ಆ್ಯಪ್ನಗರ

ಸುಮಲತಾ ಬಂದರೆ ಸ್ವಾಗತ: ಯಡಿಯೂರಪ್ಪ

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರುವ ಸುಮಲತಾ ಅಂಬರೀಷ್‌ ಅವರನ್ನು ಪಕ್ಷಕ್ಕೆ ಆಹ್ವಾನಿಸುವುದಿಲ್ಲ, ಆದರೆ ಅವರೇ ...

Vijaya Karnataka 25 May 2019, 5:00 am
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರುವ ಸುಮಲತಾ ಅಂಬರೀಷ್‌ ಅವರನ್ನು ಪಕ್ಷಕ್ಕೆ ಆಹ್ವಾನಿಸುವುದಿಲ್ಲ, ಆದರೆ ಅವರೇ ಬಂದರೆ ಸ್ವಾಗತಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka Web bsy


ತಮ್ಮ ನಿವಾಸದಲ್ಲಿ ಹೊಸ ಸಂಸದರಿಗೆ ಅಭಿನಂದನೆ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿ,''ರಾಜ್ಯದ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಒಳ್ಳೆಯ ಸಂದೇಶ ನೀಡಿದ್ದಾರೆ. ಅದೇ ರೀತಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಬಿಜೆಪಿ ಬೆಂಬಲ ನೀಡಿತ್ತು. ಈಗ ಅವರು ಜಯಗಳಿಸಿರುವುದರು ಸಂತಸದ ಸಂಗತಿ,''ಎಂದು ಹೇಳಿದರು.

''ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದೇವೆ. ಅವರ ನಡೆಯನ್ನು ಕಾದು ನೋಡಲಾಗುವುದು. ಈ ತಿಂಗಳ ಅಂತ್ಯದಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಅಲ್ಲಿಯವರೆಗೂ ಯಾವುದೇ ಚಟುವಟಿಕೆ ಇರುವುದಿಲ್ಲ. ರಾಜಕೀಯ ಧ್ರುವೀಕರಣದ ಬಗ್ಗೆ ಸದ್ಯಕ್ಕೆ ಏನೂ ಹೇಳಲಾಗದು,''ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಿಜವಾಗಿದೆ
''ಜೆಡಿಎಸ್‌ನ ಅಪ್ಪ ಮಕ್ಕಳು (ದೇವೇಗೌಡ-ಕುಮಾರಸ್ವಾಮಿ) ಕೆಲವೇ ತಿಂಗಳಲ್ಲಿ ಕಾಂಗ್ರೆಸ್‌ ಅನ್ನು ಮುಗಿಸಲಿದ್ದಾರೆ ಎಂದು ವಿಧಾನಸಭೆಯಲ್ಲಿ ಹೇಳಿದ್ದೆ. ಅದು ಈಗ ನಿಜವಾಗಿದೆ. ನನ್ನ 40 ವರ್ಷಗಳ ರಾಜಕೀಯ ಅನುಭವದ ಹಿನ್ನೆಲೆಯಲ್ಲಿ ಹೇಳಿದ ಮಾತಿದು,''ಎಂದರು.

ಖರ್ಗೆಯದು ಮುಗಿದ ಕತೆ
ಯಡಿಯೂರಪ್ಪ ಅವರನ್ನು ಭೇಟಿಯಾದ ಕಲಬುರಗಿ ಸಂಸದ ಡಾ.ಉಮೇಶ್‌ ಜಾಧವ್‌,''ಖರ್ಗೆ ಅವರ ಸೋಲಿನಿಂದ ಕಲಬುರಗಿಯಲ್ಲಿ ಹಬ್ಬದ ವಾತಾವರಣ ಉಂಟಾಗಿದ್ದು ಅವರ ಕತೆ ಮುಗಿದಂತೆ. ಅವರ ಬಗ್ಗೆ ಇನ್ನು ಏನೂ ಮಾತನಾಡುವುದಿಲ್ಲ. ಯಡಿಯೂರಪ್ಪ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಅವಕಾಶ ಕೊಟ್ಟರು. ಜನ ಆಶೀರ್ವಾದ ಮಾಡಿದರು,'' ಎಂದು ಹೇಳಿದರು.

ಮಂತ್ರಿ ಸ್ಥಾನ ಸಿಕ್ಕರೆ ನಿಭಾಯಿಸುವೆ
''ನಾನು ಕೇಂದ್ರ ಸಚಿವ ಸ್ಥಾನ ಅಪೇಕ್ಷೆಪಡುವುದಿಲ್ಲ. ಆದರೆ ಅರ್ಹತೆ ಇದ್ದು ಕೊಟ್ಟರೆ ನಿಭಾಯಿಸುವೆ,'' ಎಂದು ಹೇಳಿದ ಉಮೇಶ್‌ ಜಾಧವ್‌ ಹೇಳಿದರು.

''ನೈತಿಕ ಹೊಣೆ ಹೊತ್ತು ಸಿಎಂ ಕುಮಾರಸ್ವಾಮಿ ತಕ್ಷಣವೇ ರಾಜೀನಾಮೆ ಕೊಡಬೇಕು. ನನ್ನ ಕ್ಷೇತ್ರದ ಅನುದಾನವನ್ನು ತಡೆ ಹಿಡಿದಿದ್ದರು. ಅವರ ಕಾರ್ಯವೈಖರಿಯಿಂದ ಬೇಸತ್ತು ರಾಜೀನಾಮೆ ನೀಡಿ ಸಂಸದನಾಗಿದ್ದೇನೆ,'' ಎಂದು ಹೇಳಿದರು.
ಮಾಜಿ ಸಚಿವರಾದ ವಿ.ಸೋಮಣ್ಣ, ಮಾಲೀಕಯ್ಯ ಗುತ್ತೇದಾರ ಸೇರಿದಂತೆ ಅನೇಕ ಮುಖಂಡರು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ