ಆ್ಯಪ್ನಗರ

ಒದ್ದೆಯಾಗಿಯೇ ಓದಿದ ವಿದ್ಯಾರ್ಥಿಗಳು

ಮಳೆಗಾಲ ಆರಂಭವಾದರೆ ಕುಂಬಾರಹಳ್ಳಿ ಸರಕಾರಿಯ ಶಾಲೆಯ ಮಕ್ಕಳು ನೀರಿನಲ್ಲಿ ಒದ್ದೆಯಾಗಿಯೇ ಪಾಠ ಕೇಳುವುದು ಅನಿವಾರ್ಯ. ಸೋರುತ್ತಿರುವ ಶಾಲೆಯಲ್ಲೇ ಶಿಕ್ಷಕರು ತರಗತಿ ನಡೆಸುತ್ತಿದ್ದು, ಶಾಸಕರು, ಅಧಿಕಾರಿಗಳು ಇದುವರೆಗೂ ಪರ್ಯಾಯ ಕೈಗೊಳ್ಳುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

Vijaya Karnataka 5 Aug 2019, 5:00 am
ವಾಡಿ:ಮಳೆಗಾಲ ಆರಂಭವಾದರೆ ಕುಂಬಾರಹಳ್ಳಿ ಸರಕಾರಿಯ ಶಾಲೆಯ ಮಕ್ಕಳು ನೀರಿನಲ್ಲಿ ಒದ್ದೆಯಾಗಿಯೇ ಪಾಠ ಕೇಳುವುದು ಅನಿವಾರ್ಯ. ಸೋರುತ್ತಿರುವ ಶಾಲೆಯಲ್ಲೇ ಶಿಕ್ಷಕರು ತರಗತಿ ನಡೆಸುತ್ತಿದ್ದು, ಶಾಸಕರು, ಅಧಿಕಾರಿಗಳು ಇದುವರೆಗೂ ಪರ್ಯಾಯ ಕೈಗೊಳ್ಳುವ ಗೋಜಿಗೆ ಹೋಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
Vijaya Karnataka Web the leaking school
ಒದ್ದೆಯಾಗಿಯೇ ಓದಿದ ವಿದ್ಯಾರ್ಥಿಗಳು


ಪಟ್ಟಣದ ಸಮೀಪದ ನಾಲವಾರ ಹೋಬಳಿ ವ್ಯಾಪ್ತಿಯಲ್ಲಿನ ಕುಂಬಾರಹಳ್ಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ 6 ಕೋಣೆ ನಿರ್ಮಿಸಿ 15 ವರ್ಷಗಳಾಗಿವೆ. ಆಗಲೇ 5 ತರಗತಿ ಕೋಣೆಗಳು ಸೋರುತ್ತಿವೆ. ಒಂದು ಕಚೇರಿಯಾಗಿ ಉಪಯೋಗಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 150ರ ಪಕ್ಕದಲ್ಲಿರುವ ಈ ಗ್ರಾಮದ ಶಾಲೆಯ ದುರಸ್ತಿಗೆ ಮುಂದಾಗಿಲ್ಲ ಎಂಬುದು ಪಾಲಕರ ಅಳಲು.

ಸಣ್ಣ ಮಳೆಗೆ ಸೋರಿಕೆ:

ಕಳೆದ ನಾಲ್ಕು ದಿನಗಳಿಂದ ಸಣ್ಣ ಮಳೆ ಬೀಳುತ್ತಿದೆ. ಮಕ್ಕಳು ಸೋರುತ್ತಿರುವ ಕೋಣೆಗಳಲ್ಲಿ ಸಂಗ್ರಹವಾದ ನೀರು ಹೊರಕ್ಕೆ ಚೆಲ್ಲಿ, ಹಸಿ ಫರ್ಸಿ ನೆಲದ ಮೇಲೆ ತುದಿಗಾಲಿನಲ್ಲೇ ಕುಳಿತು ಮಕ್ಕಳು ಪಾಠ ಕೇಳುವುದು ಅನಿವಾರ್ಯವಾಗಿದೆ.

ಜೋರಾದ ಮಳೆ ಬಂದರೆ ವಿದ್ಯಾರ್ಥಿಗಳು ಸೋರದ ಕೋಣೆಯ ಮೂಲೆಯಲ್ಲಿ ಒಟ್ಟಾಗಿ ನಿಲ್ಲುತ್ತಾರೆ. ಭಯದಿಂದ ಪಾಲಕರು ಮಕ್ಕಳಿಗೆ ಶಾಲೆಯಿಂದ ಬೇಗ ಮನೆಗೆ ಬರಲು ಹೇಳುತ್ತಿದ್ದಾರೆ. ಸೋರುವ ಶಾಲೆಯಲ್ಲಿ ಮಕ್ಕಳಿಗೆ ಏನಾದರೂ ಅನಾಹುತ ಆಗದಿರಲಿ ಎಂಬ ಕಾಳಜಿಯಿಂದ ಕೆಲವರು ಶಾಲೆಗೆ ಕಳಿಸಲು ಹಿಂಜರಿಯುತ್ತಿದ್ದಾರೆ.

ದುರಸ್ತಿಗೆ ವಿಳಂಬ:

ಒಟ್ಟು 240 ವಿದ್ಯಾರ್ಥಿಗಳು ಹಾಜರಾತಿ ಇದ್ದು, ಕಳೆದ 5ವರ್ಷದಿಂದ ಶಾಲಾ ಕೋಣೆಗಳು ಸೋರುತ್ತಿವೆ. ದುರಸ್ತಿ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವ ಅಧಿಕಾರಿಯೂ ಸ್ಪಂದಿಸಿಲ್ಲ. 5 ವರ್ಷವಾದರೂ ಮಳೆಗಾಲದಲ್ಲಿ ಇದೇ ಗತಿ.

ಈ ಶಾಲೆಯ ಮುಖ್ಯಗುರುಗಳ ಕೋಣೆ ಸೋರುತ್ತಿದ್ದು, ಕಾಗದ ಪತ್ರಗಳನ್ನು ಸುರಕ್ಷಿತವಾಗಿಡಲು ಹೈರಾಣಾಗುತ್ತಿದ್ದಾರೆ. ಬಿಸಿ ಊಟ ಕೋಣೆ ಸೋರುತ್ತಿದ್ದು, ಮಕ್ಕಳ ಊಟಕ್ಕಾಗಿ ಇಟ್ಟಿರುವ ಅಕ್ಕಿ, ತೊಗರಿ ಇತರೇ ಸಾಮಗ್ರಿಗಳು ನೀರಲ್ಲಿ ಹಾಳಾಗುತ್ತಿವೆ. ನೀರಲ್ಲೇ ಕುಳಿತು ಅಡುಗೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಡುಗೆ ಸಿಬ್ಬಂದಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಹೊಸ ಶಾಲೆ ನಿರ್ಮಾಣಕ್ಕಾಗಿ ಎಕರೆ ಭೂಮಿ ಮಂಜೂರಿಗೆ 2015ರಿಂದ ಎಸ್‌ಡಿಎಂಸಿ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಮನವಿ ಮಾಡುತ್ತಲೇ ಬರುತ್ತಿದ್ದಾರೆ. ಶಿಕ್ಷಣ ಇಲಾಖೆ ಕಣ್ಣು ಮುಚ್ಚಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆಇರುವ ಸರಕಾರಿ ಶಾಲೆ ಸೋರುತ್ತಿದೆ. ದುರಸ್ತಿ ಮಾಡುವಂತೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಮನಸ್ಸು ಮಾಡಿಲ್ಲ. ಈಗಲಾದರೂ ಕ್ರಮ ಕೈಗೊಳ್ಳಬೇಕು.

-ವೆಂಕಟೇಶ ದುರ್ಗದ ಅಧ್ಯಕ್ಷರು ಎಸ್‌ಡಿಎಂಸಿ

ಶಾಸಕ ಪ್ರಿಯಾಂಕ್‌ ಖರ್ಗೆ ಹಾಗೂ ಆಡಳಿತ ಮಂಡಳಿಗೆ 4ವರ್ಷದಿಂದ ಮನವಿ ಮಾಡಿದರೂ ಸ್ಪಂದಿಸಿಲ್ಲ. ಶಾಲೆಗೆ ಬೇರೆ ಕಡೆ ಜಮೀನು ನೀಡುವಂತೆ ಕೋರಲಾಗಿದೆ. ಸಂಬಂಧಿತ ಅಧಿಕಾರಿಗಳು ಕಟ್ಟಡ ನಿರ್ಮಿಸಲು ಸೂಚಿಸಿದರೆ 4ಕೋಣೆಗಳು ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಶಿಕ್ಷಣ ಕ್ಷೇತ್ರಧಿಕಾರಿಗಳು ಭರವಸೆ ನೀಡಿದ್ದಾರೆ. ಸಂಬಂಧಿತರು ಅನುಮೋದನೆ ನೀಡುತ್ತಿಲ್ಲ.

-ಮಲ್ಲಿಕಾರ್ಜುನ ಬಡಿಗೇರ
ಎಸ್‌ಡಿಎಂಸಿ ಸದಸ್ಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ