ಆ್ಯಪ್ನಗರ

ಕುಡಿದ ಮತ್ತಲ್ಲಿ 'ಗಜಕೇಸರಿ' ಯಶ್‌ನಂತೆ ಕಾಡಾನೆಗೆ ಕಿಸ್‌ ಕೊಡಲು ಹೋದ ಕುಡುಕ, ಮುಂದೇನಾಯ್ತು?

ಒಂದು ಬದಿಯಲ್ಲಿ ಆನೆ ವೀಕ್ಷಿಸುತ್ತಿದ್ದವರು ಚಲ್ಲಾಪಿಲ್ಲಿಯಾಗಿ ಓಡುತ್ತಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಅಲ್ಲಿಗೆ ಧಾವಿಸಿದಾಗ ಮುಖದಲ್ಲಿ ರಕ್ತ ಸೋರುತ್ತಿದ್ದ ರಾಜು ಎಂಬಾತ ಕೆಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ.

TOI.in 2 May 2019, 12:24 pm
ಕೋಲಾರ: ಕುಡಿದ ಮತ್ತಿನಲ್ಲಿ 24 ವರ್ಷದ ಯುವಕನೊಬ್ಬ ಸಿನಿಮಾದಲ್ಲಿ ತೋರಿಸಿದಂತೆ ಕಾಡಾನೆಗೆ ಮುತ್ತು ನೀಡಲು ಹೋಗಿ ಜೀವಕ್ಕೇ ಕುತ್ತು ತಂದುಕೊಂಡಿರುವ ಘಟನೆ ಕೋಲಾರದಲ್ಲಿ ಬುಧವಾರ ನಡೆದಿದೆ.

ಮಾಲೂರು ಸಮೀಪ 6 ಕಾಡಾನೆಗಳ ಹಿಂಡನ್ನು ಕರ್ನಾಟಕ-ತಮಿಳುನಾಡಿನ ಗಡಿಯ ಅರಣ್ಯಕ್ಕೆ ಅಟ್ಟಲು ಅರಣ್ಯ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಂತ ಸಂದರ್ಭ ಈ ಘಟನೆ ಸಂಭವಿಸಿದೆ.

ಡಿಎನ್‌ ದೊಡ್ಡಿ ಗ್ರಾಮದಲ್ಲಿ ಮಾವಿನ ತೋಪಿಗೆ ನುಗ್ಗಿ ಕಾಡಾನೆಗಳು ಬೆಳೆ ಹಾನಿ ಮಾಡುತ್ತಿವೆ ಎಂದು ದೂರು ನೀಡಿದ ಹಿನ್ನೆಲೆ ಕಳೆದ ಒಂದು ವಾರದಿಂದ ಬೀಡು ಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಪ್ರಯತ್ನ ನಡೆಸಲಾಗುತ್ತಿದೆ. ಈ ಸಂದರ್ಭ ಸ್ಥಳೀಯರು ಕಾಡಾನೆ ಓಡಿಸಲು ಅರಣ್ಯ ಸಿಬ್ಬಂದಿ ಜತೆ ಕೈ ಜೋಡಿಸಿದ್ದಾರೆ.

ಬುಧವಾರ ಅರಣ್ಯ ಸಿಬ್ಬಂದಿ ಜತೆ ಡಿಎನ್‌ ದೊಡ್ಡಿ ಗ್ರಾಮದ ಒಂದಷ್ಟು ಮಂದಿ ಮತ್ತು ಸ್ಥಳೀಯ ಗ್ರಾಮಗಳ ಮಂದಿ ಜತೆಯಾಗಿ ಆನೆಗಳನ್ನು ಓಡಿಸುವ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಇದೇ ಆನೆಗಳನ್ನು ನೋಡಲು ಸಾಕಷ್ಟು ಮಂದಿ ಸ್ಥಳೀಯರು ಆಗಮಿಸಿದ್ದಾರೆ. ಒಂದು ಬದಿಯಲ್ಲಿ ಆನೆ ವೀಕ್ಷಿಸುತ್ತಿದ್ದವರು ಚಲ್ಲಾಪಿಲ್ಲಿಯಾಗಿ ಓಡುತ್ತಿರುವುದನ್ನು ಗಮನಿಸಿದ ಅರಣ್ಯ ಸಿಬ್ಬಂದಿ ಅಲ್ಲಿಗೆ ಧಾವಿಸಿದಾಗ ಮುಖದಲ್ಲಿ ರಕ್ತ ಸೋರುತ್ತಿದ್ದ ರಾಜು ಎಂಬಾತ ಕೆಳಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಯುವಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಜಕೇಸರಿ ಸಿನಿಮಾದಲ್ಲಿ ನಟ ಯಶ್‌ ಆನೆ ಮತ್ತಿಕ್ಕುವ ದೃಶ್ಯದಿಂದ ಪ್ರೇರಿತನಾಗಿದ್ದ ರಾಜು ಕಾಡಾನೆಯ ಸಮೀಪಕ್ಕೆ ಹೋಗಿದ್ದಾನೆ. ಈ ವೇಳೆ ಆನೆ ಆತನ ಮೇಲೆ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ಘಟನೆ ನಡೆದ ನಂತರ ಗುಸುಗುಸು ಎನ್ನುತ್ತಿದ್ದರು. ಆನೆಗೆ ಮುತ್ತು ನೀಡುತ್ತೇನೆ ಎಂದು ಸ್ನೇಹಿತನ ಬಳಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಎನ್ನಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಲೂರು ಆರ್‌ಎಫ್‌ಒ ಕೆಪಿ ಧನಲಕ್ಷ್ಮಿ, ಗ್ರಾಮಸ್ಥರಿಗೆ ಕಾಡು ಪ್ರಾಣಿಗಳ ಹತ್ತಿರ ಹೋಗದಿರಲು ಮತ್ತು ಅವುಗಳಿಗೆ ತೊಂದರೆ ಉಂಟು ಮಾಡದಿರಲು ಅಧಿಕಾರಿಗಳು ಜಾಗ್ರತೆ ಮೂಡಿಸುತ್ತಿದ್ದಾರೆ. ಕಾಡಾನೆಗಳು ಕಾಡಿನತ್ತ ಮರಳುತ್ತಿವೆ. ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ