ಆ್ಯಪ್ನಗರ

ಬೆಂಗಳೂರು ವಿವಿ ಪ್ರತಿಮೆ ರಾಜಕಾರಣ: ಸರಸ್ವತಿ ಪ್ರತಿಮೆ ಪಕ್ಕ 5 ಪ್ರತಿಮೆ ಸ್ಥಾಪನೆಗೆ ಬೇಡಿಕೆ

* ಕನಕದಾಸ, ಬಸವಣ್ಣ, ಸಂತ ಶಿಶುನಾಳ ಷರೀಫ, ಕೆಂಪೇಗೌಡ, ಗಾಂಧಿ ಪ್ರತಿಮೆಗಳ ಸ್ಥಾಪನೆಗೆ ಬೇಡಿಕೆ * 'ಅಹಿಂಸಾ' ನೌಕರರ ವೇದಿಕೆಯಿಂದ ಸಹಿ ಸಂಗ್ರಹ ಅಭಿಯಾನ * ಸಿಎಂ, ಉನ್ನತ ಶಿಕ್ಷಣ ಸಚಿವರು, ವಿಸಿಗೆ ಮನವಿ ಸಲ್ಲಿಸಲು ನಿರ್ಧಾರ * ಬುದ್ಧನ ಪ್ರತಿಮೆ ಸ್ಥಾಪಿಸಿದಲ್ಲೇ ಐದು ಪ್ರತಿಮೆ ಸ್ಥಾಪಿಸಲು ಪಟ್ಟು

Vijaya Karnataka 15 May 2019, 7:56 am
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಮಾದರಿಯಲ್ಲೇ ರಾಜ್ಯದ ಇತರ ವಿವಿಗಳಲ್ಲಿ ತಲೆದೋರುವ ಪ್ರತಿಮೆಗಳ ಪ್ರತಿಷ್ಠಾಪನೆ ವಿವಾದಕ್ಕೆ ತೆರೆ ಎಳೆಯಲು ನಿರ್ಧರಿಸಿರುವ ರಾಜ್ಯ ಸರಕಾರ, ಈ ಸಂಬಂಧ ವರದಿ ಸಲ್ಲಿಸಲು ಹಿರಿಯ ತಜ್ಞರ ಸಮಿತಿ ರಚಿಸಲು ನಿರ್ಧರಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿನ ಆಡಳಿತ ಕಚೇರಿ ಆವರಣದಲ್ಲಿ ಭಗ್ನಗೊಂಡಿದ್ದ ಸರಸ್ವತಿ ವಿಗ್ರಹ ಸ್ಥಳದಲ್ಲಿ ಬದಲಿ ಹೊಸ ವಿಗ್ರಹ ಪ್ರತಿಷ್ಠಾಪಿಸುವ ಮುನ್ನವೇ ಕೆಲ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿ ಬುದ್ಧನ ವಿಗ್ರಹ ಪ್ರತಿಷ್ಠಾಪಿಸಿದ್ದರು. ಇದರಿಂದ ವಿವಿಯಲ್ಲಿ ಸಂಘರ್ಷದ ವಾತಾವರಣ ಉಂಟಾಗಿತ್ತು. ಕೊನೆಗೆ ಸರಸ್ವತಿ ಹಾಗೂ ಬುದ್ಧನ ವಿಗ್ರಹಗಳನ್ನು ಅಕ್ಕ-ಪಕ್ಕದಲ್ಲೇ ಪ್ರತಿಷ್ಠಾಪಿಸಲು ವಿವಿ ಸಿಂಡಿಕೇಟ್‌ ಉಪ ಸಮಿತಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.
Vijaya Karnataka Web ವಿವಾದಕ್ಕೆ ಕಾರಣವಾಗಿರುವ ಬುದ್ಧನ ಪ್ರತಿಮೆ


ಈ ವಿವಾದಕ್ಕೆ ವಿವಿಯು ತೆರೆ ಎಳೆದ ಬೆನ್ನಲ್ಲೇ ಬಸವಣ್ಣ, ಕನಕದಾಸ, ಸಂತ ಶಿಶುನಾಳ ಷರೀಫ, ನಾಡಪ್ರಭು ಕೆಂಪೇಗೌಡ ಹಾಗೂ ಮಹಾತ್ಮ ಗಾಂಧಿ ಪ್ರತಿಮೆಗಳನ್ನು ಸ್ಥಾಪಿಸುವಂತೆ ಸರಕಾರವನ್ನು ಕೋರಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ (ಅಹಿಂಸಾ) ನೌಕರರ ವೇದಿಕೆ ಸಹಿ ಸಂಗ್ರಹ ಅಭಿಯಾನದಲ್ಲಿ ತೊಡಗಿದೆ.

ಈ ಹಿನ್ನೆಲೆಯಲ್ಲಿ ‘ವಿಜಯ ಕರ್ನಾಟಕ’ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಅವರನ್ನು ಸಂಪರ್ಕಿಸಿದಾಗ, ‘‘ಶೀಘ್ರದಲ್ಲಿಯೇ ವಿವಿಗಳಲ್ಲಿ ಕೆಲಸ ಮಾಡಿದ ನುರಿತ ಹಿರಿಯ ಶಿಕ್ಷಣ ತಜ್ಞರ ಸಮಿತಿ ರಚಿಸಲಾಗುವುದು. ಸಮಿತಿ ನೀಡುವ ವರದಿ ಆಧರಿಸಿ ಇಂತಹ ವಿವಾದಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಲಿದೆ’’ ಎಂದು ಹೇಳಿದರು.

‘‘ಒಂದು ವಿವಿಯ ಸ್ವರೂಪ ಹೇಗಿರಬೇಕು? ಅಲ್ಲಿನ ಕುಲಪತಿಗಳು, ಕುಲಸಚಿವರು ಹಾಗೂ ಪ್ರಾಧ್ಯಾಪಕರು ಹೇಗೆ ಕರ್ತವ್ಯ ನಿರ್ವಹಿಸಬೇಕು. ವಿವಿಗಳಲ್ಲಿ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳ ಭಾವನೆಗಳು ಹೇಗಿರಬೇಕೆಂಬ ಪೂರಕ ಅಂಶಗಳನ್ನು ಒಳಗೊಂಡ ವರದಿ ಸಲ್ಲಿಸುವಂತೆ ತಜ್ಞರ ಸಮಿತಿಯನ್ನು ಕೋರಲಾಗುವುದು. ಅಂತಿಮವಾಗಿ ಸಮಿತಿ ನೀಡುವ ವರದಿ ಆಧರಿಸಿ ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ’’ ಎಂದು ಸಚಿವರು ತಿಳಿಸಿದರು. ‘‘ವಿಶ್ವವಿದ್ಯಾಲಯಗಳಲ್ಲಿ ಪ್ರತಿಮೆ ಮತ್ತಿತರ ವಿಚಾರಗಳಲ್ಲಿ ಜಾತಿ ಸಂಘರ್ಷಕ್ಕೆ ಸರಕಾರ ಅವಕಾಶ ನೀಡುವುದಿಲ್ಲ,’’ ಎಂದು ಅವರು ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ