ಆ್ಯಪ್ನಗರ

ಏ.30ರಂದು ಮದ್ಯ ಮಾರಾಟ ಬಂದ್‌

ಮದ್ಯ ಮಾರಾಟಗಾರರ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.30ರಂದು ರಾಜ್ಯಾದ್ಯಂತ ಸಂಪೂರ್ಣ ಮದ್ಯ ಮಾರಾಟ ಸ್ಥಗಿತಗೊಳಿಸಲಾಗುವುದು ಎಂದು ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇನ್‌ ಕರ್ನಾಟಕ ಸಂಸ್ಥೆ ತಿಳಿಸಿದೆ.

ವಿಕ ಸುದ್ದಿಲೋಕ 19 Apr 2016, 4:00 am

ಬೆಂಗಳೂರು: ಮದ್ಯ ಮಾರಾಟಗಾರರ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.30ರಂದು ರಾಜ್ಯಾದ್ಯಂತ ಸಂಪೂರ್ಣ ಮದ್ಯ ಮಾರಾಟ ಸ್ಥಗಿತಗೊಳಿಸಲಾಗುವುದು ಎಂದು ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇನ್‌ ಕರ್ನಾಟಕ ಸಂಸ್ಥೆ ತಿಳಿಸಿದೆ.

''ನಮ್ಮ ಬೇಡಿಕೆಗಳ ಸಂಬಂಧ ಸಂಸ್ಥೆ ಪದಾಧಿಕಾರಿಗಳು ಏ.26ರಂದು ಬೆಂಗಳೂರಿನಲ್ಲಿ ಸಭೆ ಸೇರಿ ಮುಖ್ಯಮಂತ್ರಿಯವರ ನಿವಾಸಕ್ಕೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಹೊರಟು ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಸರಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಏ.28 ಮತ್ತು 29ರಂದು ರಾಜ್ಯಾದ್ಯಂತ ಮದ್ಯ ಖರೀದಿಯ ಪರ್ಮಿಟ್‌ ಬಂದ್‌ ಚಳವಳಿ ನಡೆಸಲಾಗುವುದು. ಏ.30ರಂದು ಸಂಪೂರ್ಣ ಮದ್ಯ ಮಾರಾಟವನ್ನೇ ಬಂದ್‌ ಮಾಡಲಾಗುವುದು,''ಎಂದು ಸಂಸ್ಥೆ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ್‌ ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಎಚ್ಚರಿಸಿದರು.

ಅಧ್ಯಕ್ಷ ಎಸ್‌. ಗುರುಸ್ವಾಮಿ ಮಾತನಾಡಿ,''ಸನ್ನದು ನವೀಕರಣ ಸಂದರ್ಭದಲ್ಲಿ ಅಧಿಕಾರಿಗಳು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರಕಾರ ಕಾನೂನು ತಿದ್ದುಪಡಿ ಮಾಡುವುದು, ಮದ್ಯ, ಬಿಯರ್‌ಗಳ ದರ ಹೆಚ್ಚಳ ಪ್ರಸ್ತಾವನೆಗಳನ್ನು ಹಿಂತೆಗೆದುಕೊಂಡು ಸನ್ನದು ನಿರ್ವಹಣೆಯ ಖರ್ಚು ವೆಚ್ಚಗಳು ಹೆಚ್ಚಳಗೊಂಡಿರುವುದರಿಂದ ಶೇ.20ರಷ್ಟು ಲಾಭಾಂಶ ನೀಡಬೇಕು,''ಎಂದು ಮನವಿ ಮಾಡಿದರು.

''ಸಿಎಲ್‌-9ನಲ್ಲಿ ಮದ್ಯ ಪಾರ್ಸೆಲ್‌ ಮಾಡಲು ಅವಕಾಶ ಕೊಡುವುದು, ಎಂಎಸ್‌ಐಎಲ್‌ ಅಂಗಡಿಗಳ ಸನ್ನದು ಶುಲ್ಕವನ್ನು ಏಕರೂಪವಾಗಿ ಜಾರಿಗೊಳಿಸುವುದು, ಅಬಕಾರಿ ಆಯುಕ್ತರು ಹೊರಡಿಸಿರುವ ಸುತ್ತೋಲೆ ಅನುಷ್ಠಾನಗೊಳಿಸುವುದು. ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರ ಪದಾರ್ಥಗಳ ಮೇಲೆ ವಿಧಿಸುವ ತೆರಿಗೆಯನ್ನು ಇತರ ಮಾಂಸಾಹಾರಿ ಹೋಟೆಲ್‌ಗಳಲ್ಲಿ ವಿಧಿಸುವ ದರಕ್ಕೆ ಅನ್ವಯವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು,''ಎಂದು ಆಗ್ರಹಿಸಿದರು.

''ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಈ ಹಿಂದೆಯೇ ಭರವಸೆ ನೀಡಿತ್ತು. 2015ರ ಸೆಪ್ಟೆಂಬರ್‌ ತಿಂಗಳಲ್ಲಿ ಬೇಡಿಕೆಯನ್ನು ಮುಂದಿಟ್ಟಾಗ ಆರ್ಥಿಕ ಇಲಾಖೆಯವರು ಸಭೆ ನಡೆಸಿ, ಅವುಗಳನ್ನು ಕಾಲಮಿತಿಯೊಳಗೆ ಈಡೇರಿಸುವ ಆಶ್ವಾಸನೆ ನೀಡಿದ್ದರು. 2015ರ ಫೆ.2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದ್ದರು. ಆದರೆ, ಇದುವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ,''ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ