ಆ್ಯಪ್ನಗರ

ಬೆಂಗಳೂರು -ಮೈಸೂರು ಹತ್ತು ಪಥ ರಸ್ತೆ ಪ್ರಸ್ತಾಪ

ಬೆಂಗಳೂರು -ಮೈಸೂರು ಹೆದ್ದಾರಿಯನ್ನು ಹತ್ತು ಪಥದ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಒಂದೂವರೆ ವರ್ಷದೊಳಗೆ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವಿಧಾನ ಪರಿಷತ್ತಿಗೆ ಮಂಗಳವಾರ ತಿಳಿಸಿದರು.

Vijaya Karnataka 11 Jul 2018, 7:25 am
ಬೆಂಗಳೂರು: ಬೆಂಗಳೂರು -ಮೈಸೂರು ಹೆದ್ದಾರಿಯನ್ನು ಹತ್ತು ಪಥದ ರಸ್ತೆಯಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಒಂದೂವರೆ ವರ್ಷದೊಳಗೆ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವಿಧಾನ ಪರಿಷತ್ತಿಗೆ ಮಂಗಳವಾರ ತಿಳಿಸಿದರು.
Vijaya Karnataka Web Revanna Bommai


''140 ಕಿ.ಮೀ. ದೂರದ ಈ ಪ್ರಯಾಣ ಇನ್ನು ಒಂದೂವರೆ ವರ್ಷದಲ್ಲಿ ಕೇವಲ ಒಂದೂವರೆ ತಾಸಿಗೆ ತಗ್ಗಲಿದೆ'' ಎಂದು ಪ್ರಶ್ನೋತ್ತರ ವೇಳೆಯಲ್ಲಿ ಸಂದೇಶ್‌ ನಾಗರಾಜ್‌ ಪ್ರಶ್ನೆಗೆ ಉತ್ತರಿಸಿದರು.

''ತಡೆರಹಿತ ವಾಹನ ಸಂಚಾರಕ್ಕಾಗಿ ಆರು ಪಥದ ಹೆದ್ದಾರಿ ಹಾಗೂ ಗ್ರಾಮೀಣ ವಾಹನ ಸಂಚಾರಕ್ಕಾಗಿ ಹೆದ್ದಾರಿಯ ಎರಡೂ ಬದಿ ತಲಾ ಎರಡು ಪಥದ ಸೇವಾ ರಸ್ತೆಗಳನ್ನು ಈ ಯೋಜನೆ ಒಳಗೊಂಡಿದೆ. ಈ ಯೋಜನೆಯನ್ನು ಎರಡು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಒಟ್ಟು 3,501 ಕೋಟಿ ರೂ. ಮೊತ್ತದ ಈ ಯೋಜನೆಗೆ ಈಗಾಗಲೇ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮೋದನೆ ನೀಡಿದೆ. ಕಾಮಗಾರಿಗಳನ್ನು ಮೆ.ದಿಲೀಪ್‌ ಬಿಲ್ಡ್‌ಕಾನ್‌ ಲಿಮಿಟೆಡ್‌ಗೆ ವಹಿಸಲಾಗಿದೆ,'' ಎಂದು ಸಚಿವರು ವಿವರಿಸಿದರು.

ನೈಸ್‌ ವಿವಾದ -ನೈಸ್‌ ಆಗೇ ಜಾರಿಕೊಂಡ ರೇವಣ್ಣ


ಬೆಂಗಳೂರು -ಮೈಸೂರು ಹೆದ್ದಾರಿ ಅಭಿವೃದ್ಧಿ ಯೋಜನೆ ಕುರಿತ ಚರ್ಚೆ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಅವರು ನೈಸ್‌ ಕಂಪನಿಯ ಬಹುವಿವಾದಿತ ಬಿಎಂಐಸಿ ಯೋಜನೆ ವಿಚಾರ ಪ್ರಸ್ತಾಪಿಸಿದರು. ''1997ರಲ್ಲೇ ಒಪ್ಪಂದ ಮಾಡಿಕೊಂಡ ನೈಸ್‌ ಕಂಪನಿ ರೈತರ ಜಮೀನು ಲೂಟಿ ಮಾಡಿದೆ. ಇಷ್ಟು ವರ್ಷ ಕಳೆದರೂ ಯೋಜನೆಯಲ್ಲಿ ಯಾವ ಪ್ರಗತಿಯೂ ಆಗಿಲ್ಲ. ಈ ವಿಚಾರದ ಬಗ್ಗೆಯೂ ಉತ್ತರ ಕೊಡಿ'' ಎಂದು ಪಟ್ಟುಹಿಡಿದರು. ಉಗ್ರಪ್ಪ ಮಾತಿಗೆ ಧ್ವನಿಗೂಡಿಸಿದ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ''ನೈಸ್‌ ವಿಚಾರದಲ್ಲಿ ಗಟ್ಟಿ ತೀರ್ಮಾನ ತೆಗೆದುಕೊಳ್ಳುವ ತಾಕತ್ತು ರೇವಣ್ಣ ಅವರಿಗಿದೆ'' ಎಂದು ಕೋರಸ್‌ ನೀಡಿದರು.

ಆದರೆ, ರೇವಣ್ಣ ಅವರು ''ನಾನು ಹೆದ್ದಾರಿ ಅಭಿವೃದ್ಧಿ ಯೋಜನೆ ಬಗ್ಗೆ ಮಾತನಾಡುತ್ತಿದ್ದು, ನೈಸ್‌ ಯೋಜನೆ ಬಗ್ಗೆ ಪ್ರತ್ಯೇಕ ಪ್ರಶ್ನೆ ಕೇಳಿ'' ಎನ್ನುವ ಮೂಲಕ ಜಾಣತನದಿಂದ ಜಾರಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ