ಆ್ಯಪ್ನಗರ

ಡಿಸೆಂಬರ್ ಮೊದಲ ವಾರ ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಭೇಟಿ, ಕಮಲ ಪಾಳಯದಲ್ಲಿ ಹೆಚ್ಚಿದ ಖುಷಿ; ಯಾಕೆ?

ರಾಜ್ಯ ಬಿಜೆಪಿ ನೂತನ ಉಸ್ತುವಾರಿ ಅರುಣ್‌ ಸಿಂಗ್‌ ಡಿಸೆಂಬರ್‌ ಮೊದಲ ವಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಸದ್ಯ ಸಂಪುಟ ವಿಸ್ತರಣೆ ಇತ್ಯಾದಿ ವಿಚಾರದಲ್ಲಿ ಎದುರಾಗಿರುವ ಬಿಕ್ಕಟ್ಟು ಇತ್ಯರ್ಥಗೊಳಿಸುಲ್ಲಿ ಅವರು ಪಾತ್ರ ಮಹತ್ವವಾಗಿದೆ. ಇಲ್ಲಿನ ಸಂಪೂರ್ಣ ವರದಿಯನ್ನು ಅರುಣ್‌ ಸಿಂಗ್‌ ಹೈ ಕಮಾಂಡ್‌ ಅಂಗಳಕ್ಕೆ ತೆಗೆದುಕೊಂಡು ಹೋಗಲಿದ್ದಾರೆ. ಹೀಗಾಗಿ ಕಮಲ ಪಾಳಯದಲ್ಲಿ ಉತ್ಸಾಹ ಹೆಚ್ಚಿದೆ. ಕೆಲವರು ಭಾರೀ ನಿರೀಕ್ಷೆಯಲ್ಲೂ ಇದ್ದಾರೆ.

Vijaya Karnataka Web 30 Nov 2020, 3:25 pm
ಬೆಂಗಳೂರು: ಸಂಪುಟ ವಿಸ್ತರಣೆ ಇತ್ಯಾದಿ ವಿಚಾರದಲ್ಲಿ ಎದುರಾಗಿರುವ ಬಿಕ್ಕಟ್ಟು ಇತ್ಯರ್ಥಗೊಳಿಸುವ ಹೊಣೆ ಈಗ ರಾಜ್ಯ ಬಿಜೆಪಿ ನೂತನ ಉಸ್ತುವಾರಿ ಅರುಣ್‌ ಸಿಂಗ್‌ ಹೆಗಲಿಗೆ ಬಿದ್ದಿದೆ. ಡಿಸೆಂಬರ್‌ ಮೊದಲ ವಾರ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಆ ಬಳಿಕವೇ ಸಿಎಂ ಬಿ.ಎಸ್‌.ಯಡಿಯೂರಪ್ಪ ಮತ್ತು ಹೈಕಮಾಂಡ್‌ ನಡುವೆ ಕದನ ವಿರಾಮವೋ ಅಥವಾ ಇದು ಬೇರೆ ಸ್ವರೂಪ ಪಡೆದುಕೊಳ್ಳುವುದೋ ಎಂಬ ಚಿತ್ರಣ ದೊರಕಲಿದೆ. ಇದರ ಮಧ್ಯೆ ನಾಯಕತ್ವದ ಬಗೆಗಿನ ಅಭಿಪ್ರಾಯ ಸಂಗ್ರಹವೂ ಶಾಸಕರ ವಲಯದಲ್ಲಿ ಬಿರುಸುಗೊಂಡಿದೆ ಎನ್ನಲಾಗಿದೆ. ಪಕ್ಷದ ಉಸ್ತುವಾರಿ ಅರುಣ್‌ ಸಿಂಗ್‌ ಡಿ. 4ರಂದು ರಾಜ್ಯಕ್ಕೆ ಬರಲಿದ್ದಾರೆ. ಬೆಳಗಾವಿಯಲ್ಲಿ ಅಂದು ಪಕ್ಷದ ಕೋರ್‌ ಕಮಿಟಿ ಸಭೆ ನಡೆಯಲಿದೆ. ಬಳಿಕ ಡಿ. 5ರಂದು ಬೆಳಗಾವಿಯಲ್ಲೆ ಪಕ್ಷದ ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಪ್ರಮುಖ ನಾಯಕರು ಹಾಗೂ ಪದಾಧಿಕಾರಿಗಳೊಂದಿಗೆ ಅರುಣ್‌ ಸಿಂಗ್‌ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಸರಕಾರ ಮತ್ತು ಪಕ್ಷದಲ್ಲಿ ತಲೆದೋರಿರುವ ಬಿಕ್ಕಟ್ಟು ನಿವಾರಣೆಗೆ ಈ ಸಮಾಲೋಚನೆ ನಡೆಯಲಿದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅರುಣ್‌ ಸಿಂಗ್‌ ಭೇಟಿ ಮಹತ್ವ ಪಡೆದಿದೆ. ಇನ್ನು 2-3 ದಿನಗಳಲ್ಲಿ ಸಂಪುಟ ವಿಸ್ತರಣೆಯಾಗಬಹುದು ಎಂದು ಚಿತ್ರದುರ್ಗದಲ್ಲಿ ಭಾನುವಾರ ಸಿಎಂ ಬಿಎಸ್‌ವೈ ಹೇಳಿದ್ದಾರೆ. ಚಿತ್ರದುರ್ಗಕ್ಕೆ ಹೊರಡುವ ಮುನ್ನ ಬೆಂಗಳೂರಿನಲ್ಲಿ ಮಾತನಾಡುವಾಗ ಅವರು, ''ಸಂಪುಟ ವಿಸ್ತರಣೆಗೆ ಕಾಯಲಾಗುತ್ತಿದೆ. ನೀವೂ(ಜನರು) ಕಾಯುತ್ತಿದ್ದೀರಿ,'' ಎಂದಿದ್ದರು. ಆದರೆ, ಅರುಣ್‌ ಸಿಂಗ್‌ ಪ್ರವಾಸ ಕೈಗೊಳ್ಳುವವರೆಗೂ ಹಾಲಿ ಪರಿಸ್ಥಿತಿ ಮುಂದುವರಿಯಲಿದೆ. ಸಿಂಗ್‌ ವರದಿ ಹೈಕಮಾಂಡ್‌ ಕೈಸೇರಿದ ಬಳಿಕವೇ ಮುಂದಿನ ತೀರ್ಮಾನವಾಗಲಿದೆ. ಹಾಗಾಗಿ ತಕ್ಷಣಕ್ಕೆ ಸಂಪುಟ ವಿಸ್ತರಣೆಯಾಗದು ಎಂದು ಉನ್ನತ ಮೂಲಗಳು ಹೇಳುತ್ತವೆ.
Vijaya Karnataka Web bjp state incharge arun singh may come to karnataka on december first week why
ಡಿಸೆಂಬರ್ ಮೊದಲ ವಾರ ರಾಜ್ಯಕ್ಕೆ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಭೇಟಿ, ಕಮಲ ಪಾಳಯದಲ್ಲಿ ಹೆಚ್ಚಿದ ಖುಷಿ; ಯಾಕೆ?


ಸಂಧಾನವೋ? ಸಂಗ್ರಾಮವೋ?

ಸಂಪುಟ ವಿಸ್ತರಣೆಗೆ ಅನುಮತಿ ಸಿಗದೆ ಇರುವುದರಿಂದ ಸಿಎಂ ಬಿಎಸ್‌ವೈ ಗರಂ ಆಗಿರುವುದಂತೂ ನಿಜ. ಇದೇ ಕಾರಣದಿಂದ ಅವರು ನಿಗಮ ಮಂಡಳಿ ನೇಮಕ ಕೈಗೊಂಡಿದ್ದಾರೆ. ಜತೆಗೆ ವೀರಶೈವ ಲಿಂಗಾಯತರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ಮುಂದಾಗುವ ಮೂಲಕ ಹೈಕಮಾಂಡ್‌ಗೆ ಸಂದೇಶ ರವಾನಿಸಿದ್ದಾರೆ. ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೇ ಆತುರದಲ್ಲಿಇಂತಹ ಶಿಫಾರಸು ಮಾಡದಂತೆ ಸೂಚಿಸಿದ್ದಾರೆ. ಅಮಿತ್‌ ಶಾ ನಿರ್ದೇಶನವನ್ನು ಬಿಎಸ್‌ವೈ ಪಾಲಿಸಿದ್ದಾರಾದರೂ ಹೈಕಮಾಂಡ್‌ಗೆ ತಲೆಬಾಗಿದ್ದಾರೆ ಎಂದು ಅರ್ಥವಲ್ಲ. ಈ ಬೆಳವಣಿಗೆ ಬಳಿಕ ಬಿಎಸ್‌ವೈ ಮತ್ತು ಹೈಕಮಾಂಡ್‌ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ದಿಲ್ಲಿಗೆ ತೆರಳಿ ಸಮಾಲೋಚಿಸುವ ಯೋಚನೆಯಲ್ಲಿ ಸಿಎಂ ಇಲ್ಲ. ವರಿಷ್ಠರೂ ಬಿಗುಮಾನದಿಂದಲೇ ಇದ್ದಾರೆ. ಈ ಪರಿಸ್ಥಿತಿ ತಿಳಿಗೊಳಿಸಲು ಅರುಣ್‌ ಸಿಂಗ್‌ ಸಂಧಾನ ಸೂತ್ರ ರಚಿಸಿದರೆ ಸಂಪುಟ ವಿಸ್ತರಣೆ ದಾರಿ ಸುಗಮವಾಗಲಿದೆ. ಇಲ್ಲದಿದ್ದರೆ ಸಂಗ್ರಾಮದ ವಾತಾವರಣ ಸೃಷ್ಟಿಯಾಗಲೂಬಹುದು ಎನ್ನಲಾಗುತ್ತಿದೆ. ಅರುಣ್‌ ಸಿಂಗ್‌ ಸಮ್ಮುಖದಲ್ಲೆ ಬೆಳಗಾವಿಯಲ್ಲಿ ನಡೆಯುವ ಕೋರ್‌ ಕಮಿಟಿ ಸಭೆಯಲ್ಲಿ ಸಿಎಂ ಬಿಎಸ್‌ವೈ ಹಾಗೂ ಪ್ರಮುಖರು ಭಾಗಿಯಾಗಲಿದ್ದಾರೆ. ಮುಂಬರುವ ಉಪ ಚುನಾವಣೆ, ಗ್ರಾಮ ಪಂಚಾಯಿತಿ ಚುನಾವಣೆ ಸಿದ್ಧತೆ ಕುರಿತ ಚರ್ಚೆಗೆ ಈ ಸಭೆ ಸೀಮಿತವಾಗಬಹುದು. ಇದರ ಹೊರತಾಗಿ ನಾನಾ ಮುಖಂಡರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸುವಾಗ ಸಿಂಗ್‌ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ನಿಗಮ ಮಂಡಳಿ ನೇಮಕಾತಿ ಮುಂದುವರಿಕೆ, ಮತ್ತೆ ಐವರಿಗೆ ಅಧ್ಯಕ್ಷ ಸ್ಥಾನ

ಶಾಸಕರ ಅಭಿಪ್ರಾಯ ಸಂಗ್ರಹ?

ಕಳೆದ ಐದಾರು ತಿಂಗಳಿಂದಲೂ ಬಿಜೆಪಿ ಶಾಸಕರ ವಲಯದಲ್ಲಿ ಒಂದಷ್ಟು ಗುಪ್ತ ಚಟುವಟಿಕೆ ನಡೆಯುತ್ತಿದೆ. ಗುಂಪು ಸಭೆಗಳೂ ಆಗುತ್ತಿವೆ. ರೊಟ್ಟಿ ಊಟದ ನೆಪದಲ್ಲಿ ನಾಯಕತ್ವ ಮತ್ತು ಆಡಳಿತದ ವಿಚಾರವಾಗಿ ಚರ್ಚೆಯಾಗಿದೆ. ಕೇಂದ್ರದ ಪ್ರಭಾವಿ ಸಚಿವರೂ ಇಂತಹ ಸಭೆಯಲ್ಲಿ ಪಾಲ್ಗೊಂಡದ್ದಿದೆ. ಇಂತಹ ಸಭೆಗಳ ನಡುವೆಯೇ ನಾಯಕತ್ವದ ವಿರುದ್ಧ ಅಭಿಪ್ರಾಯ ರೂಪಿಸುವ ಕೆಲಸವೂ ನಡೆದಿತ್ತು. ಉತ್ತರ ಕರ್ನಾಟಕದ 'ಫೈರ್‌ ಬ್ರ್ಯಾಂಡ್‌' ಶಾಸಕರೊಬ್ಬರು ಇದರ ನೇತೃತ್ವ ವಹಿಸಿದ್ದಾರೆ. ಈ ಪ್ರಕ್ರಿಯೆ ಈಗ ಬಿರುಸು ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಉತ್ತರ ಕರ್ನಾಟಕದ ಬೆಂಬಲ ಮುಖ್ಯವಾಗಿದೆ. ಹಾಗಾಗಿ ಅಭಿಪ್ರಾಯ ಸಂಗ್ರಹ ಕಾರ್ಯದಲ್ಲೂ ಉತ್ತರ ಕರ್ನಾಟಕ ಶಾಸಕರೇ ಮುಂಚೂಣಿಯಲ್ಲಿದ್ದಾರೆ. ಅರುಣ್‌ ಸಿಂಗ್‌ ಆಗಮನದ ಹೊತ್ತಿಗೆ ಈ ಕೆಲಸ ಪೂರ್ಣಗೊಳಿಸಿ ವರದಿಯನ್ನು ಅವರ ಕೈಗೊಪ್ಪಿಸುವುದು ಈ ಶಾಸಕರ ಉದ್ದೇಶವಾಗಿದೆ ಎಂದು ತಿಳಿದು ಬಂದಿದೆ.

ಸಂಪುಟ ವಿಸ್ತರಣೆ: ಇನ್ನೆರಡು ದಿನ ಕಾದು ನೋಡಿ ಎಂದ ಬಿಎಸ್‌ವೈ

ನಾಯಕತ್ವದ ಪರ ಲಾಬಿ

ಈ ನಡುವೆ ಹಾಲಿ ನಾಯಕತ್ವದ ಪರ ಬ್ಯಾಟಿಂಗ್‌ ಮಾಡುವವರಿಗೇನೂ ಕಮ್ಮಿಯಿಲ್ಲ. ಈ ಪೈಕಿ ವಿಶೇಷವಾಗಿ ವಲಸಿಗ ಸಚಿವರು ಯಡಿಯೂರಪ್ಪ ನಾಯಕತ್ವದಲ್ಲಿ ಅಚಲ ನಿಷ್ಠೆ ಹೊಂದಿರುವುದಾಗಿ ಘೋಷಿಸುತ್ತಿದ್ದಾರೆ. ಕೆಲವು ಹಿರಿಯ ಸಚಿವರು ಹಾಗೂ ಶಾಸಕರೂ ಈ ಸಂಬಂಧ ಹೇಳಿಕೆ ನೀಡುತ್ತಿದ್ದಾರೆ. ಅರುಣ್‌ ಸಿಂಗ್‌ ಭೇಟಿ ಸಂದರ್ಭದಲ್ಲಿ ಈ ಮುಖಂಡರೂ ಅಭಿಪ್ರಾಯ ತಿಳಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಬಿಜೆಪಿ ಸರಕಾರ ರಚನೆಗೆ ಸಹಕಾರ ಕೊಟ್ಟ ಎಲ್ಲರಿಗೂ ಕೊಟ್ಟ ಮಾತನ್ನು ಉಳಿಸಿಕೊಂಡು ನ್ಯಾಯ ಕೊಡುತ್ತಿದ್ದೇವೆ ಎಂದಿದ್ದಾರೆ. ಹೀಗಾಗಿ ಉಸ್ತುವಾರಿ ಸಚಿವ ಭೇಟಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ