ಆ್ಯಪ್ನಗರ

ಮದುವೆಗೆ ಮುನ್ನ ವಧುವರರ ನೃತ್ಯ ವೈಭವ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ರಾಜೀವ ರೆಡ್ಡಿ ವಿವಾಹಪೂರ್ವ ಕಾರ್ಯಕ್ರಮಗಳು ಅರಮನೆ ಮೈದಾನದಲ್ಲಿ ಹಾಕಿರುವ ಸಿನಿಮಾ ಸೆಟ್‌ ಮಾದರಿಯ ಕಲ್ಯಾಣ ಮಂಟಪದಲ್ಲಿ ವೈಭವಯುತವಾಗಿ ಜರುಗುತ್ತಿವೆ.

ವಿಕ ಸುದ್ದಿಲೋಕ 15 Nov 2016, 4:11 am
ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಿಣಿ ಹಾಗೂ ರಿಯಲ್‌ ಎಸ್ಟೇಟ್‌ ಉದ್ಯಮಿ ರಾಜೀವ ರೆಡ್ಡಿ ವಿವಾಹಪೂರ್ವ ಕಾರ್ಯಕ್ರಮಗಳು ಅರಮನೆ ಮೈದಾನದಲ್ಲಿ ಹಾಕಿರುವ ಸಿನಿಮಾ ಸೆಟ್‌ ಮಾದರಿಯ ಕಲ್ಯಾಣ ಮಂಟಪದಲ್ಲಿ ವೈಭವಯುತವಾಗಿ ಜರುಗುತ್ತಿವೆ. ಸಿನಿಮಾದಲ್ಲಿ ನೋಡುವ ಅದ್ಧೂರಿ ಮದುವೆಯನ್ನೂ ಮೀರಿಸುವಂತೆ ನಟ-ನಟಿಯರಂತೆ ನವ ವಧುವರರು ನೃತ್ಯ ಮಾಡಿದ್ದು, ನೆರೆದಿದ್ದವರ ಆಕರ್ಷಣೆಯಾಗಿತ್ತು.
Vijaya Karnataka Web before the wedding weds dance glory
ಮದುವೆಗೆ ಮುನ್ನ ವಧುವರರ ನೃತ್ಯ ವೈಭವ


ಭಾನುವಾರ ಸಂಜೆ ಅರಿಶಿಣ ಕಾರ್ಯಕ್ರಮ ನಡೆದಿದ್ದು, ಸೋಮವಾರ ಮೆಹಂದಿ ಕಾರ್ಯಕ್ರಮ ಸೇರಿದಂತೆ ಶಾಸ್ತ್ರ ಕಾರ್ಯ, ವಿಧಿ ವಿಧಾನಗಳು ನಡೆದವು. ಅರಿಶಿಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ವರ್ಣರಂಜಿತ ವಿದ್ಯುತ್‌ ದೀಪಾಲಂಕೃತಗೊಂಡಿದ್ದ ಸೆಟ್‌ನಲ್ಲಿ ವಧು-ವರರು ನೃತ್ಯ ಮಾಡಿದರು. ಹಿನ್ನೆಲೆ ಕಲಾವಿದರ ನೃತ್ಯದ ಜತೆಗೆ ಸಿನಿಮಾ ಹಾಡುಗಳಿಗೆ ಜೋಡಿಯಾಗಿ ಹಾಗೂ ಪ್ರತ್ಯೇಕವಾಗಿ ಬ್ರಹ್ಮಿಣಿ ಹಾಗೂ ರಾಜೀವ ರೆಡ್ಡಿ ನೃತ್ಯ ಮಾಡಿದರು. ಸಂಸದ ಶ್ರೀರಾಮುಲು ಕುಟುಂಬ ಸೇರಿದಂತೆ ವಧು-ವರರ ಕುಟುಂಬಗಳ ಬಂಧು-ಬಳಗ, ಸ್ನೇಹಿತರು ಸೇರಿದಂತೆ ನೂರಾರು ಜನ ನೃತ್ಯ ಕಾರ್ಯಕ್ರಮವನ್ನು ವೀಕ್ಷಿಸಿದರು.

ಅನಿವಾಸಿ ಭಾರತೀಯ ಕಲಾವಿದ ರಾಧಾಕೃಷ್ಣ ಹಾಗೂ ಅವರ ತಂಡದಿಂದ ಸೋಮವಾರ ನೃತ್ಯ ನಡೆಯಿತು. ಜತೆಗೆ ಹಳ್ಳಿ ಶೈಲಿಯ ಜೋಕಾಲಿ, ಕುಂಟೆಬಿಲ್ಲೆ, ಚೆಂಡಾಟ ಮುಂತಾದ ಕ್ರೀಡೆಗಳನ್ನು ವಧು-ವರರ ಕುಟುಂಬದ ಸದಸ್ಯರು ಆಡಿದರು. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ಜಾನಪದ ತಂಡಗಳು ನೃತ್ಯ ಪ್ರದರ್ಶನ ನೀಡಿದವು.

ನಟ ಸಾಯಿಕುಮಾರ್‌ ಸಹೋದರ ನಿರ್ಮಿಸಿರುವ ವಿಜಯ ವಿಠ್ಠಲ ಮಂಟಪ, ವೈಕುಂಠ ರೀತಿಯಲ್ಲಿ ಸಪ್ತದ್ವಾರಗಳನ್ನು ಒಳಗೊಂಡ ಕಲ್ಯಾಣ ಮಂಟಪದಲ್ಲಿ ಬುಧವಾರ ಧಾರೆ ಮೂಹೂರ್ತ ನೆರವೇರಲಿದೆ. ಮಂಗಳವಾರವೂ ಮದುವೆಯ ಶಾಸ್ತ್ರೋಸ್ತ್ರ ಕಾರ್ಯಕ್ರಮಗಳು ನಡೆಯಲಿದೆ.

ವಿವಾಹದ ಫೋಟೋಗಳನ್ನು ತೆಗೆದುಕೊಳ್ಳಲು ಕುಟುಂಬ ಸದಸ್ಯರಿಗೂ ಅವಕಾಶ ನೀಡಲಾಗುತ್ತಿಲ್ಲ. ವಿವಾಹಪೂರ್ವ ಕಾರ್ಯಕ್ರಮಗಳಲ್ಲಿ ಕುಟುಂಬ ಹಾಗೂ ಆಪ್ತ, ಸ್ನೇಹಿತರು ಹಾಗೂ ಸಂಬಂಧಿಕರು ಮಾತ್ರ ಭಾಗಿಯಾಗುತ್ತಿದ್ದು, ಮಾಹಿತಿಯನ್ನು ಹೊರಗಿನವರೊಂದಿಗೆ ಹಂಚಿಕೊಳ್ಳದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ