ಆ್ಯಪ್ನಗರ

ಸಂಪುಟ ಸಂಕಷ್ಟ: ಪ್ರತ್ಯೇಕ ಸಭೆ ನಡೆಸಲಿದ್ದಾರೆ ಬಿಎಸ್‌ವೈ ನಿಷ್ಠ ಶಾಸಕರು

ಸಂಪುಟ ವಿಸ್ತರಣೆಯ ಹಿನ್ನೆಲೆಯಲ್ಲಿ ಕೇಸರಿ ಪಾಳಯದಲ್ಲಿ ಅತೃಪ್ತಿ ತೀವ್ರಗೊಂಡಿದೆ. ಸಚಿವ ಸ್ಥಾನ ಕೈತಪ್ಪಿದ ಕಾರಣಕ್ಕಾಗಿ ಒಂದಿಷ್ಟು ಶಾಸಕರು ಅಸಮಾಧಾನಿತರಾಗಿದ್ದಾರೆ. ಅತೃಪ್ತ ಶಾಸಕರು ಮಂಗಳವಾರ ಸಭೆ ನಡೆಸಲಿದ್ದಾರೆ.

Vijaya Karnataka Web 19 Jan 2021, 9:41 am
ಬೆಂಗಳೂರು: ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಮಲ ಪಾಳಯದಲ್ಲಿ ಸ್ಫೋಟಗೊಂಡ ಅತೃಪ್ತಿ ಇನ್ನೂ ಹೊಗೆಯಾಡುತ್ತಲೇ ಇದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರೆ, ಸೋತವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಮತ್ತೆ ಕೆಲವರು ಅತೃಪ್ತಿ ಹೊರಹಾಕಿದ್ದಾರೆ. ಸಿ.ಡಿ, ಭ್ರಷ್ಟಾಚಾರ ಆರೋಪ, ನಾಯಕತ್ವ ವಿರುದ್ಧ ಬಂಡಾಯದ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ನಿಷ್ಠರು ಮಂಗಳವಾರ ಸಭೆ ಸೇರಲಿದ್ದಾರೆ.
Vijaya Karnataka Web mp renukacahrya


ಬಿಎಸ್‌ವೈ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಕೆಲವು ಅತೃಪ್ತ ಶಾಸಕರು ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ರಾಜೂಗೌಡ ಸೇರಿದಂತೆ ಬಿಎಸ್‌ವೈ ಬಣದ ಶಾಸಕರು ಒಂದುಗೂಡುವ ಸಾಧ್ಯತೆ ಇದೆ.

ಸಭೆಯ ಬಗ್ಗೆ ಶಾಸಕ ರೇಣುಕಾಚಾರ್ಯ ಕೂಡಾ ಸ್ಪಷ್ಟಡಿಸಿದ್ದು ಇದು ಸಿಎಂ ವಿರುದ್ಧದ ಬಂಡಾಯ ಅಲ್ಲ ಎಂದಿದ್ದಾರೆ.ಬದಲಾಗಿ ಸಚಿವ ಸ್ಥಾನ ಸಿಗದ ನೋವನ್ನು ಕೆಲವರು ತೋಡಿಕೊಂಡಿದ್ದು ನಾವೆಲ್ಲಾ ಜೊತೆಗೂಡಿ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಂಪುಟ ಸಂಕಷ್ಟ: ಸಿ.ಪಿ ಯೋಗೇಶ್ವರ್ ವಿರುದ್ಧ ಅರುಣ್ ಸಿಂಗ್‌ಗೆ ಎಂ.ಪಿ ರೇಣುಕಾಚಾರ್ಯ ದೂರು!

ಈಗಾಗಲೇ ಎಂಪಿ ರೇಣುಕಾಚಾರ್ಯ ದೆಹಲಿಗೆ ತೆರಳಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ. ವಿಧಾನಪರಿಷತ್‌ ಸದಸ್ಯ ಸಿ.ಪಿ ಯೋಗೇಶ್ವರ್‌ಗೆ ಸಚಿವ ಸ್ಥಾನ ನೀಡಿದಕ್ಕಾಗಿ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ.

ಎಂಪಿ ರೇಣುಕಾಚಾರ್ಯ ಅವರಂತೆ ಒಂದಿಷ್ಟು ಶಾಸಕರು ಸಚಿವ ಸ್ಥಾನ ಕೈತಪ್ಪಿದ್ದು ಹಾಗೂ ಇನ್ನಿತರ ಕಾರಣಗಳಿಂದ ಅತೃಪ್ತರಾಗಿದ್ದಾರೆ. ಇವರೆಲ್ಲಾ ಜೊತೆಗೆಗೂಡಿ ಚರ್ಚೆ ನಡೆಸಲಿದ್ದಾರೆ. ಆದರೆ ಯಾರೆಲ್ಲಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂಬುವುದು ಸದ್ಯದ ಕುತೂಹಲವಾಗಿದೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ನಡೆಯುತ್ತಿರುವ ಪ್ರತ್ಯೇಕ ಸಭೆಗಳು ಪಕ್ಷದಲ್ಲಿರುವ ಭಿನ್ನಮತವನ್ನು ಬಹಿರಂಗಗೊಳಿಸಿದೆ. ಈ ಅಸಮಾಧಾನದ ಹೊಗೆ ಮುಂದಿನ ದಿನಗಳಲ್ಲಿ ದಟ್ಟವಾಗಿ ಆವರಿಸಿಕೊಳ್ಳುವ ಎಲ್ಲ ಸಾಧ್ಯತೆಗಳು ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ