ಆ್ಯಪ್ನಗರ

ಅಮೃತವರ್ಷಿಣಿ FM ಚಾನಲ್ ಸ್ಥಗಿತದಿಂದ ಕಲಾ ಪರಂಪರೆಗೆ ಆಘಾತ: ನಾಡೋಜ ಡಾ. ಮಹೇಶ ಜೋಶಿ

'ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದ ಹಲವಾರು ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕಂಡು ಬರುತ್ತಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಲೇ ಬಂದಿದೆ. ಆದರೆ ತನ್ನ ಗಾಢ ನಿದ್ರೆಯಿಂದ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ. ಕನ್ನಡಕ್ಕೆ ಸೂಕ್ತ ಗೌರವ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಟಿಬದ್ಧವಾಗಿ ನಿಲ್ಲಲಿದೆ' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

Edited byದಿಲೀಪ್ ಡಿ. ಆರ್. | Vijaya Karnataka Web 17 Aug 2022, 6:19 pm

ಹೈಲೈಟ್ಸ್‌:

  • ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತದ ಪ್ರಸಾರಕ್ಕಾಗಿಯೇ ಮೀಸಲಾಗಿದ್ದ 'ಅಮೃತ ವರ್ಷಿಣಿ' ಎಫ್ಎಂ ಚಾನಲ್
  • ತೆಲುಗು ಭಾಷೆಯ 'ರಾಗಂ' ಚಾನಲ್ ಅನ್ನು ಆರಂಭಿಸಲಾಗಿದೆ
  • ರಾಜ್ಯದ 3000 ಕ್ಕೂ ಹೆಚ್ಚು ಕಲಾವಿದರು 'ಅಮೃತ ವರ್ಷಿಣಿ' ಮೂಲಕ ಸಂಗೀತ ಕಛೇರಿ ನೀಡಿದ್ದರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web mahesh joshi
ಅಮೃತವರ್ಷಿಣಿ FM ಚಾನಲ್ ಸ್ಥಗಿತದಿಂದ ಕಲಾ ಪರಂಪರೆಗೆ ಆಘಾತ: ನಾಡೋಜ ಡಾ. ಮಹೇಶ ಜೋಶಿ
ಬೆಂಗಳೂರು: ಜನ ಸಾಮಾನ್ಯರಿಗೆ ಅತಿ ಸನಿಹವಾದ ಹೊಣೆಯನ್ನು ಆಕಾಶವಾಣಿ ನಿರ್ವಹಿಸುತ್ತಿದೆ. ನುಡಿ, ಕಲೆ, ಸಂಸ್ಕೃತಿ, ಸಂಗೀತ ಪರಂಪರೆಯನ್ನು ಪ್ರತಿಬಿಂಬಿಸಬೇಕಿದ್ದ ಆಕಾಶ ವಾಣಿಯ ʻಅಮೃತ ವರ್ಷಿಣಿʼ ಎಫ್ಎಂ ಚಾನಲ್ (100.10 ಎಫ್ ಎಂ) ಅನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿ ದೊಡ್ಡ ತಪ್ಪು ಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಮತ್ತು ಹಿಂದುಸ್ತಾನಿ ಸಂಗೀತದ ಪ್ರಸಾರಕ್ಕಾಗಿಯೇ ಮೀಸಲಾಗಿದ್ದ ಈ 'ಅಮೃತ ವರ್ಷಿಣಿ' ಎಫ್ಎಂ ಚಾನಲ್ ಪ್ರಸಾರವನ್ನು ಸ್ಥಗಿತಗೊಳಿಸಿ, ಅದರ ಬದಲಾಗಿ ತೆಲುಗು ಭಾಷೆಯ 'ರಾಗಂ' ಚಾನಲ್ ಅನ್ನು ಆರಂಭಿಸಲಾಗಿದೆ. 'ಅಮೃತ ವರ್ಷಿಣಿ'ಯು ನಮ್ಮ ನಾಡಿನ ಕರ್ನಾಟಕ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಸಂಗೀತ ಕಲಾವಿದರಿಗೆ ಉತ್ತಮ ಅವಕಾಶ ನೀಡುತ್ತಿತ್ತು. ಅಲ್ಲದೇ ಶಾಸ್ತ್ರೀಯ ಸಂಗೀತ ಪರಂಪರೆಗೆ ಉತ್ತೇಜನ ನೀಡುತ್ತಿತ್ತು. ಈ ಬಾನುಲಿಯು ಕೇಳುಗರಿಗೆ, ಶಾಸ್ತ್ರೀಯ ಸಂಗೀತ ಅಭ್ಯಾಸಿಗಳಿಗೆ ಆಪ್ಯಾಯಮಾನವಾಗಿತ್ತು. ಎರಡು ದಶಕಗಳಿಂದ ದಿನವಿಡೀ ಶಾಸ್ತ್ರೀಯ ಸಂಗೀತ ಪ್ರಸಾರವಾಗುತ್ತಾ ಹೃನ್ಮನಗಳನ್ನು ತಣಿಸುತ್ತಿತ್ತು. ಸರಿ ಸುಮಾರು ನಮ್ಮ ರಾಜ್ಯದ 3000 ಕ್ಕೂ ಹೆಚ್ಚು ಕಲಾವಿದರು 'ಅಮೃತ ವರ್ಷಿಣಿ' ಮೂಲಕ ಸಂಗೀತ ಕಛೇರಿ ನೀಡಿದ್ದರು. ಸರಿ ಸುಮಾರು ವರ್ಷದಿಂದ ಈ ಚಾನಲ್ ಅನ್ನು ಸ್ಥಗಿತಗೊಳಿಸಿರುವುದು ವಿಷಾದನೀಯ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.
ಕೇಂದ್ರ ಸರ್ಕಾರದಿಂದ ಕನ್ನಡ ವಿರೋಧಿ ನೀತಿ: ಕಸಾಪ ಅಧ್ಯಕ್ಷ ಮಹೇಶ್ ಜೋಶಿ ಅಸಮಾಧಾನ
ಪ್ರತಿ ವರ್ಷ ಆಕಾಶವಾಣಿ ಆಯೋಜಿಸಲಾಗುತ್ತಿದ್ದ ಸಂಗೀತ ಸಮ್ಮೇಳನ, ಸಂಗೀತ ಕಛೇರಿಗಳು, ರಾಷ್ಟ್ರ ಮಟ್ಟದ ಸಂಗೀತ ಸ್ಪರ್ಧೆಗಳನ್ನು ಕಳೆದ ಕೊರೊನಾ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಅದನ್ನೂ ಪುನಾರಂಭಿಸದಿರುವುದು ಭಾರತೀಯ ಶಾಸ್ತ್ರೀಯ ಸಂಗೀತ ಕಲೆ ಹಾಗೂ ಕಲಾವಿದರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ಆಕಾಶವಾಣಿಯಲ್ಲಿ ನಿತ್ಯ ಬೆಳಗ್ಗೆ ಸಂಜೆ ಕನ್ನಡದ ಸಂಗೀತ ಕಛೇರಿಗಳು, ಕಲಾವಿದರ ಸಂದರ್ಶನಗಳು, ಕಲಿಕಾ ತರಬೇತಿಗಳು ಸೇರಿದಂತೆ ಇತ್ಯಾದಿಗಳ ಸಾಂಸ್ಕೃತಿಕ ರಾಯಭಾರಿಯಾಗಬೇಕಿದ್ದ ಆಕಾಶವಾಣಿ ದಾರಿ ತಪ್ಪುತ್ತಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಕಲಾ ಪ್ರಕಾರಗಳ ಪ್ರಸಾರದಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಕಾಶವಾಣಿಯಲ್ಲಿ ಬಿತ್ತರವಾಗುವ ಸಂಗೀತ ಕಛೇರಿಗಳನ್ನು ಆಲಿಸುವ ಕೇಳುಗರ ಸಂಖ್ಯೆ ನಮ್ಮ ನಾಡಿನಲ್ಲಿ ಅಪಾರವಾಗಿದೆ. ಒಂದು ರೀತಿಯಲ್ಲಿ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಆಕಾಶವಾಣಿಯೇ ಪ್ರೋತ್ಸಾಹದ ನೆಲೆ. ಆಕಾಶವಾಣಿಯ ಗ್ರೇಡ್ ಕಲಾವಿದರಾಗುವುದು ಹೆಮ್ಮೆಯ ಸಂಗತಿ. ಹೀಗಿರುವಾಗ 'ಅಮೃತವರ್ಷಿಣಿ' ಚಾನಲ್ ಅನ್ನು ಏಕಾಏಕಿಯಾಗಿ ಪ್ರಸಾರ ಭಾರತಿ ನಿಲ್ಲಿಸಿರುವ ಈ ಕ್ರಮದಿಂದ ಕನ್ನಡಿಗರಿಗೆ ಭಾರಿ ನಷ್ಟವಾಗಿದೆ. ಪ್ರಾದೇಶಿಕ ಭಾಷೆ, ಸಂಸ್ಕೃತಿ, ಪರಂಪರೆಯ ಉಳಿವಿಗಾಗಿ ಕಾಳಜಿ ವಹಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸುತ್ತಲೇ ಇದ್ದಾರೆ. ಪ್ರಸಾರ ಭಾರತ ಪ್ರಾದೇಶಿಕ ಕಲಾವಿದರನ್ನು ಪ್ರೋತ್ಸಾಹಿಸುವ ಬದಲು ತನ್ನ ನಿಲುವಿನಿಂದ ಶಿಥಿಲವಾಗುತ್ತಿದೆ.

ಅಧಿಕಾರಿಗಳ ಭಾಷಾ ತಾರತಮ್ಯ ಸಲ್ಲದು : ತಕ್ಷಣವೇ ಸುತ್ತೋಲೆ ವಾಪಸ್ ಪಡೆಯಲು ಕ.ಸಾ.ಪ. ಆಗ್ರಹ
ವಿದೇಶಿಯರು ನಮ್ಮ ಕಲೆ, ಸಂಸ್ಕೃತಿಯ ಬಗ್ಗೆ ಸಾಕಷ್ಟು ಆಸಕ್ತಿ ಹೊಂಡಿದ್ದಾರೆ. ಪರಿಣಾಮ ನಮ್ಮ ಶಾಸ್ತ್ರೀಯ ಕಲೆಗಳಾದ ಸಂಗೀತ, ನೃತ್ಯಗಳ ಕುರಿತು ಅಧ್ಯಯನ ಮಾಡುತ್ತಿದ್ದಾರೆ. ವಿದೇಶದಲ್ಲಿ ನಮ್ಮ ಸಂಗೀತಗಳ ಶ್ರೀಮಂತಿಕೆಯ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಆದರೆ ನಮ್ಮ ನೆಲದಲ್ಲಿ ನಮ್ಮ ಕಲೆ, ಕಲಾವಿದರನ್ನು ಬೆಂಬಲಿಸಬೇಕಾದ ಬಾನುಲಿ ಕೇಂದ್ರವನ್ನೇ ನಿಲ್ಲಿಸಿರುವುದು ಸರಿಯಾದ ನಡೆಯಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.


ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರಕಾರದ ಹಲವಾರು ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕಂಡು ಬರುತ್ತಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರಕಾರದ ಗಮನ ಸೆಳೆಯುವ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಲೇ ಬಂದಿದೆ. ಆದರೆ ತನ್ನ ಗಾಢ ನಿದ್ರೆಯಿಂದ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳುವಂತೆ ಕಾಣುತ್ತಿಲ್ಲ. ಕನ್ನಡಕ್ಕೆ ಸೂಕ್ತ ಗೌರವ ದೊರಕಿಸಿ ಕೊಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಟಿಬದ್ಧವಾಗಿ ನಿಲ್ಲಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.
ಲೇಖಕರ ಬಗ್ಗೆ
ದಿಲೀಪ್ ಡಿ. ಆರ್.
ವಿಜಯ ಕರ್ನಾಟಕದ ಡಿಜಿಟಲ್ ಪತ್ರಕರ್ತನಾಗಿ 2019ರ ಆಗಸ್ಟ್‌ನಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡ ಟಿವಿ ನ್ಯೂಸ್ ವಾಹಿನಿಗಳಲ್ಲಿ 14 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು, ಹಸಿರು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ