ಆ್ಯಪ್ನಗರ

ಬೆಂಗಳೂರು@ 39.2 ಡಿಗ್ರಿ ಸೆಲ್ಸಿಯಸ್‌!

ಉದ್ಯಾನ ನಗರಿಯ ಬಿರು ಬಿಸಿಲು 86 ವರ್ಷಗಳ ಹಿಂದಿನ ದಾಖಲೆಯನ್ನು ಬ್ರೇಕ್‌ ಮಾಡಿದ್ದು, ಭಾನುವಾರ 39.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ವಿಕ ಸುದ್ದಿಲೋಕ 25 Apr 2016, 4:46 am
-ಬೆಂಗಳೂರಲ್ಲಿ 86 ವರ್ಷಗಳ ಹಿಂದಿನ ಗರಿಷ್ಠ ಉಷ್ಣಾಂಶದ ದಾಖಲೆ ಬ್ರೇಕ್‌-
Vijaya Karnataka Web bengaluru 39 2 degrees celsius
ಬೆಂಗಳೂರು@ 39.2 ಡಿಗ್ರಿ ಸೆಲ್ಸಿಯಸ್‌!


ಬೆಂಗಳೂರು: ಉದ್ಯಾನ ನಗರಿಯ ಬಿರು ಬಿಸಿಲು 86 ವರ್ಷಗಳ ಹಿಂದಿನ ದಾಖಲೆಯನ್ನು ಬ್ರೇಕ್‌ ಮಾಡಿದ್ದು, ಭಾನುವಾರ 39.2 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ಬೆಂಗಳೂರಿನಲ್ಲಿ ತಾಪಮಾನ ಅಳೆಯುವ ವ್ಯವಸ್ಥೆ ಆರಂಭವಾದ ನಂತರ, 1931ರ ಮೇ 22ರಂದು ಅತಿ ಹೆಚ್ಚು ಅಂದರೆ 38.9 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ನಂತರದ ವರ್ಷಗಳಲ್ಲಿ ತಾಪಮಾನದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡರೂ 37.5 ಡಿಗ್ರಿ ದಾಟಿರಲಿಲ್ಲ. ಆದರೆ, ಪ್ರಸಕ್ತ ವರ್ಷದಲ್ಲಿ ದೇಶಾದ್ಯಂತ ಮುಂಗಾರು ಮಳೆ ಕೊರತೆ ಬೆಂಗಳೂರಿನ ಮೇಲೂ ತೀವ್ರ ಪರಿಣಾಮ ಬೀರಿದ್ದು, ಸಾರ್ವಕಾಲಿಕ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಬರುವ ದಿನಗಳಲ್ಲಿ ನಗರದ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್‌ ದಾಟುವ ಸಾಧ್ಯತೆ ಇದೆ. ಕಲಬುರಗಿ, ರಾಯಚೂರು, ಬೀದರ್‌ನಂತೆ ‘ಮಹಾತಾಪ’ದ ಬಿಸಿ ಬೆಂಗಳೂರಿನಲ್ಲೇ ತಟ್ಟಲಿದೆ.

ನಗರದಲ್ಲಿ ಭಾನುವಾರ 39.2 ಡಿಗ್ರಿ ಸೆಲ್ಸಿಯಸ್‌, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 38.3 ಹಾಗೂ ಎಚ್‌ಎಎಲ್‌ ಏರ್‌ಪೋರ್ಟ್‌ನಲ್ಲಿ 37.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ನಾಗರಿಕರು ಭಾನುವಾರ ಹೊರಗೆ ಕಾಲಿಡದಂತಹ ಪರಿಸ್ಥಿತಿ ಇತ್ತು. ಕೆಂಡದಂತಹ ವಾತಾವರಣವಿತ್ತು. ಉರಿ ಬಿಸಿಲು ತಡೆಯಲಾಗದೆ ಬಹಳಷ್ಟು ಜನ ಮನೆಯಿಂದ ಹೊರಗೆ ಕಾಲಿಡಲು ಹಿಂದೇಟು ಹಾಕಿದರು.

ಉದ್ಯಾನ ನಗರಿ, ನಿವೃತ್ತರ ಸ್ವರ್ಗ, ತಂಪು ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಕೆಲ ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದ ಬೆಂಗಳೂರಿನ ವಾತಾವರಣ ಈಗ ಸಂಪೂರ್ಣ ಬದಲಾದಂತಾಗಿದೆ. ಮೆಟ್ರೊ, ರಸ್ತೆ ವಿಸ್ತರಣೆ ಸೇರಿದಂತೆ ನಾನಾ ಅಭಿವೃದ್ಧಿ ಕೆಲಸಗಳಿಗಾಗಿ ಸಾವಿರಾರು ಮರಗಳನ್ನು ಕತ್ತರಿಸಲಾಗಿದೆ. ಕೆರೆಗಳ ಒತ್ತುವರಿಯಿಂದ ನೀರಿನ ಮೂಲಗಳು ಬತ್ತಿ ಹೋಗಿವೆ. ಬಹುಮಹಡಿ ಕಟ್ಟಡಗಳು ಸಾಲುಸಾಲಾಗಿ ನಿರ್ಮಾಣವಾಗುತ್ತಿವೆ. ಹೀಗೆ ಹತ್ತು ಹಲವು ಕಾರಣಗಳಿಂದ ವಾತಾವರಣದಲ್ಲಿ ಏರುಪೇರಾಗಿ, ಬೆಂಗಳೂರಿನ ಉಷ್ಣಾಂಶದಲ್ಲಿ ಭಾರಿ ವ್ಯತ್ಯಾಸ ಕಂಡು ಬರುತ್ತಿದೆ.

ಪರಿಸರ ತಜ್ಞರು ಈ ಹಿಂದೆಯೇ ಎಚ್ಚರಿಕೆ ನೀಡಿರುವಂತೆ ಜಾಗತಿಕ ತಾಪಮಾನ ಹೆಚ್ಚಳವೂ ಉದ್ಯಾನ ನಗರಿ ಬೆಂಗಳೂರಿನ ತಾಪಮಾನದಲ್ಲಿ ಗಣನೀಯವಾಗಿ ಏರಿಕೆಯಾಗಲು ಕಾರಣವಾಗಿದೆ.

ಸರಾಸರಿ 34ರಿಂದ 36 ಡಿ.ಸೆ. ಇರುತ್ತಿತ್ತು

ಬೆಂಗಳೂರಿನ ಉಷ್ಣಾಂಶ ಏಪ್ರಿಲ್‌ನಲ್ಲಿ ಸಾಮಾನ್ಯವಾಗಿ 34ರಿಂದ 36 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ಮೇನಲ್ಲಿ ಅದು 37ರವರೆಗೆ ತಲುಪಬಹುದು. ಈ ಮಾದರಿಯ ವಾತಾವರಣ ಕಳೆದ 86 ವರ್ಷಗಳಿಂದಲೂ ಇತ್ತು. ಆದರೆ, ಈ ಬಾರಿ ಎಲ್ಲರ ಊಹೆಗೂ ಮೀರಿ ಏರಿಕೆಯಾಗಿದೆ ಎಂದು ಹವಾಮಾನ ಇಲಾಖೆ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದರು.

ಈ ಹಿಂದಿನ ದಾಖಲೆ ಬಿಸಿಲು

1931ರ ಮೇ 22

38.9 ಡಿಗ್ರಿ ಸೆಲ್ಸಿಯಸ್‌

ಹೊಸ ದಾಖಲೆ

2016 ಏ.24

39.2 ಡಿಗ್ರಿ ಸೆಲ್ಸಿಯಸ್‌

ಯಾವಾಗ?

39.2 ಡಿಗ್ರಿ ಸೆಲ್ಸಿಯಸ್‌

ಕೇಂದ್ರ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರ ನಡುವೆ ದಾಖಲು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ