ಆ್ಯಪ್ನಗರ

ಕಮಲ ಬಿಟ್ಟು ತೆನೆ ಹೊತ್ತ ಬೆಳಮಗಿ

ಬೆಂಗಳೂರು: ಬಿಜೆಪಿ ಟಿಕೆಟ್‌ ವಂಚಿತ, ಮಾಜಿ ಸಚಿವ ರೇವೂ ನಾಯಕ್‌ ಬೆಳಮಗಿ ಭಾನುವಾರ ಜೆಡಿಎಸ್‌ ಸೇರ್ಪಡೆಗೊಂಡಿದ್ದು, ಕಲಬುರ್ಗಿ ...

Vijaya Karnataka 23 Apr 2018, 8:43 am
ಬೆಂಗಳೂರು: ಬಿಜೆಪಿ ಟಿಕೆಟ್‌ ವಂಚಿತ, ಮಾಜಿ ಸಚಿವ ರೇವೂ ನಾಯಕ್‌ ಬೆಳಮಗಿ ಭಾನುವಾರ ಜೆಡಿಎಸ್‌ ಸೇರ್ಪಡೆಗೊಂಡಿದ್ದು, ಕಲಬುರ್ಗಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸಮ್ಮುಖದಲ್ಲಿ ಅವರು ಪಕ್ಷ ಸೇರ್ಪಡೆಗೊಂಡಿದ್ದು, ಈ ಹಿಂದೆ ಬಿಎಸ್‌ಪಿಗೆ ಬಿಟ್ಟುಕೊಟ್ಟಿದ್ದ ಈ ಕ್ಷೇತ್ರವನ್ನು ಬೆಳಮಗಿ ಅವರಿಗೆ ನೀಡಲು ನಿರ್ಧರಿಸಲಾಗಿದೆ. ರೇವೂ ನಾಯಕ್‌ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ. ಇದೆಲ್ಲ ದೇವರ ಆಟ. ಈ ಕ್ಷೇತ್ರವನ್ನು ಬಿಟ್ಟುಕೊಡಲು ಬಿಎಸ್‌ಪಿ ಕೂಡಾ ಒಪ್ಪಿದೆ. ಉಭಯ ಪಕ್ಷಗಳ ಮಧ್ಯೆ ಯಾವುದೇ ಗೊಂದಲವಿಲ್ಲಎಂದು ದೇವೇಗೌಡ ಸುದ್ದಿಗಾರರಿಗೆ ತಿಳಿಸಿದರು.
Vijaya Karnataka Web belamagi


ದೇವೇಗೌಡರ ಭೇಟಿ ಮಾಡಿದ ಖೇಣಿ ಸೋದರ

ಮಹತ್ವದ ಬೆಳವಣಿಗೆಯೊಂದರಲ್ಲಿ ಶಾಸಕ ಅಶೋಖ್‌ ಖೇಣಿ ಸೋದರ ಸಂಬಂಧಿ ಸಂಜಯ್‌ ಖೇಣಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬೀದರ್‌ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿರುವ ಖೇಣಿ ವಿರುದ್ಧ ಜೆಡಿಎಸ್‌ಗೆ ಬೆಂಬಲ ನೀಡುವಂತೆ ಈ ಸಂದರ್ಭದಲ್ಲಿ ಮಾತುಕತೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಬೇಳೂರು ಕಾಂಗ್ರೆಸ್‌ ಸೇರ್ಪಡೆ

ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ರಾಜ್ಯಸಭೆ ಸದಸ್ಯ ಬಿ.ಕೆ. ಹರಿಪ್ರಸಾದ್‌ ಸಮ್ಮುಖ ಅವರು ಕಾಂಗ್ರೆಸ್‌ಗೆ ಸೇರಿದರು. ''ಬಿಜೆಪಿಯಲ್ಲಿ ಅನ್ಯಾಯವಾದದ್ದರಿಂದ ಕಾಂಗ್ರೆಸ್‌ ಸೇರಲಾಗಿದೆ. ಆದರೆ, ಟಿಕೆಟ್‌ ಕೇಳಿಲ್ಲ. ಸಾಗರದಲ್ಲಿ ಪಕ್ಷದ ಅಭ್ಯರ್ಥಿಯಾಗಿರುವ ಕಾಗೋಡು ತಿಮ್ಮಪ್ಪ ಗೆಲುವಿಗೆ ಶ್ರಮಿಸಲಾಗುವುದು. ಕಾಂಗ್ರೆಸ್‌ ಸಂಘಟನೆಯಲ್ಲಿ ನಿಷ್ಠೆಯಿಂದ ತೊಡಗಿಸಿಕೊಳ್ಳಲಾಗುವುದು,'' ಎಂದು ಬೇಳೂರು ಹೇಳಿದರು.

ಕಮಲದ ತೆಕ್ಕೆಗೆ ಅಪ್ಪಾಜಿಗೌಡ

ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿ ಗೌಡ ಸೋಮವಾರ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ, ಮಾಜಿ ಡಿಸಿಎಂ ಆರ್‌.ಅಶೋಕ ಸಮ್ಮುಖದಲ್ಲಿ ಅಪ್ಪಾಜಿಗೌಡ ಹಾಗೂ ಮಾಜಿ ಸಚಿವ ಎಸ್‌.ರಮೇಶ್‌ ಪುತ್ರ ಪವನ್‌ ಪಕ್ಷ ಸೇರಲಿದ್ದಾರೆ. ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಮ್ಮುಖದಲ್ಲಿ ಬಳ್ಳಾರಿಯ ಸಾಮಾಜಿಕ ಕಾರ್ಯಕರ್ತ ಸತೀಶ್‌ ರೆಡ್ಡಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಜೆಡಿಎಸ್‌ಗೆ ಜೈ ಎಂದ ಬೆಳ್ಳುಬ್ಬಿ

ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ಕಿರಿಯ ಸ್ವಾಮೀಜಿ ಚಂದ್ರಶೇಖರನಾಥಸ್ವಾಮೀಜಿ ಜೆಡಿಎಸ್‌ನಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದ್ದು, ಬಿಜೆಪಿ ಟಿಕೆಟ್‌ ವಂಚಿತ ಎಸ್‌.ಕೆ.ಬೆಳ್ಳುಬ್ಬಿ ಕೂಡಾ ಜೆಡಿಎಸ್‌ನತ್ತ ಮುಖಮಾಡಿದ್ದಾರೆ.
ಚಂದ್ರಶೇಖರನಾಥಸ್ವಾಮೀಜಿ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಚರ್ಚೆ ನಡೆದಿದ್ದು, ಸೋಮವಾರ ಅಂತಿಮ ನಿರ್ಧಾರ ಪ್ರಕಟವಾಗಲಿದೆ. ಬೆಳ್ಳುಬ್ಬಿ ಪಕ್ಷ ಸೇರ್ಪಡೆ ವಿಚಾರವೂ ಸೋಮವಾರ ಅಂತಿಮಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ