ಆ್ಯಪ್ನಗರ

ಕೆಡಿಎ ಕಾಮಗಾರಿ : ಡಿಸಿ ಪರಿಶೀಲನೆ

ಕಲಬುರಗಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಅವರು ಮಂಗಳವಾರ ಕುಸನೂರ ಹಾಗೂ ಧರಿಯಾಪುರ-ಕೋಟನೂರ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Vijaya Karnataka 5 Dec 2018, 6:16 pm
ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ ಅವರು ಮಂಗಳವಾರ ಕುಸನೂರ ಹಾಗೂ ಧರಿಯಾಪುರ-ಕೋಟನೂರ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Vijaya Karnataka Web kda works dc verification
ಕೆಡಿಎ ಕಾಮಗಾರಿ : ಡಿಸಿ ಪರಿಶೀಲನೆ


ಕುಸನೂರ ಸರ್ವೆ ನಂ. 83 ಹಾಗೂ 87ರಲ್ಲಿ 33 ಎಕರೆ 7 ಗುಂಟಾ ಪ್ರದೇಶದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದಿಂದ ವಿನೂತನ ಮಾದರಿಯ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೆ ಉದ್ಯಾನವನಕ್ಕೆ 1200 ಮೀಟರ್‌ ಆವರಣ ನಿರ್ಮಿಸಲಾಗಿದೆ. ಉಳಿದ 300 ಮೀಟರ್‌ ಆವರಣ ಗೋಡೆ ನಿರ್ಮಾಣಕ್ಕೆ ಟೆಂಡರ್‌ ಕರೆಯಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸಬೇಕೆಂದು ಸೂಚಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಧರಿಯಾಪುರ-ಕೋಟನೂರ ಬಡಾವಣೆ ನಗರಕ್ಕೆ ಹತ್ತಿರದಲ್ಲಿದೆ. ಇದನ್ನು ಚೆನ್ನಾಗಿ ಅಭಿವೃದ್ಧಿಪಡಿಸಬೇಕು. ನಿವೇಶನ ಪಡೆದವರೆಲ್ಲರೂ ಮನೆಗಳನ್ನು ನಿರ್ಮಿಸಿಕೊಳ್ಳಲು ಅನುಕೂಲವಾಗುವ ಹಾಗೆ ಮೂಲ ಸೌಕರ್ಯಗಳಾದ ರಸ್ತೆ, ಚರಂಡಿ, ವಿದ್ಯುತ್‌ ಪೂರೈಕೆ, ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿಕೊಡಬೇಕು. ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಚರಂಡಿಗಳ ಕೊಳಚೆ ನೀರು ಸರಾಗವಾಗಿ ಹರಿದು ಹೋಗಿ ಮುಖ್ಯ ಚರಂಡಿಗೆ ಸೇರುವ ಹಾಗೆ ಸಂಪರ್ಕ ಕಲ್ಪಿಸಬೇಕೆಂದು ತಿಳಿಸಿದರು.

ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಲ್ಲಿ ಮನೆ ನಿರ್ಮಿಸಿಕೊಂಡ ಕಡೆಗಳಲ್ಲಿ ಹಾಗೂ ರಸ್ತೆಗಳಿಗೆ ರಸ್ತೆ ದೀಪದ ವ್ಯವಸ್ಥೆ ಮಾಡಬೇಕು. ಒಳಚರಂಡಿ ಮತ್ತು ಕುಡಿಯುವ ನೀರಿನ ಸಂಪರ್ಕ ನೀಡಿರುವ ಬಡಾವಣೆಗಳಿಗೆ ಸಮೀಪದ ಓವರ್‌ ಹೆಡ್‌ಟ್ಯಾಂಕ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಬೇಕು. ಬಡಾವಣೆಗಳನ್ನು ಸ್ವಚ್ಛವಾಗಿಡುವ ವ್ಯವಸ್ಥೆ ಮಾಡಬೇಕು. ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹ ಮಾಡದಂತೆ ಎಚ್ಚರಿಕೆ ವಹಿಸಬೇಕು. ಮನೆ ನಿರ್ಮಿಸುವವರು ಚರಂಡಿಗಳನ್ನು ಮುಚ್ಚದಂತೆ ಕಾಳಜಿ ವಹಿಸಬೇಕು ಎಂದು ಹೇಳಿದರು.

ಕಲಬುರಗಿ ನಗರದ ಸುತ್ತ ವಾಜಪೇಯಿ, ಮದರಸನಹಳ್ಳಿ ಹಾಗೂ ಧರಿಯಾಪುರ-ಕೋಟನೂರ ಪ್ರದೇಶಗಳಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಡಾವಣೆಗಳಲ್ಲಿ ಈಗಾಗಲೆ ನಿವೇಶನಗಳನ್ನು ಹರಾಜು ಮಾಡಲಾಗಿದ್ದು, ಇನ್ನು ಸುಮಾರು 2000 ನಿವೇಶನಗಳು ಬಾಕಿ ಇವೆ. ಧರಿಯಾಪುರ-ಕೋಟನೂರ ಬಡಾವಣೆಯಲ್ಲಿ ಸುಮಾರು 500 ನಿವೇಶನಗಳನ್ನು ಹರಾಜು ಮಾಡಬಹುದಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸಲಾದ ಎಲ್ಲ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಕೆಲವು ಭಾಗಗಳಲ್ಲಿ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕಾಗಿದ್ದು, ಅದಕ್ಕಾಗಿ ಟೆಂಡರ್‌ ಕರೆಯಲಾಗಿದೆ. ಈ ಹಿಂದೆ ಧರಿಯಾಪುರ-ಕೋಟನೂರ ಬಡಾವಣೆಯ ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗುತ್ತಿತ್ತು. ಅದರಿಂದ ಕೆಲವು ಭಾಗಗಳಲ್ಲಿ ಮನೆ ನಿರ್ಮಾಣ ಆಗಿಲ್ಲ. ಈಗ ದೊಡ್ಡ ಪ್ರಮಾಣದ ಚರಂಡಿ ನಿರ್ಮಿಸಿ ಮಳೆ ನೀರು ಸಂಗ್ರಹ ಆಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಜಯಕುಮಾರ ಮಾಹಿತಿ ನೀಡಿದರು.

ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜನಾ ಸದಸ್ಯ ಸಂಗಪ್ಪ ಗಾರಂಪಳ್ಳಿ, ಸಹಾಯಕ ಎಂಜಿನಿಯರ್‌ ಶಿವಾನಂದ ಹರವಾಳ, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜಶೇಖರ ಗಾರಂಪಳ್ಳಿ, ಸಹಾಯಕ ಎಂಜನಿಯರ್‌ ನರೇಂದ್ರ ಮತ್ತಿತರರು ಹಾಜರಿದ್ದರು.

ಬಾವಿ ರಕ್ಷಿಸಿ, ಕೆರೆ ನಿರ್ಮಿಸಿ

ಜಿಡಿಎ ಬಡಾವಣೆಯ ಉದ್ಯಾನವನಕ್ಕೆ ಗುರುತಿಸಲಾದ ಪ್ರದೇಶದಲ್ಲಿ ಮೂರು ಬಾವಿಗಳಿವೆ. ಅವುಗಳನ್ನು ಮುಚ್ಚದೆ ಸಂರಕ್ಷಿಸಬೇಕು. ಸಾಧ್ಯವಾದರೆ, ಬಾವಿಗಳ ಆಳ ಹೆಚ್ಚಿಸಬೇಕು. ಬಾವಿಗಳ ಸುತ್ತ ರಕ್ಷಣಾ ಗೋಡೆ ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಾಗ ಈ ಬಾವಿಗಳಿಂದ ನೀರು ಸರಬರಾಜು ಮಾಡಬಹುದಾಗಿದೆ. ಈ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕೆರೆ ಸಹ ನಿರ್ಮಿಸಬೇಕೆಂದು ಜಿಲ್ಲಾಧಿಕಾರಿ ವೆಂಕಟೇಶ್‌ ಕುಮಾರ್‌ ನಿರ್ದೇಶನ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ