ಆ್ಯಪ್ನಗರ

ಮಕ್ಕಳನ್ನು ದುಡಿಸಿಕೊಳ್ಳುವುದು ಗಂಭೀರ ಅಪರಾಧ

14 ವರ್ಷದೊಳಗಿನ ಮಕ್ಕಳನ್ನು ಕೃಷಿ, ಕೈಗಾರಿಕಾ ವಲಯ, ಗ್ಯಾರೇಜ್‌, ಹೋಟಲ್‌, ಅಂಗಡಿಗಳು ಸೇರಿದಂತೆ ಅಪಾಯಕಾರಿ ಕ್ಷೇತ್ರದಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎನ್‌. ಜರಗು ಹೇಳಿದರು.

Vijaya Karnataka 15 Jun 2019, 9:35 pm
ಕಲಬುರಗಿ: 14 ವರ್ಷದೊಳಗಿನ ಮಕ್ಕಳನ್ನು ಕೃಷಿ, ಕೈಗಾರಿಕಾ ವಲಯ, ಗ್ಯಾರೇಜ್‌, ಹೋಟಲ್‌, ಅಂಗಡಿಗಳು ಸೇರಿದಂತೆ ಅಪಾಯಕಾರಿ ಕ್ಷೇತ್ರದಲ್ಲಿ ಕೆಲಸಕ್ಕೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎನ್‌. ಜರಗು ಹೇಳಿದರು.
Vijaya Karnataka Web working with children is a serious crime
ಮಕ್ಕಳನ್ನು ದುಡಿಸಿಕೊಳ್ಳುವುದು ಗಂಭೀರ ಅಪರಾಧ


ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ನಿರ್ಮೂನಾ ಹಾಗೂ ಪುನರ್‌ ವಸತಿ ಸಂಘ ಮತ್ತು ಮಕ್ಕಳ ಸಹಾಯವಾಣಿ-1098 ಕಲಬುರಗಿ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಂದು ಕಡೆ ಮಗುವನ್ನು ದೇವರು ನೀಡಿರುವ ವರವೆಂದು ಕರೆಯುವ ನಾವು ಇಂದು ಮಕ್ಕಳನ್ನು ದುಡಿಮೆಯಲ್ಲಿ ಬಳಸಿಕೊಳ್ಳುತ್ತಿರುವುದು ಕಾನೂನಿನ ರೀತಿಯಲ್ಲಿ ಮತ್ತು ಮಾನವಿಯ ದೃಷ್ಟಿಯಿಂದಲೂ ತಪ್ಪು ಎಂದರು.

ಮುಗ್ಧ ಮಕ್ಕಳನ್ನು ದುಡಿಸಿಕೊಳ್ಳುವುದರ ಬದಲು ಅವರಿಗೆ ಶಿಕ್ಷಣ ಕೊಡಿಸುವಲ್ಲಿ ನಾವು ಮುಂದಾಗುವುದಿಲ್ಲವೋ ಅಲ್ಲಿಯವರೆಗೆ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಅಸಾಧ್ಯ. ಮೊದಲು ನಾವು ಬದಲಾಗಬೇಕಿದೆ. ಭಾರತ ಸಂವಿಧಾನದಲ್ಲಿ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕು ನೀಡಲಾಗಿದೆ. ಇದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನುಡಿದರು.

ಡಾನ್‌ ಬಾಸ್ಕೊ ಸಂಸ್ಥೆಯ ನಿರ್ದೇಶಕ ಫಾದರ್‌ ಸಜಿತ್‌ ಜಾರ್ಜ್‌ ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಕ್ಕಳನ್ನು ತಂದೆ-ತಾಯಿಯವರು ಕಟ್ಟಡ ಕಟ್ಟುವುದರಲ್ಲಿ ಕೂಲಿ ಆಳಾಗಿ ಬಳಸದೇ ಉತ್ತಮ ಶಿಕ್ಷಣ ನೀಡುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಕಾರಣರಾಗಬೇಕು ಎಂದು ಸಲಹೆ ನೀಡಿದರು.

ಪ್ರಭಾರಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಶರಣಪ್ಪ, ಶಿಷ್ಠಾಚಾರ ತಹಸೀಲ್ದಾರ್‌ ಪ್ರಕಾಶ ಚಿಂಚೋಳಿಕರ್‌, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೀನಾ ರಶ್ಮಿ ಡಿಸೋಜಾ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅರುಣಕುಮಾರ ಕಿಣ್ಣಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಪಾಟೀಲ್‌, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಲಬುರಗಿ ಕಟ್ಟಡ ಕಾರ್ಮಿಕ ಕೇಂದ್ರ ವಲಯ ಜಿಲ್ಲಾಧ್ಯಕ್ಷ ಶಂಕರ ಕಟ್ಟಿಸಂಗಾವಿ, ಎ.ಐ.ಟಿ.ಯು.ಸಿ ಅಧ್ಯಕ್ಷ ಪ್ರಭು ಯಳಸಂಗಿ, ಚೈಲ್ಡ್‌ ಲೈನ್‌ ನೋಡಲ್‌ ಕೇಂದ್ರದ ನಿರ್ದೇಶಕ ರೇಣುಕಾ ಗುಬ್ಬೇವಾಡ, ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಆನಂದರಾಜ, ಉಪ ಕಾರ್ಮಿಕ ಆಯುಕ್ತ ಡಾ.ಗಿರೀಶ್‌ ಪಾಟೀಲ್‌, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ದೇಶಪಾಂಡೆ, ಡಿವೈ.ಎಸ್‌.ಪಿ.ಗೋಪಾಂಡೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಜ್ಞಾ ವಿಧಿ ಬೋಧನೆ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಇದಲ್ಲದೆ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಬಾಲಕಾರ್ಮಿಕ ಮಕ್ಕಳಿಗೆ ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ಜಗತ್‌ ವೃತ್ತದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಏರ್ಪಡಿಸಲಾದ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎನ್‌.ಜರಗು ಚಾಲನೆ ನೀಡಿದರು. ಜಾಥಾವು ಕಲಬುರಗಿ ನಗರದ ಜಗತ್ತ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಕೊನೆಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ