ಆ್ಯಪ್ನಗರ

ಸಿಎ ಪಾಸಾಗೋದು ಕಷ್ಟಕರವಲ್ಲ: ದೇಶಕ್ಕೆ ಎರಡನೇ ರ‍್ಯಾಂಕ್ ಪಡೆದ ಬೆಂಗಳೂರಿನ ಯುವಕ

ಇಗ್ನೊ ವಿವಿಯಲ್ಲಿ ಪದವಿ ಓದುತ್ತಲೇ ಸಿಎ ಪರೀಕ್ಷೆಯನ್ನೂ ಬರೆದು ಮೊದಲ ಅವಧಿಯಲ್ಲೇ ದೇಶಕ್ಕೆ ಎರಡನೇ ರ‍್ಯಾಂಕ್ ಪಡೆದು ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿದ್ದಾರೆ ಬೆಂಗಳೂರಿನ ವಿದ್ಯಾರ್ಥಿ ಅಭಿಷೇಕ್‌ ನಾಗರಾಜ್‌.

Vijaya Karnataka 24 Jul 2018, 8:13 am
ಬೆಂಗಳೂರು: ಇಗ್ನೊ ವಿವಿಯಲ್ಲಿ ಪದವಿ ಓದುತ್ತಲೇ ಸಿಎ ಪರೀಕ್ಷೆಯನ್ನೂ ಬರೆದು ಮೊದಲ ಅವಧಿಯಲ್ಲೇ ದೇಶಕ್ಕೆ ಎರಡನೇ ರ‍್ಯಾಂಕ್ ಪಡೆದು ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆ ಮಾಡಿದ್ದಾರೆ ಬೆಂಗಳೂರಿನ ವಿದ್ಯಾರ್ಥಿ ಅಭಿಷೇಕ್‌ ನಾಗರಾಜ್‌.
Vijaya Karnataka Web Abhishek nagaraj ca


ಹೊಸ ಪಠ್ಯಕ್ರಮ ಬಂದ ನಂತರ ಸಿಎನಲ್ಲಿ ತೇರ್ಗಡೆಯಾದ ಕರ್ನಾಟಕದ ಮೊದಲ ವ್ಯಕ್ತಿ ಇವರಾಗಿದ್ದಾರೆ. 21 ವರ್ಷದ ಅಭಿಷೇಕ್‌, ಇಗ್ನೊ ವಿವಿಯಲ್ಲಿ ಬಿಕಾಂ ಪದವಿ ಮಾಡಿದ್ದಾರೆ. ಇವರು ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಕ್ರಮವಾಗಿ ಶೇ.95 ಮತ್ತು ಶೇ.96ರಷ್ಟು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿ. ಇವರಿಗೆ ನಂಬರ್ಸ್‌ ಮತ್ತು ಅನಾಲಿಸಿಸ್‌ ಎಂದರೆ ತುಂಬಾ ಇಷ್ಟವಂತೆ. ಹೀಗಾಗಿ ರೆಗ್ಯೂಲರ್‌ ಪದವಿಯನ್ನು ತ್ಯಜಿಸಿ, ಸಿಎ ಅಧ್ಯಯನದಲ್ಲಿ ತೊಡಗಿಸಿಕೊಂಡರು. ಪದವಿಯೂ ಇರಲಿ ಎಂಬ ಕಾರಣಕ್ಕಾಗಿ ಇಂದಿರಾಗಾಂಧಿ ನ್ಯಾಷನಲ್‌ ಓಪನ್‌ ಯೂನಿವರ್ಸಿಟಿಯಲ್ಲಿ 2016ರಲ್ಲಿ ಬಿಕಾಂ ಪದವಿಗೂ ಸೇರಿದರು.

''ನನ್ನ ಸೋದರ ಸಿಎ ಆಗಿದ್ದಾರೆ. ಅವರಿಂದ ಪ್ರೇರಣೆಗೊಂಡು ನನಗೂ ಸಿಎ ಮಾಡಬೇಕೆಂಬ ಆಸೆ ಹುಟ್ಟಿತು. ಅದರಂತೆ ಶ್ರದ್ಧೆಯಿಂದ ಓದಿದೆ. ಜಯನಗರದ ಯಶಸ್‌ ಅಕಾಡೆಮಿ, ಜೆಕೆ ಶಾ ಹಾಗೂ ರಾಜಾಜಿನಗರದ ಸಂಪತ್‌ ಅಕಾಡೆಮಿಗಳಲ್ಲಿ ವಿಷಯವಾರು ತರಬೇತಿಗೆ ಸೇರಿಕೊಂಡೆ. ಉತ್ತಮ ಕೋಚಿಂಗ್‌ ಸಿಕ್ಕಿತು. ಪಾಸಾಗುತ್ತೇನೆ ಎಂದುಕೊಂಡಿದ್ದೆ. ಆದರೆ ದೇಶಕ್ಕೆ ಎರಡನೇ ರ‍್ಯಾಂಕ್ ಬರುತ್ತೇನೆ ಎಂದುಕೊಂಡಿರಲಿಲ್ಲ. 800 ಅಂಕಗಳಿಗೆ 539 ಅಂಕಗಳು ಬಂದಿವೆ. ಇದು ನನಗೆ ತುಂಬಾ ಸಂತೋಷದ ಸಂಗತಿಯಾಗಿದೆ. ನನ್ನ ತಂದೆ-ತಾಯಿ ಕೂಡ ಖುಷಿಪಟ್ಟಿದ್ದಾರೆ,'' ಎಂದು ಅಭಿಷೇಕ್‌ ನುಡಿದರು.

ತಂದೆ ತುಮಕೂರು ಮೂಲದವರಾಗಿದ್ದು, ಇಂಡಸ್ಟ್ರಿಯಲ್‌ ಆಟೊಮೇಷನ್‌ ಬ್ಯುಸಿನೆಸ್‌ ನಡೆಸುತ್ತಿದ್ದಾರೆ. ಬಳ್ಳಾರಿ ಮೂಲದ ತಾಯಿ ಗೃಹಿಣಿ. ಅಭಿಷೇಕ್‌ ಹುಟ್ಟಿದ್ದು, ಓದಿದ್ದು ಬೆಂಗಳೂರಿನಲ್ಲಿ. ಪ್ರಸ್ತುತ ನೆಲೆಸಿರುವುದು ಕೆಂಗೇರಿ ಉಪನಗರದಲ್ಲಿ.

''ಸಿಎ ಮಾಡಲು 2014ರಲ್ಲಿ ಸಿಪಿಟಿ ಪ್ರವೇಶ ಪರೀಕ್ಷೆ ಬರೆದು ತೇರ್ಗಡೆಯಾದೆ. 2015ರಲ್ಲಿ ಐಪಿಸಿಸಿ ಪರೀಕ್ಷೆ ಬರೆದು 42ನೇ ರ‍್ಯಾಂಕ್ ಪಡೆದೆ. ಅದಾದ ನಂತರ 2018ರಲ್ಲಿ ಸಿಎ ಅಂತಿಮ ಪರೀಕ್ಷೆಯಲ್ಲಿ ದೇಶಕ್ಕೆ ದ್ವಿತೀಯ ರ‍್ಯಾಂಕ್ ಪಡೆದೆ,'' ಎಂದು ಅಭಿಷೇಕ್‌ ವಿವರಿಸಿದರು.

ಸಿಎ ಪಾಸಾಗೋದು ಕಷ್ಟವಲ್ಲ

ಸಿಎ ಓದುವುದು, ಪಾಸಾಗುವುದು ಕಷ್ಟ ಎನ್ನುತ್ತಾರೆ ಹಲವರು. ಆದರೆ ಇಷ್ಟಪಟ್ಟು, ಅರ್ಥಮಾಡಿಕೊಂಡು ಓದಿದರೆ ಸಿಎ ಆಗುವುದು ಬಲು ಸುಲಭ. ಹೀಗೆ ನುಡಿದವರು ಅಭಿಷೇಕ್‌ ನಾಗರಾಜ್‌.

ಅಭಿಷೇಕ್‌ ಹೇಳುವಂತೆ ''ಸಿಎನಲ್ಲಿ ಎಂಟು ವಿಷಯಗಳಿದ್ದು, ನಿತ್ಯ 8-12 ಗಂಟೆ ಕಾಲ ಓದ್ತಿದ್ದೆ. ಆದರೆ ನನಗೆ ಗಂಟೆ ಲೆಕ್ಕದಲ್ಲಿ ಓದುವುದಕ್ಕಿಂತ ಅಂದುಕೊಂಡಿದ್ದನ್ನು ಓದಿ ಮುಗಿಸುವವರೆಗೆ ಬೇರೆ ಕೆಲಸದತ್ತ ಮನಸ್ಸು ಹೋಗುತ್ತಿರಲಿಲ್ಲ. ಹಾಗೆಯೇ ನಾನು ಕಾನ್ಸೆಪ್ಟ್‌ಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೆ. ನಂತರ ಅವುಗಳನ್ನು ನಮ್ಮ ಸುತ್ತಮುತ್ತಲಿನ ವ್ಯವಹಾರಗಳೊಂದಿಗೆ ಪ್ರಾಯೋಗಿಕವಾಗಿ ತಾಳೆ ಹಾಕಿ ಅರಿಯುತ್ತಿದ್ದೆ. ಹೀಗಾಗಿ ಮೊದಲ ಪ್ರಯತ್ನದಲ್ಲೇ ಎರಡನೇ ರ‍್ಯಾಂಕ್ ಪಡೆಯಲು ಸಾಧ್ಯವಾಯಿತು''.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ