ಆ್ಯಪ್ನಗರ

ಸರಕಾರ ರಚನೆಗಾಗಿ ಅತೃಪ್ತರಿಗೆ ಬಾಗಿಲು ತೆರೆದ ಕೇಸರಿಪಡೆ

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆಯೆಂದು ಮಾಜಿ ಪ್ರಧಾನಿ ಎಚ್‌ಡಿ...

Vijaya Karnataka 23 Jun 2019, 5:00 am
ಬೆಂಗಳೂರು: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಇದೆಯೆಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ನೀಡಿರುವ ಸುಳಿವಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಬಿಜೆಪಿ, ಸರಕಾರ ರಚನೆ ಸಾಧ್ಯತೆಯನ್ನು ಮುಕ್ತವಾಗಿಡುವ ಪ್ರಯತ್ನ ನಡೆಸಿದೆ.
Vijaya Karnataka Web muralidhar rao


ದೋಸ್ತಿ ಸರಕಾರವನ್ನು ಪತನಗೊಳಿಸುವುದೇ ಪಕ್ಷದ ಪ್ರಧಾನ ಅಜೆಂಡಾ ಎಂದು ಘೋಷಿಸುವ ಮೂಲಕ ಅತೃಪ್ತರಿಗೆ ಪಕ್ಷದ ಬಾಗಿಲು ತೆರೆದಿದೆ ಎಂಬ ಸಂದೇಶ ರವಾನಿಸಲು ಕೇಸರಿ ನಾಯಕರು ಪ್ರಯತ್ನಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಸದಸ್ಯತ್ವ ಅಭಿಯಾನ ಉದ್ಘಾಟನೆ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌, ''ರಾಜ್ಯದ ಜನತೆ ಮೈತ್ರಿ ಸರಕಾರವನ್ನು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಲೋಕಸಭಾ ಚುನಾವಣೆ ಫಲಿತಾಂಶವೇ ಸಾಕ್ಷಿ. ಮಧ್ಯಂತರ ಚುನಾವಣೆ ನಡೆಯಬಹುದೆಂಬ ಸುದ್ದಿಯನ್ನು ಹರಿಬಿಟ್ಟು ಶಾಸಕರನ್ನು ಬೆದರಿಸುವ 'ಬ್ಲ್ಯಾಕ್‌ಮೇಲ್‌ ' ರಾಜಕಾರಣ ನಡೆಸುತ್ತಿದ್ದಾರೆ. ಇದಕ್ಕೆ ಬಿಜೆಪಿ ಅವಕಾಶ ನೀಡುವುದಿಲ,'' ಎಂದು ಹೇಳಿದರು.

''ಎಷ್ಟು ಸಾಧ್ಯವೋ, ಅಷ್ಟು ಬೇಗ ಈ ಸರಕಾರವನ್ನು ಅಧಿಕಾರದಿಂದ ಮುಕ್ತಗೊಳಿಸುವುದೇ ಬಿಜೆಪಿಯ ಪ್ರಧಾನ ಅಜೆಂಡಾ. 105 ಶಾಸಕರನ್ನು ಹೊಂದಿರುವ ಬಿಜೆಪಿಗೆ ಅಧಿಕಾರ ನಡೆಸುವ ಉತ್ತರದಾಯಿತ್ವವನ್ನು ಜನತೆ ನೀಡಿದ್ದಾರೆ. ಮೈತ್ರಿ ಸರಕಾರವನ್ನು ಪತನಗೊಳಿಸುವುದು ನಮ್ಮ ಕೆಲಸವಷ್ಟೇ ಅಲ್ಲ, ಆದ್ಯ ಕರ್ತವ್ಯವೂ ಹೌದು. ದಿಲ್ಲಿಯಲ್ಲಿರುವಂಥ ಸ್ಥಿರ ಸರಕಾರ ಬೆಂಗಳೂರಿಗೂ ಬೇಕೆಂಬ ಜನತೆಯ ಆಶೋತ್ತರಕ್ಕೆ ಸ್ಪಂದಿಸುತ್ತೇವೆ,'' ಎಂದು ಹೇಳಿದರು.

ಬಹುಕಾಲ ಉಳಿಯದು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ''ಕಾಂಗ್ರೆಸ್‌-ಜೆಡಿಎಸ್‌ನ ಕಚ್ಚಾಟ ನೋಡಿದರೆ ಈ ಸರಕಾರ ಬಹಳ ಕಾಲ ಉಳಿಯುವುದಿಲ್ಲ ಎಂಬುದು ಸ್ಪಷ್ಟ. ಕೇವಲ 13 ತಿಂಗಳ ಅವಧಿಯಲ್ಲಿ ಮತ್ತೊಂದು ಚುನಾವಣೆ ಎದುರಿಸುವುದಕ್ಕೆ ಜನರು ಸಿದ್ಧ್ದರಿಲ್ಲ. ದೇವೇಗೌಡರು ಹೇಳಿದಂತೆ ಮಧ್ಯಂತರ ಚುನಾವಣೆ ನಡೆಯಲು ಬಿಡುವುದಿಲ್ಲ. ನಿಮ್ಮ ಕೈಯಲ್ಲಿ ಅಧಿಕಾರ ನಡೆಸುವುದಕ್ಕೆ ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಲ್ಲಿ 20ಕ್ಕೂ ಹೆಚ್ಚು ಅತೃಪ್ತ ಶಾಸಕರಿದ್ದಾರೆ. ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು,'' ಎಂದು ಎಚ್ಚರಿಕೆಯನ್ನು ನೀಡಿದರು.

''ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಅಪ್ಪನ ಮಾತು ಕೇಳಿಕೊಂಡು ಗ್ರಾಮ ವಾಸ್ತವ್ಯದ ನಾಟಕ ಆರಂಭಿಸಿದ್ದಾರೆ. ಆದರೆ ಮಳೆ ಬಂತು ಎಂಬ ನೆಪ ನೀಡಿ ಒಂದೇ ದಿನಕ್ಕೆ ಬೆಂಗಳೂರಿಗೆ ಓಡಿ ಬಂದಿದ್ದಾರೆ. ಅವರು ಈ ಹಿಂದೆ ನಡೆಸಿದ ಗ್ರಾಮ ವಾಸ್ತವ್ಯದಲ್ಲಿ ಕೊಟ್ಟ ಭರವಸೆ ಏನಾಗಿದೆ ಎಂಬ ಬಗ್ಗೆ ನಮ್ಮ ಕಾರ್ಯಕರ್ತರು 42 ಹಳ್ಳಿಗೆ ತೆರಳಿ ವಾಸ್ತವ ಸ್ಥಿತಿಗತಿ ಪತ್ತೆ ಹಚ್ಚಿದ್ದಾರೆ. ಜೂ. 24ಕ್ಕೆ ಈ ವರದಿ ಬಿಡುಗಡೆ ಮಾಡಲಿದ್ದೇವೆ,''ಎಂದು ಹೇಳಿದರು.

ಸಂಸದರಾದ ಶೋಭಾ ಕರಂದ್ಲಾಜೆ, ಜಿ.ಎಂ.ಸಿದ್ದೇಶ್ವರ, ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ