ಆ್ಯಪ್ನಗರ

ಸರಕಾರಕ್ಕೆ ಇಕ್ಕಟ್ಟು: ಎಜಿ ಸಲಹೆಗೆ ಮೊರೆ

ಕೆಪಿಎಸ್‌ಸಿ ನಡೆಸಿದ್ದ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳ ನೇಮಕವನ್ನು ರದ್ದುಗೊಳಿಸಿದ್ದ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿರುವ ಕಾರಣ ಸರಕಾರ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದೆ. ಇದರಿಂದ ಹೊರಬರಲು ಅಡ್ವೊಕೇಟ್‌ ಜನರಲ್‌ ಸಲಹೆ ಪಡೆಯಲು ಮುಂದಾಗಿದೆ.

Vijaya Karnataka 17 Sep 2018, 5:00 am
ಬೆಂಗಳೂರು: ಕೆಪಿಎಸ್‌ಸಿ ನಡೆಸಿದ್ದ 2011ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳ ನೇಮಕವನ್ನು ರದ್ದುಗೊಳಿಸಿದ್ದ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿರುವ ಕಾರಣ ಸರಕಾರ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿದೆ. ಇದರಿಂದ ಹೊರಬರಲು ಅಡ್ವೊಕೇಟ್‌ ಜನರಲ್‌ ಸಲಹೆ ಪಡೆಯಲು ಮುಂದಾಗಿದೆ.
Vijaya Karnataka Web BNG-1412-2-2-KPSC


1988, 1999 ಹಾಗೂ 2004ನೇ ಸಾಲಿನ ಕೆಎಎಸ್‌ ನೇಮಕದಲ್ಲಿ ಅಕ್ರಮ ಸಾಬೀತಾಗಿದ್ದರೂ ಕಳಂಕಿತ ಅಧಿಕಾರಿಗಳ ರಕ್ಷಣೆ ಮುಂದಾಗಿದೆ ಎಂಬ ಆರೋಪ ಸರಕಾರ ಹೊತ್ತಿರುವಾಗಲೇ ಸುಪ್ರೀಂಕೋರ್ಟ್‌ನ ಈ ತೀರ್ಪು ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಲು ಕೈ ಕಟ್ಟಿ ಹಾಕುವಂಥ ಪರಿಸ್ಥಿತಿ ತಂದೊಡ್ಡಿದೆ.

ನೇಮಕ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿ ಹಾಗೂ ಸರಕಾರ ಎರಡೂ ಕಡೆಯಿಂದ ಲೋಪವಾಗಿದೆ. ಇದಕ್ಕೆ ಆರಂಭದಲ್ಲೇ ಕಾನೂನಾತ್ಮಕ ಪರಿಹಾರ ಕಂಡುಕೊಳ್ಳಲಿಲ್ಲ. ಪರಿಣಾಮ ಕೋರ್ಟ್‌ನಲ್ಲೇ ಪ್ರಕರಣ ಇತ್ಯರ್ಥವಾಗಲಿ ಎಂಬ ನಿಲುವು ಕೈಗೊಂಡಿದ್ದರಿಂದ ಸರಕಾರ ಈಗ ದೊಡ್ಡ ಬೆಲೆ ತೆರಬೇಕಾಗಿದೆ.

ನೇಮಕ ಪ್ರಕ್ರಿಯೆಯಲ್ಲಿ ಲಂಚದ ಆರೋಪ, ಸಂದರ್ಶನದಲ್ಲಿ ಸ್ವಜನ ಪಕ್ಷಪಾತದ ಆರೋಪ ಅಭ್ಯರ್ಥಿಗಳಿಂದ ಕೇಳಿ ಬಂದಿದ್ದರೂ, ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ಒಮ್ಮೆ ನೇಮಕ ರದ್ದುಪಡಿಸುವ ಇನ್ನೊಮ್ಮೆ ಕೋರ್ಟ್‌ ತೀರ್ಪು ಒಪ್ಪುವ ದ್ವಂದ್ವ ನಿರ್ಧಾರ ಪ್ರಕರಣವನ್ನು ಮತ್ತಷ್ಟು ಗೋಜಲು ಮೂಡಿಸಿತು. ಇದಾದ ಬಳಿಕವೂ ಸ್ಪಷ್ಟ ಹೆಜ್ಜೆ ಇಡದ ಸರಕಾರ ಈಗ ಮತ್ತೆ ಕಾನೂನು ಪಂಡಿತರ ಮೊರೆ ಹೋಗಬೇಕಾಗಿದೆ.

2011ನೇ ಸಾಲಿನ ಒಟ್ಟು 362 ಹುದ್ದೆಗಳ ನೇಮಕದಲ್ಲಿ ಅಕ್ರಮಗಳ ಆರೋಪ ಹೊರಬಿದ್ದಾಗ ಪ್ರಕರಣವನ್ನು ಸರಕಾರ ಸಿಐಡಿಗೆ ವಹಿಸಿತ್ತು. ತನಿಖೆ ವಿಳಂಬಗೊಂಡಂತೆ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಲ್ಲಿ ಚಡಪಡಿಕೆ ಉಂಟಾಗಿತ್ತು. ವರದಿಯಲ್ಲಿ ಹಲವು ಹಂತಗಳಲ್ಲಿ ಅಕ್ರಮ ನಡೆದ ಕುರಿತು ಬೊಟ್ಟು ಮಾಡಿದ್ದರಿಂದ ಸರಕಾರ ನೇಮಕದ ಅಧಿಸೂಚನೆಯನ್ನು ರದ್ದು ಮಾಡಿತ್ತು. ಕೆಲ ಅಭ್ಯರ್ಥಿಗಳು ಸರಕಾರದ ನಿಲುವನ್ನು ಕೆಎಟಿಯಲ್ಲಿ ಪ್ರಶ್ನಿಸಿದರು. ಮರು ನೇಮಕ ಮಾಡಿಕೊಳ್ಳುವಂತೆ ಕೆಎಟಿ ಸೂಚಿಸಿದಾಗ ಸರಕಾರ ಮರು ಮಾತನಾಡದೆ ಒಪ್ಪಿಕೊಂಡಿತ್ತು. ಇದು ಕೆಲವರ ಹುಬ್ಬೇರಿಸುವಂತೆ ಮಾಡಿದ್ದರಿಂದ ಅಭ್ಯರ್ಥಿಗಳು ಸುಪ್ರೀಂ ಮೊರೆ ಹೋದರೂ, ಸರಕಾರಕ್ಕೆ ಆದೇಶಿಸಿದ್ದ ಕೆಲವೊಂದು ಸಲಹೆಗಳನ್ನು ಒಪ್ಪಲು ಸಿದ್ಧತೆ ನಡೆಸಲಿಲ್ಲ. ಇದು ಕಾನೂನು ಹೋರಾಟದ ಬಾಗಿಲನ್ನು ಮುಚ್ಚಿದೆ ಎಂಬ ಮಾತು ಕೇಳಿ ಬಂದಿದೆ.

ಮೌನಕ್ಕೆ ಶರಣಾದ ಕೆಪಿಎಸ್‌ಸಿ

ಕೆಪಿಎಸ್‌ಸಿ ತಾನು ನಡೆಸಿರುವ ಪರೀಕ್ಷಾ ವಿಧಾನ ಸರಿ ಇದೆ ಎಂದು ವಾದಿಸಿದೆ. ಸಂದರ್ಶನದ ಹಂತದಲ್ಲೂ ತಪ್ಪಾಗಿಲ್ಲ ಎಂಬ ವಾದ ಮುಂದಿಟ್ಟಿದೆ. ಯಾವುದೇ ತಗಾದೆ ಇದ್ದಲ್ಲಿ ಕೋರ್ಟ್‌ ನೀಡುವ ಆದೇಶಕ್ಕೆ ಬದ್ಧ ಎಂಬ ಸಮಜಾಯಿಷಿ ನೀಡಿ ಮೌನಕ್ಕೆ ಶರಣಾಗಿದೆ. ಆಯ್ಕೆಪಟ್ಟಿ ಅಂತಿಮಗೊಳಿಸಿ ಸರಕಾರಕ್ಕೆ ರವಾನಿಸಿದ ನಂತರ ಆಯೋಗದ ಪಾತ್ರ ಗೌಣವಾಗಿರುವ ಕಾರಣ ನೇಮಕಾತಿ ವಿಚಾರವಾಗಿ ಸರಕಾರವೇ ಸ್ಪಷ್ಟ ನಿಲುವು ಕೈಗೊಳ್ಳಬೇಕಿದೆ.

===============

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ