ಆ್ಯಪ್ನಗರ

ಸೋಲು ಒಪ್ಪಿಕೊಂಡಿದ್ದೇವೆ, ಸುಮಲತಾ ಸಲಹೆ ಬೇಕಿಲ್ಲ

ಬೆಂಗಳೂರು : ಮಂಡ್ಯದ ಸೋಲನ್ನು ಜೆಡಿಎಸ್‌ ಗೌರವಯುತವಾಗಿ ಒಪ್ಪಿಕೊಂಡು ಪಕ್ಷದ ಪುನಶ್ಚೇತನಕ್ಕೆ ಮುಂದಾಗಿದೆ...

Vijaya Karnataka 10 Jun 2019, 5:00 am
ಬೆಂಗಳೂರು : ಮಂಡ್ಯದ ಸೋಲನ್ನು ಜೆಡಿಎಸ್‌ ಗೌರವಯುತವಾಗಿ ಒಪ್ಪಿಕೊಂಡು ಪಕ್ಷದ ಪುನಶ್ಚೇತನಕ್ಕೆ ಮುಂದಾಗಿದೆ. ಆದರೆ, ಸಂಸದರಾಗಿ ಆಯ್ಕೆಯಾದ ಕೆಲವೇ ದಿನಗಳಲ್ಲಿ ತಮ್ಮ ಆದ್ಯತೆ ಬದಲಿಸಿರುವ ಸುಮಲತಾ ಅಂಬರೀಷ್‌ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿರುವುದು ಸರಿಯಲ್ಲವೆಂದು ಜೆಡಿಎಸ್‌ ವಕ್ತಾರ ರಮೇಶ್‌ ಬಾಬು ಆಕ್ಷೇಪಿಸಿದ್ದಾರೆ.
Vijaya Karnataka Web ramesh babu jds


ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಅವರು, ''ಜೆಡಿಎಸ್‌ ತನ್ನ ಸೋಲಿನ ಪರಾಮರ್ಶೆ ಮಾಡಿಕೊಳ್ಳುತ್ತಿದೆ. ಹೋರಾಟವನ್ನೇ ಬದುಕನ್ನಾಗಿ ಸ್ವೀಕರಿಸಿರುವ ದೇವೇಗೌಡರು ಮತ್ತು ಕುಮಾರಸ್ವಾಮಿ ನಾಯಕತ್ವದಲ್ಲಿ ಪಕ್ಷ ಪುನಃ ಪುಟಿದೇಳುವ ವಿಶ್ವಾಸವಿದೆ. ಸುಮಲತಾ ಕಾಂಗ್ರೆಸ್‌ಗೆ ಪುಕ್ಕಟೆ ಸಲಹೆ ನೀಡುವುದರ ಜತೆಗೆ ಜೆಡಿಎಸ್‌ ಪಕ್ಷವನ್ನು ಟೀಕಿಸುತ್ತಿದ್ದಾರೆ. ಅಂಬರೀಷ್‌ ಅವರೂ 2 ವಿಧಾನಸಭೆ, 1 ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದರು. ಸುಮಲತಾ ಸಲಹೆ ಪಡೆದುಕೊಂಡಿದ್ದರೆ ಅಂಬರೀಷ್‌ ಸೋಲುತ್ತಲೇ ಇರಲಿಲ್ಲ. ಸಲಹೆ ಕೊಡಲು ಇವರಿಗೆ ಸಮಯ ಇರಲಿಲ್ಲವೊ ಅಥವಾ ಅಂಬರೀಷ್‌ ಅವರಿಗೆ ಇವರ ಮೇಲೆ ವಿಶ್ವಾಸ ಇರಲಿಲ್ಲವೊ ಎಂಬುದನ್ನು ಸುಮಲತಾ ಅವರೇ ಹೇಳಬೇಕು,'' ಎಂದು ವ್ಯಂಗ್ಯವಾಡಿದ್ದಾರೆ.

''ಜನತಂತ್ರದಲ್ಲಿ ಚುನಾಯಿತ ಪ್ರತಿನಿಧಿ ತನ್ನ ಮತದಾರರೊಂದಿಗೆ ಅನೇಕ ರೀತಿಯಿಂದ ಸಂವಾದ ಮಾಡುತ್ತಾರೆ. ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಕ್ಷೇತ್ರದ ಜನತೆಯೊಂದಿಗೆ ಹಂಚಿಕೊಂಡ ಭಾವನೆ ವಿಚಾರದಲ್ಲಿ ಸುಮಲತಾ ದರ್ಪದಿಂದ ಟೀಕಿಸಿದ್ದಾರೆ. ಜತೆಗೆ ರಾಜೀನಾಮೆ ಕೇಳಿದ್ದಾರೆ. ಮಂಡ್ಯದ ಸ್ವಾಭಿಮಾನಕ್ಕೆ ಪೂರಕವಾಗಿ ಸುಮಲತಾ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲವಿರುತ್ತದೆ. ಬಿಜೆಪಿಯವರು ಮತ್ತು ರಾಜಕೀಯ ನೆಲೆಗಾಗಿ ಪರಿತಪಿಸುತ್ತಿರುವ ಕೆಲ ನಾಯಕರನ್ನು ಮೆಚ್ಚಿಸಲು ನಮ್ಮ ಪಕ್ಷದ ವಿರುದ್ಧ ಆಪಾದನೆ ಹೊರಿಸಿದರೆ ಅದನ್ನು ಬಯಲು ಮಾಡುವ, ಉತ್ತರಿಸುವ ಶಕ್ತಿ ಜೆಡಿಎಸ್‌ಗೆ ಇದೆ,'' ಎಂದು ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ