ಆ್ಯಪ್ನಗರ

'ಕೌಶಲದ ಮುಂದೆ ಪುಸ್ತಕ ಜ್ಞಾನ ಗೌಣ'

ಪುಸ್ತಕದಿಂದ ದೊರೆತ ಜ್ಞಾನ ನಮಗೆ ಅಂಕಗಳನ್ನು ಹೆಚ್ಚು ಕೊಡಿಸಬಹುದೇ ಹೊರತು; ನಾವು ಅಳವಡಿಸಿಕೊಳ್ಳುವ ಕೌಶಲ ಬದುಕಿನಲ್ಲಿ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದಲ್ಲಿ ಯಶಸ್ಸು ತಂದು ಕೊಡುತ್ತದೆ ಎಂದು ಬೆಂಗಳೂರಿನ ಹೆಡ್‌ ಹೆಲ್ಡ್‌ ಹೈ ಫೌಂಡೇಷನ್‌ ಪ್ರತಿನಿಧಿ ರಮೇಶ್‌ ಬಲ್ಲಿದ ಪ್ರತಿಪಾದಿಸಿದರು.

Vijaya Karnataka 20 Sep 2018, 5:47 pm
ಕಲಬುರಗಿ : ಪುಸ್ತಕದಿಂದ ದೊರೆತ ಜ್ಞಾನ ನಮಗೆ ಅಂಕಗಳನ್ನು ಹೆಚ್ಚು ಕೊಡಿಸಬಹುದೇ ಹೊರತು; ನಾವು ಅಳವಡಿಸಿಕೊಳ್ಳುವ ಕೌಶಲ ಬದುಕಿನಲ್ಲಿ ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದಲ್ಲಿ ಯಶಸ್ಸು ತಂದು ಕೊಡುತ್ತದೆ ಎಂದು ಬೆಂಗಳೂರಿನ ಹೆಡ್‌ ಹೆಲ್ಡ್‌ ಹೈ ಫೌಂಡೇಷನ್‌ ಪ್ರತಿನಿಧಿ ರಮೇಶ್‌ ಬಲ್ಲಿದ ಪ್ರತಿಪಾದಿಸಿದರು.
Vijaya Karnataka Web knowledge of the book before the skill
'ಕೌಶಲದ ಮುಂದೆ ಪುಸ್ತಕ ಜ್ಞಾನ ಗೌಣ'


ತಾಲೂಕಿನ ತಾಡತೆಗನೂರ ಹೊರವಲಯದ ವಿವೇಕಾನಂದ ವಿದ್ಯಾಪೀಠದಲ್ಲಿ ರಾಮಕೃಷ್ಣ-ವಿವೇಕಾನಂದ ಆಶ್ರಮದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿವೇಕಾನಂದರ ಚಿಕಾಗೊ ಭಾಷಣದ 125ನೇ ವರ್ಷಾಚರಣೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪುಸ್ತಕದ ಜ್ಞಾನದ ಅಗತ್ಯ ಪರೀಕ್ಷಾ ದೃಷ್ಟಿಯಿಂದ ಮಹತ್ವ ಪಡೆದುಕೊಂಡರೆ, ಜೀವನ ಕೌಶಲ ನಮಗೆ ಯಶಸ್ಸಿನ ಹಾದಿಗಳ ಕುರಿತು ಹಲವು ಆಯಾಮಗಳಲ್ಲಿ ಯೋಚಿಸುವಂತೆ ಪ್ರೇರೇಪಿಸುತ್ತದೆ ಎಂದರು.

ಯಾವ ವ್ಯಕ್ತಿಯ ಜೀವನ ಸದಾ ಸುಖಮಯ ಎನಿಸುವಂತಿರುತ್ತದೋ ಆತನಿಗೆ ಸಮಸ್ಯೆಗಳೊಂದಿಗೆ ಸೆಣಸುವ ಅನುಭವ ಇಲ್ಲ ಎಂಬುದು ಖಾತರಿಯಾಗುತ್ತದೆ. ಮೇಲಾಗಿ, ಅಂತಹ ವ್ಯಕ್ತಿಯ ಜೀವನ ಹೆಚ್ಚು ಅಪಾಯಕಾರಿ ಆಗಿರುತ್ತದೆ ಎಂದು ರಮೇಶ್‌ ವ್ಯಾಖ್ಯಾನಿಸಿದರು.

ಪ್ರತಿ ವ್ಯಕ್ತಿಯಲ್ಲೂ ಅದ್ಭುತ ಶಕ್ತಿ ಅಡಗಿದೆ. ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಆತ ಜಾಗೃತನಾಗಿ ಪ್ರಯತ್ನಿಸದ ಹೊರತು; ಸಿದ್ಧಿ ಎಂಬುದು ಕೈವಶವಾಗುವುದಿಲ್ಲ. ಎಲ್ಲಿವರೆಗೆ ನಮ್ಮೊಳಗಿನ ಶಕ್ತಿಯನ್ನು ಜಾಗೃತಗೊಳಿಸುವುದಿಲ್ಲವೋ, ಅಲ್ಲಿಯವರೆಗೆ ಅದ್ಭುತ ಸಾಧನೆ ಸದಾ ಗಗನ ಕುಸುಮದಂತೆ ಗೋಚರಿಸುತ್ತದೆ ಎಂದರು.

ಮೊದಲು ಸಮಸ್ಯೆಗಳನ್ನು ಎದುರಿಸುವುದನ್ನು ರೂಢಿಸಿಕೊಳ್ಳಬೇಕು. ಬಲ್ಬ್ ಶೋಧ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಆವಿಷ್ಕಾರಗಳನ್ನು ಮಾಡಿದ ಥಾಮಸ್‌ ಆಲ್ವಾ ಎಡಿಸನ್‌ ಆರಂಭಿಕ ಹಂತದ 990 ಪ್ರಯತ್ನಗಳಲ್ಲಿ ಸತತವಾಗಿ ಸೋತು ಹೋಗಿದ್ದ. ಆದರೂ ಆತ ಆತ್ಮಹತ್ಯೆಯ ಕುರಿತು ಯೋಚಿಸಲಿಲ್ಲ. ಅದರ ಬದಲು ಆವಿಷ್ಕಾರದ ವೇಳೆ ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂಬುದನ್ನು ಕಲಿಯಲು ಈ ಸೋಲುಗಳು ಸಹಕರಿಸಿದವು ಎಂದ ಎಡಿಸನ್‌ ಇಂದಿನ ವಿದ್ಯಾರ್ಥಿಗಳಿಗೆ ಮಾದರಿ ಆಗಬೇಕು ಎಂದು ಬಲ್ಲಿದ ಸಲಹೆ ನೀಡಿದರು.

ಪಶ್ಚಿಮ ಬಂಗಾಲದ ಮುರ್ಷಿದಾಬಾದ್‌ ಜಿಲ್ಲೆಯ 'ಆನಂದ ಶಿಕ್ಷಣ ನಿಕೇತನ' ಸಂಸ್ಥಾಪಕ ಹಾಗೂ ಅತಿ ಚಿಕ್ಕ ವಯಸ್ಸಿನ ಹೆಡ್ಮಾಸ್ಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬಾಬರ್‌ ಅಲಿ ಮಾತನಾಡಿ, ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಮತ್ತು ಜೀವನದ ಉದ್ದೇಶ ಅರಿತು ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದನ್ನು ವಿದ್ಯಾರ್ಥಿ ಜೀವನದಲ್ಲಿಯೇ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶ್ರದ್ಧೆ, ಧೈರ್ಯ ಮತ್ತು ದಯಾಪರ ಮನೋಭಾವ ಇಲ್ಲದೆ ಯಶಸ್ಸು ನಮ್ಮತ್ತ ಸುಳಿಯುವುದಿಲ್ಲ. ಅದರಲ್ಲೂ, ಸಾಧನೆಯ ಹಾದಿಯಲ್ಲಿ ಧೈರ್ಯದಿಂದ ಹೊರಟಾಗ ನಮಗೇ ಗೊತ್ತಿಲ್ಲದೆ ನಮ್ಮ ಹೆಜ್ಜೆ ಗುರುತುಗಳು ಮೂಡುತ್ತವೆ. ತಾವು ತಮ್ಮ 16ನೇ ವಯಸ್ಸಿಗೆ ತೆರೆದ ಶಾಲೆಯಲ್ಲಿ ಇಂದು 500 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಶಾಲೆಗೆ ಕರ್ನಾಟಕದ ದಾನಿಗಳೇ ಹೆಚ್ಚು ಸಹಾಯ ನೀಡುತ್ತಿದ್ದಾರೆ. ಆ ಮೂಲಕ ದೇಶದ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಕೀರ್ತಿ ಹೊಂದಿದ್ದ ಮುರ್ಷಿದಾಬಾದ್‌ನಲ್ಲಿ ಇಂದು ಶಿಕ್ಷಣದ ಕ್ರಾಂತಿ ಸಾಧ್ಯವಾಗಿದೆ ಎಂದರು.

ಆಶ್ರಮದ ಸ್ವಾಮಿ ಮಹೇಶ್ವರಾನಂದ ಮಹಾರಾಜರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಮಡಿವಾಳ ವೇದಿಕೆಯಲ್ಲಿದ್ದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ.ಶಿವರಾಮೇಗೌಡ, ವಿಜಯಕುಮಾರ ಬಿಲಗುಂದಿ, ಮಲ್ಲಿಕಾರ್ಜುನ ಹೆಳವರ, ಶಿವಕುಮಾರ, ಮಹಾಂತೇಶ್‌ ಸೇರಿದಂತೆ ಪಟ್ಟಣ, ಭಾರತಿ ವಿದ್ಯಾಮಂದಿರ, ಸಿರನೂರ ಸೇರಿದಂತೆ ವಿವಿಧ ಗ್ರಾಮಗಳ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕಿಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಮಸ್ಯೆಗಳಿಂದಲೇ ಪರಿಪಕ್ವತೆ

ನಾವು ಎದುರಿಸುವ ಸಮಸ್ಯೆಗಳಿಂದಲೇ ಪ್ರತಿ ಹಂತದಲ್ಲೂ ಪಕ್ವಗೊಳ್ಳುತ್ತಾ ಹೋಗುತ್ತೇವೆ. ಆ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸುವುದನ್ನು ಕಲಿತು ಮುಂದೆ ಸಾಗಿದಾಗಲೇ ಸಮಾಜದಲ್ಲಿ ನಮ್ಮದೇ ಆದ ಸಕಾರಾತ್ಮಕ ಪ್ರಭಾ ವಲಯ ಸೃಷ್ಟಿಯಾಗುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕನಸು ಕಾಣಬೇಕು ಎಂದು ರಮೇಶ್‌ ಬಲ್ಲಿದ ಸಲಹೆ ನೀಡಿದರು.

ಸೌಲಭ್ಯಗಳಿಲ್ಲ ಎಂದು ಕೊರಗುತ್ತಲೇ ಕೂಡುವವರು ಎಂದಿಗೂ ಬದುಕಿನಲ್ಲಿ ಅದ್ಭುತಗಳನ್ನು ಸೃಷ್ಟಿಸಲಾರರು. 16 ವರ್ಷಗಳ ಕಾಲ ತಾವು ಶಾಲೆಯ ಮುಖ್ಯವನ್ನೇ ನೋಡಿರಲಿಲ್ಲ. ನಂತರ ಕೇವಲ ಆರು ತಿಂಗಳಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಪರಿಣತಿ ಪಡೆಯುವ ವೇಳೆ ಸಮಸ್ಯೆಗಳ ಮಧ್ಯೆ ಹೇಗೆ ಸಾಧನೆ ಮಾಡಬಹುದು ಎಂಬುದನ್ನು ಕಲಿತಿದ್ದಾಗಿ ನಿದರ್ಶನ ಸಮೇತ ಅವರು ವಿವರಿಸಿದರು.

ವಿಶ್ವವಿದ್ಯಾಲಯ ಕಟ್ಟುವುದೇ ನನ್ನ ಗುರಿ

ಈಗಾಗಲೇ ಶಾಲೆ ತೆರದು ಜಗತ್ತಿನ ಹೆಸರು ಮಾಡಿದ್ದರೂ ತಮಗಿನ್ನೂ ಸಮಾಧಾನ ಆಗಿಲ್ಲ. ಕೇವಲ ಎಂಟು ವಿದ್ಯಾರ್ಥಿಗಳಿಂದ ಆರಂಭಿಸಿದ ಆನಂದ ಶಿಕ್ಷಣ ನಿಕೇತನ ಸಂಸ್ಥೆಯಲ್ಲಿ ಇಂದು 500 ವಿದ್ಯಾರ್ಥಿಗಳು ಓದುತ್ತಿದ್ದರೂ ತಮಗೆ ಸಮಾಧಾನ ದೊರೆತಿಲ್ಲ. ಸುಮಾರು 80 ಲಕ್ಷ ಜನಸಂಖ್ಯೆ ಹೊಂದಿರುವ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಇಂದಿಗೂ ಒಂದು ವಿಶ್ವವಿದ್ಯಾಲಯ ಆರಂಭಗೊಂಡಿಲ್ಲ. ಈ ಅಂಶದ ಆಧಾರದ ಮೇಲೆ ತಾವು ಖುದ್ದು ಒಂದು ವಿಶ್ವವಿದ್ಯಾಲಯ ಆರಂಭಿಸಬೇಕೆಂಬ ಮಹತ್ವಾಕಾಂಕ್ಷೆಯಿದೆ ಎಂದು ಬಾಬರ್‌ ಅಲಿ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ