‌ ಅಡಿ ಕೈಗೊಳ್ಳಬೇಕಿದ್ದ ಚರಂಡಿ ಮತ್ತು ರಸ್ತೆ ಮರು ನಿರ್ಮಾಣ ಕಾಮಗಾರಿಗಾಗಿ ಕಲಬುರಗಿಯ ಡಿಎಚ್‌ಒ ಕಚೇರಿ ಎದುರಿನ ರಸ್ತೆಯನ್ನು ಅಗೆಯಲಾಗಿದೆ. ಹೀಗಾಗಿ, ಡಿಎಚ್‌ಒ ಕಚೇರಿ ಆವರಣದಲ್ಲಿರುವ ಮಲೇರಿಯಾ ನಿಯಂತ್ರಣಾಧಿಕಾರಿಗಳ ಕಚೇರಿ, ಫೈಲೇರಿಯಾ, ಕಾಲರಾ, ಕುಷ್ಠ, ಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಚೇರಿಗೆ ಬರುವ ಸಿಬ್ಬಂದಿ ಹಾಗೂ ಸಮಸ್ಯೆ ಪೀಡಿತ ವ್ಯಕ್ತಿಗಳು ಆವರಣ ಪ್ರವೇಶಿಸಲು ಪರದಾಡುವಂತಾಗಿದೆ. ಅದರಲ್ಲೂ, ಕ್ಷಯ ರೋಗಕ್ಕೆ ಚಿಕಿತ್ಸೆ ಬಯಸಿ ಬರುವ ವ್ಯಕ್ತಿಗಳಂತು ತಗ್ಗಿನಲ್ಲಿ ಇಳಿದು ಆವರಣ ಪ್ರವೇಶಿಸಬೇಕಾದರೆ ಉಸಿರು ಬಿಗಿ ಹಿಡಿಯಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಡಿಎಚ್‌ಒ ಕಚೇರಿಯ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ಜಗತ್‌ ವೃತ್ತದಿಂದ ಎಸ್‌ವಿಪಿ ವೃತ್ತದ ರಸ್ತೆ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರೊಂದಿಗೆ ಮಾತನಾಡಲಾಗುವುದು. ಮುಂದಿನ ಒಂದು ವಾರದಲ್ಲಿ ಎಲ್ಲವೂ ಸರಿಪಡಿಸಲಾಗುವುದು.

-ಪೆದ್ದಪ್ಪಯ್ಯ, ಕಮಿಷನರ್‌, ಮಹಾನಗರ ಪಾಲಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ