ಆ್ಯಪ್ನಗರ

ಪಿಡಿಎ ಕಾಲೇಜಿನಲ್ಲಿ ಯುವ ಹವಾ!

ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಶುಕ್ರವಾರ ಎಂದಿನಂತೆ ಇರಲಿಲ್ಲ. ಯುವಕ -ಯುವತಿಯರ ಮನಸುಗಳು ಪ್ರಫುಲ್ಲವಾಗಿದ್ದವು. ಪ್ರ್ಯಾಕ್ಟಿಲ್-ಥಿಯರಿ ಸಬ್ಜೆಕ್ಟ್, ಸ್ಟಡಿ ಎಲ್ಲವನ್ನೂ ಮರೆತು ಆಟ, ಡ್ಯಾನ್ಸ್, ಸೆಲ್ಫಿ, ಕಬ್ಬಡ್ಡಿ, ಗಲ್ಲಿ ಕ್ರಿಕೆಟ್ ಹೀಗೆ ವಿನೂತನ ಚಟುವಟಿಕೆಗಳಿಗೆ ಸಾಕ್ಷಿಯಾಯಿತು.

ವಿಕ ಸುದ್ದಿಲೋಕ 19 Mar 2016, 4:11 pm
Vijaya Karnataka Web pde kljinalli yuva hav
ಪಿಡಿಎ ಕಾಲೇಜಿನಲ್ಲಿ ಯುವ ಹವಾ!
ಕಲಬುರಗಿ: ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಶುಕ್ರವಾರ ಎಂದಿನಂತೆ ಇರಲಿಲ್ಲ. ಯುವಕ -ಯುವತಿಯರ ಮನಸುಗಳು ಪ್ರಫುಲ್ಲವಾಗಿದ್ದವು. ಪ್ರ್ಯಾಕ್ಟಿಲ್-ಥಿಯರಿ ಸಬ್ಜೆಕ್ಟ್, ಸ್ಟಡಿ ಎಲ್ಲವನ್ನೂ ಮರೆತು ಆಟ, ಡ್ಯಾನ್ಸ್, ಸೆಲ್ಫಿ, ಕಬ್ಬಡ್ಡಿ, ಗಲ್ಲಿ ಕ್ರಿಕೆಟ್ ಹೀಗೆ ವಿನೂತನ ಚಟುವಟಿಕೆಗಳಿಗೆ ಸಾಕ್ಷಿಯಾಯಿತು.

ಪ್ರಸಕ್ತ ವರ್ಷದ ನಿರ್ವಾಣ್-16ರ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಕಾಲೇಜು ಮುಂದಿನ ಹುಲ್ಲು ಹಾಸಿನ ಮೇಲೆ ನಡೆದ ಕಬ್ಡಡ್ಡಿ ಯುವಕ-ಯುವತಿಯರು ಆಡಿ ಖುಷಿಪಟ್ಟರು. ಇದನ್ನು ನೋಡುತ್ತಿದ್ದ ಇತರ ಸಹಪಾಠಿಗಳು ಕೇಕೆ ಹಾಕಿ, ಸೀಟಿ ಹೊಡೆದು ಹುರಿದುಂಬಿಸಿದರು. ಕಾರ್ಯಕ್ರಮ ಉದ್ಘಾಟಿಸಲು ಬಂದ ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ, ಸೂರ್ಯಕಾಂತ ಪಾಟೀಲ್, ಶಿವಾನಂದ ಮಾನಕರ್, ನಿತಿನ್ ಜವಳಿ ಸಹ ಕಬ್ಬಡ್ಡಿ ಆಡಿ ಇತರ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಗಲ್ಲಿ ಕ್ರಿಕೆಟ್ ಗ್ರೌಂಡ್‌ಗೆ ಇಳಿದ ಭೀಮಳ್ಳಿಅವರಿಗೆ ಸೂರ್ಯಕಾಂತ ಪಾಟೀಲ್ ಬೌಲಿಂಗ್ ಮಾಡಿದಾಗ ಸಿಕ್ಸರ್ ಬಾರಿಸಿದಾಗ ಯುವಕರು ಚಪ್ಪಾಳೆ ತಟ್ಟಿ ಸೀಟಿ ಹೊಡೆದು ಸಂತಸ ವ್ಯಕ್ತಪಡಿಸಿದರು.

ಸೈನ್ಸ್ ಕ್ಲಬ್ ಪ್ರದರ್ಶನದಲ್ಲಿ ಹೊಸ ಆವಿಷ್ಕಾರದ ವಸ್ತು ಪ್ರದರ್ಶನ ನಡೆದವು. ಫನ್ನಿ ಚಟುವಟಿಕೆಗಳ ಮೂಲಕ ದಿನ ಕಳೆದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ, ಹಾಡುಗಾರಿಕೆ, ಬ್ಯಾಂಡ್ ನಡೆದವು.

ಗಮನ ಸೆಳೆದ ಸ್ಮಾರ್ಟ್ ಡಸ್ಟ್‌ಬಿನ್:

ಕಾಲೇಜಿನ ವಿದ್ಯಾರ್ಥಿಗಳಾದ ಅಶೋಕ್ ರಾಠೋಡ್, ಮೊಹಮ್ಮದ್ ಆಬೀದ್, ಮಲಿನ್ ತುಳಸಿಗೇರ್ ತಂಡದವರು ಕೂಡಿ ತಯಾರಿಸಿದ್ದ ಸ್ಮಾರ್ಟ್ ಡಸ್ಟ್‌ಬಿನ್ ಗಮನ ಸೆಳೆಯಿತು. ಬಡಾವಣೆಯಲ್ಲಿ ಈ ಡಸ್ಟ್‌ಬಿನ್ ಅಳವಡಿಸಿದರೆ ಅದು ಭರ್ತಿಯಾಗುವವರೆಗೂ ಅದರ ಮುಚ್ಚಳ ತೆರೆಯುತ್ತದೆ. ಭರ್ತಿಯಾದರೆ ತೆರೆಯುವುದೇ ಇಲ್ಲ. ತುಂಬಿರುವ ಬಗ್ಗೆ ಜಿಎಸ್‌ಎಂ ಸಿಮ್ ಮೂಲಕ ಪಾಲಿಕೆ ಕಚೇರಿಗೆ ಸಂದೇಶ ರವಾನಿಸುತ್ತದೆ. ಆಗ ಪಾಲಿಕೆ ಸಿಬ್ಬಂದಿ ಬಂದು ಅದನ್ನು ವಿಲೇವಾರಿ ಮಾಡಬೇಕು. ಇದರಿಂದ ನಗರದಲ್ಲಿ ಕಸದ ಸಮಸ್ಯೆ ಇರುವುದಿಲ್ಲ ಎನ್ನುವುದು ಸಂಶೋಧನೆ ನಡೆಸಿದ ವಿದ್ಯಾರ್ಥಿಗಳ ಅನಿಸಿಕೆ.

371ಜೆ ನಂಬಿ ಕೂಡಬೇಡಿ; ಟ್ಯಾಲೆಂಟ್ ಪ್ರದರ್ಶಿಸಿ

ನಿರ್ವಾಣ್-16 ಉದ್ಘಾಟಿಸಿದ ವಾಣಿಜ್ಯ ತೆರಿಗೆ ಉಪ ಆಯುಕ್ತೆ ಮೀರಾ ಪಂಡಿತ್, 371ಜೆ ಮೀಸಲಾತಿ ಇದೆ ಎಂದು ಸುಮ್ಮನೆ ಕೂಡಬೇಡಿ.ಜೀವನದ ಉತ್ಸಾಹ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು. ನಿಮ್ಮ ಸೇವೆ ದೇಶಕ್ಕೆ ಸಲ್ಲಲಿ. ಸಾಧನೆಗೆ ಅಡ್ಡಿಯಾಗಿರುವುದನ್ನು ಪತ್ತೆ ಹಚ್ಚಿ ಅವುಗಳನ್ನು ಹೊಡೆದು ಹಾಕಿ ಮುನ್ನುಗ್ಗಬೇಕು ಎಂದರು. ಕಾಡಿನಲ್ಲಿ ಆಕಳು ಹಾಲನ್ನೇ ನಂಬಿ ಜೀವನದಲ್ಲಿ ಮುಂದೆ ಪ್ರಗತಿ ಸಾಧಿಸದ ಕುಟುಂಬದ ನಿದರ್ಶನವನ್ನು ತಿಳಿಸಿದರು.

ಸಾಧನೆಗೆ ಅಡ್ಡಿಯಾಗಿರುವ ಅಂಶವನ್ನು ಪತ್ತೆ ಹಚ್ಚಿ. ಸಾಧನೆಯ ಮೆಟ್ಟಿಲೇರಿದರೆ ಜಗತ್ತು ಗುರುತಿಸುತ್ತದೆ. ಎಂಜಿನಿಯರ್ ಆಗಿದ್ದರೂ ಮಾನವೀಯತೆ ಮರೆಯಬಾರದು. ಅವಕಾಶಗಳು ಕುಳಿತಲ್ಲಿಯೇ ಬರುವುದಿಲ್ಲ. ಪ್ರಯತ್ನ ಮಾಡಿದರೆ ಮಾತ್ರ ಬಯಸಿದ್ದನ್ನು ಪಡೆಯಲು ಸಾಧ್ಯ ಎಂದು ಐದು ನೂರು ರೂ.ಗಳ ನೋಟು ಪ್ರದರ್ಶಿಸಿ ನಿದರ್ಶನವನ್ನು ನೀಡುವ ಮೂಲಕ ವಿಷಯ ಮನವರಿಕೆ ಮಾಡಿಕೊಟ್ಟರು.

ಜೀವನದಲ್ಲಿ ಬದಲಾವಣೆ ಕಾಣಬೇಕು. ಹಾರ್ಡ್ ವರ್ಕ್‌ಗಿಂತ ಸ್ಮಾರ್ಟ್ ಕೆಲಸ ಮುಖ್ಯ. ನಿರ್ವಾಣ್ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಪತ್ತೆ ಹಚ್ಚುವ ಕೆಲಸ ಆಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಇ ಸಂಸ್ಥೆಯ ಅಧ್ಯಕ್ಷ ಬಸವರಾಜ ಭೀಮಳ್ಳಿ ಮಾತನಾಡಿ, ಎಂಜಿನಿಯರಿಂಗ್ ಓದುವ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿ ಹೆಸರು ತರಬೇಕು. ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.

ಗವರ್ನಿಂಗ್ ಕೌನ್ಸಿಲ್ ಸದಸ್ಯ ನಿತಿನ್ ಜವಳಿ ಮಾತನಾಡಿ, ಅಭಿವೃದ್ಧಿಗೆ ಅಂತರ್ಜಾಲ ಅತ್ಯವಶ್ಯವಾಗಿದ್ದು, ಪಿಡಿಎ ಕಾಲೇಜಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ವಿಶ್ವದ ಎಲ್ಲ ಕಡೆ ಇರುವ ಕಾಲೇಜಿನ ಹಳೆ ವಿದ್ಯಾರ್ಥಿಗಳು ವೀಕ್ಷಿಸುವ ಅನುಕೂಲ ಮಾಡಿಕೊಡಲಾಗಿದೆ ಎಂದರು. ಮೀಸಲಾತಿ ಬಗ್ಗೆ ತಲೆಕೆಡಿಸಿಕೊಳ್ಳದೇ ವಿಶಾಲವಾಗಿರುವ ಪ್ರಪಂಚದಲ್ಲಿ ಪ್ರತಿಭೆ ಪ್ರದರ್ಶಿಸುವ ಮೂಲಕ ಅವಕಾಶ ಗಿಟ್ಟಿಸಿಕೊಳ್ಳಬೇಕು ಎಂದರು.

ಉಪಾಧ್ಯಕ್ಷ ಡಾ. ಸೂರ್ಯಕಾಂತ ಜಿ. ಪಾಟೀಲ್ ಮಾತನಾಡಿದರು.

ಗೌರವ ಕಾರ್ಯದರ್ಶಿ ಆರ್. ಎಸ್. ಹೊಸಗೌಡರ್, ಜಂಟಿ ಕಾರ್ಯದರ್ಶಿ ಶಿವಾನಂದ ಮಾನಕರ್ ಇದ್ದರು. ಪ್ರಾಚಾರ್ಯ ಡಾ. ಎಸ್. ಎಸ್. ಆವಂಟಿ ಸ್ವಾಗತಿಸಿದರು. ಉಪ ಪ್ರಾಚಾರ್ಯ ಓಂಪ್ರಕಾಶ್, ಶ್ರೀದೇವಿ, ಸಂಜಯ ಮಾಕಲ್, ಡಾ. ರಾಜೇಂದ್ರ ಹೊಸೂರ್, ಡಾ. ಮಹಾದೇವಪ್ಪ, ಬಾಬುರಾವ ಶೇರಿಕಾರ್ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಅಕ್ಷತಾ ನಿರೂಪಿಸಿದರು. ಉತ್ಸವದ ಸಂಯೋಜಕ ಡಾ. ಎಂ. ಎನ್. ದಂಡಗಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ