ಆ್ಯಪ್ನಗರ

ಕಲಬುರಗಿಗೆ ಕಾಲಿಟ್ಟ ‘ಮಾರುತಗಳ ಹಂಗಾಮಿ’

ಚಾತಕ ಕೂಗಿದರೆ, ಮಾನ್ಸೂನ್‌ ಬಂತೆಂದೇ ಅರ್ಥ ! ಇಂತಹ ವರಿಷ್ಠ ಸ್ಥಾನ ಹೊಂದಿರುವ ಪಕ್ಷಿ ಈಗ ಕಲಬುರಗಿಗೆ ಅತಿಥಿಯಾಗಿ ಆಗಮಿಸಿದೆ.

ವಿಕ ಸುದ್ದಿಲೋಕ 23 Jun 2016, 4:41 pm

ಆತೀಶ್‌ ಬಿ. ಕನ್ನಾಳೆ

Vijaya Karnataka Web kalaburagige kliamrutagaa hagmi
ಕಲಬುರಗಿಗೆ ಕಾಲಿಟ್ಟ ‘ಮಾರುತಗಳ ಹಂಗಾಮಿ’


ಕಲಬುರಗಿ:
ಚಾತಕ ಕೂಗಿದರೆ, ಮಾನ್ಸೂನ್‌ ಬಂತೆಂದೇ ಅರ್ಥ ! ಇಂತಹ ವರಿಷ್ಠ ಸ್ಥಾನ ಹೊಂದಿರುವ ಪಕ್ಷಿ ಈಗ ಕಲಬುರಗಿಗೆ ಅತಿಥಿಯಾಗಿ ಆಗಮಿಸಿದೆ.

ಸಾಮಾನ್ಯವಾಗಿ ಮೇ ಮತ್ತು ಜೂನ್‌ ತಿಂಗಳಲ್ಲಿ ಕೇರಳಾ ಮತ್ತು ಆಫ್ರಿಕಾದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಲಸೆ ಬರುವ ಪೀಯ್ಡ… ಕುಕ್ಕೂ ಅಥವಾ ಜಾಕೊಬಿನ್‌ ಕುಕ್ಕೂ (ಚಾತಕ ಪಕ್ಷಿ) ಅತ್ಯಂತ ವಿರಳ. ಈ ಬಾನಾಡಿ ಸದಾ ಮಳೆಯೊಂದಿಗೆ ಸಂಚಾರ ಮಾಡುತ್ತ ಮಾನ್ಸೂನ್‌ ಇರುವೆಡೆಗೆ ಪ್ರಯಾಣ ಬೆಳೆಸುತ್ತಲೇ ಇರುತ್ತದೆ.

ಮುಂಗಾರು ಬೀಸುವ ದಿಕ್ಕನ್ನು ಗ್ರಹಿಸಿ ಅದೇ ದಿಕ್ಕಿನತ್ತ ಸಾಗುತ್ತದೆ. ಓಮನ್‌, ಸೌದಿಅರೇಬಿಯ, ಸೀಶೆಲ್ಸ್‌ ದೇಶಗಳಿಗೆ ಭೇಟಿ ನೀಡಿ, ಅರಬ್ಬಿ ಸಮುದ್ರ-ಹಿಂದೂ ಮಹಾಸಾಗರ ಹಾದು ಮೇ- ಜೂನ್‌ನಲ್ಲಿ ಭಾರತದ ವಿವಿಧ ರಾಜ್ಯಗಳಿಗೆ ಆಗಮಿಸುತ್ತದೆ.

ಹಿಂದೂ ಪುರಾಣ, ಮಹಾಕವಿ ಕಾಳಿದಾಸನ ಮೇಘದೂತ ಕಾವ್ಯದಲ್ಲಿಯೂ 'ಚಾತಕ ಪಕ್ಷಿ'ಯ ವರ್ಣನೆ ಇದೆ. ಕವಿ ಸಮಯದಲ್ಲಿ ಹೆಚ್ಚಾಗಿ ವರ್ಣಿತ ಪಕ್ಷಿ ಇದಾಗಿದೆ. ಸಾಮಾನ್ಯವಾಗಿ ಪ್ರತಿವರ್ಷ ಮಳೆಗಾಲ ಆರಂಭಕ್ಕೂ ಮುನ್ನವೇ ಈ ಹಕ್ಕಿಗಳು ದಿಢೀರ್‌ ಆಗಿ ಕಾಣಿಸಿಕೊಳ್ಳುತ್ತವೆ.

ಮೇ ಅಂತ್ಯ ಅಥವಾ ಜೂನ್‌ನಲ್ಲಿ 'ಚಾತಕ' ಕಣ್ಣಿಗೆ ಕಾಣಿಸಿಕೊಳ್ಳುತ್ತದೆ. ಕೋಗಿಲೆ ಪ್ರಭೇದಕ್ಕೆ ಸೇರುವ 'ಚಾತಕ' ಇಂಪಾದ ಧ್ವನಿಯಲ್ಲಿ ಕೂಗಲಾರಂಭಿಸಿದರೆ, ಮಳೆ ಆಗಮನದ ಸೂಚನೆ ಇದ್ದಂತೆ. ಮಾನ್ಸೂನ್‌ ಅನ್ನು ಅತ್ಯಂತ ನಿಖರವಾಗಿ ಅಳೆಯಬಲ್ಲ ಚಾಕಚಕ್ಯತೆ ಈ ಪಕ್ಷಿಗಿದೆ. ಇದು ಕಾಣಿಸಿಕೊಂಡರೆ ಭರಪೂರ ಮಳೆ ಆಗುವುದರಲ್ಲಿ ಸಂದೇಹವೇ ಇಲ್ಲ ಎನ್ನಲಾಗುತ್ತದೆ. ಹೀಗಾಗಿಯೇ ಇದನ್ನು 'ಮಾರುತಗಳ ಮುಂಗಾಮಿ' ಎಂದೂ ಕರೆಯಲಾಗುತ್ತದೆ.

ಕಳೆದ ವರ್ಷ ಮಳೆ ಅಭಾವದಿಂದಾಗಿ ಚಾತಕ ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ಬಂದಿರಲಿಲ್ಲ. ಆದರೆ, ಈ ಸಲ ಮೇ ತಿಂಗಳಲ್ಲೇ ಕಲಬುರಗಿ, ಬೀದರ್‌ ಮತ್ತು ಯಾದಗಿರಿ ಸೇರಿದಂತೆ ವಿವಿಧೆಡೆ ಕಾಣಿಸಿಕೊಂಡಿದ್ದು, ಮಳೆಗೆ ಯಾವುದೇ ಕೊರತೆ ಎಂಬ ಮಾತುಗಳೂ ಕೇಳಿಬರುತ್ತಿವೆ.

* ಜಾನಪದದಲ್ಲೂ ಎಲ್ಲಿಲ್ಲದ ಸ್ಥಾನ

ಇಂಗ್ಲಿಷ್‌ನಲ್ಲಿ 'ಪೀಯ್ಡ… ಕುಕ್ಕೂ ಅಥವಾ ಜಾಕೊಬಿನ್‌ ಕುಕ್ಕೂ' ಎಂದು ಕರೆಯಲಾಗುವ ಈ ಪಕ್ಷಿಗೆ ಸಂಸ್ಕೃತದಲ್ಲಿ 'ಚಾತಕ' ಎಂದೂ ಕರೆಯಲಾಗುತ್ತದೆ. ಜನಪದ ಮತ್ತು ವೇದಕಾಲದಲ್ಲೂ ಇದನ್ನು ಉಲ್ಲೇಖಿಸಲಾಗಿದ್ದು, ಹಿಂದೂ ಪುರಾಣಗಳೊಂದಿಗೆ ತಳುಕು ಹಾಕಿಕೊಂಡಿದೆ. ಗಾತ್ರದಲ್ಲಿ ಪಾರಿವಾಳಕ್ಕಿಂತ ಚಿಕ್ಕದಾಗಿರುವ ಉದ್ದ ಪುಕ್ಕ, ಕಪ್ಪು-ಬಿಳುಪು ಬಣ್ಣ ಹಾಗೂ ತಲೆಯ ಮೇಲೆ ಬಿಲ್ಲಿನಂತಹ ಪುಕ್ಕ ಹೊಂದಿರುವ ಪಕ್ಷಿಯನ್ನು ನೋಡುವುದೇ ಒಂದು ಹಬ್ಬ. ತೆರೆದ ಪ್ರದೇಶಗಳಲ್ಲಿಯೇ ಕುಳಿತುಕೊಳ್ಳುವುದರಿಂದ ಸಹಜವಾಗಿಯೇ ಕಣ್ಣಿಗೆ ಬೀಳುತ್ತದೆ.

ಯಾವುದೇ ಪಕ್ಷಿ ತಿನ್ನದ 'ಕಡ್ಡಿ ಹುಳ ಅಥವಾ ಕಂಬಳಿ ಹುಳ'ವನ್ನು ಆಹಾರವಾಗಿ ಸೇವಿಸುತ್ತದೆ. (ಚಾತಕ) ಭೂಮಿಗೆ ತಾಕದ ನೀರಿಗೋಸ್ಕರವೇ ಹಾತೊರೆದು ಕಾಯುತ್ತ ಇರುತ್ತದೆ. ಯಾವುದೇ ಕಾರಣಕ್ಕೂ ಮಣ್ಣಿನ ಮೇಲೆ ಬಿದ್ದ ನೀರನ್ನು ಸೇವಿಸುವುದಿಲ್ಲ. ಬದಲಿಗೆ ಆಕಾಶದಿಂದ ಬೀಳುವ ನೀರನ್ನೇ ಸೇವಿಸುತ್ತದೆ ಎಂಬ ಅಂಬೋಣಗಳೂ ಇದರೊಂದಿಗೆ ತಳಕು ಹಾಕಿಕೊಂಡಿವೆ. ಆದರೆ, ಇದು ಖಾತರಿ ಇಲ್ಲ ಎನ್ನುತ್ತಾರೆ ಪಕ್ಷಿ ಪ್ರೇಮಿಗಳು. ತನಗೆ ಅಗತ್ಯವಿರುವ ನೀರನ್ನು ತಲೆಯ ಮೇಲಿನ ಜುಟ್ಟಲ್ಲಿ ಶೇಖರಿಸಿಕೊಳ್ಳುತ್ತದೆ.

ಭಾರತದಲ್ಲಿ ಸಂತಾನ ಪ್ರಕ್ರಿಯೆ

ಚಾತಕದಲ್ಲಿ ಬಹುಮುಖ್ಯವಾಗಿ ಮೂರು ಉಪ ಪ್ರಭೇದಗಳಿದ್ದು, ಇದರಲ್ಲಿ ಕ್ಲೈಮೆಟರ್‌ ಜಾಕೋಬೈನಸ್‌ ಪಿಕಾ, ಕ್ಲೈಮೆಟರ್‌ ಜಾಕೋಬೈನಸ್‌ ಜಾಕೋಬೈನಸ್‌ ಎಂಬೆರಡು ಪ್ರಭೇದ ಭಾರತದಲ್ಲಿ ಕಾಣಸಿಗುತ್ತವೆ. ಜೂನ್‌ ಮತ್ತು ಆಗಸ್ಟ್‌ನಲ್ಲಿ ಸಂತಾನೋತ್ಪತ್ತಿ ನಡೆಸಿ, ಸೆಪ್ಟಂಬರ್‌- ಅಕ್ಟೋಬರ್‌ ಹೊತ್ತಿಗೆ ವಾಪಸ್‌ ಆಗುತ್ತವೆ.

ಆಫ್ರಿಕಾ ಮತ್ತು ಕೇರಳಾದಿಂದ ಮೇ ಮತ್ತು ಜೂನ್‌ ತಿಂಗಳಲ್ಲಿ ಚಾತಕ ಪಕ್ಷಿಗಳು 'ಕರ್ನಾಟಕ'ಕ್ಕೆ ಆಗಮಿಸುತ್ತವೆ. ಸಂತಾನೋತ್ಪತ್ತಿ ಕ್ರಿಯೆ ನಡೆಸಿದ ಬಳಿಕ ವಾಪಸ್‌ ಹೋಗುತ್ತವೆ. ಹಾಗೂ ಭಾರತದ ಪುರಾಣದಲ್ಲಿಯೂ ಇದಕ್ಕೆ ಎಲ್ಲಿಲ್ಲದ ಸ್ಥಾನಮಾನ ಇದೆ.

- ವಿವೇಕ್‌, ಪಕ್ಷಿ ಪ್ರೇಮಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ