ಆ್ಯಪ್ನಗರ

ಪದ್ಮಶ್ರೀ ವೈದ್ಯರಿಗೆ ಬ್ಲ್ಯಾಕ್‌ಮೇಲ್‌: ಪತ್ರಕರ್ತ ಹೇಮಂತ್‌ ನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ

ಪದ್ಮಶ್ರೀ ಪುರಸ್ಕೃತ ವೈದ್ಯ ಡಾ.ರಮಣರಾವ್‌ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಪಬ್ಲಿಕ್‌ ಟಿವಿಯ ಪತ್ರಕರ್ತ ಹೇಮಂತ್‌ ಕಶ್ಯಪ್‌ನನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಬುಧವಾರ ನಾಲ್ಕು ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

Vijaya Karnataka 21 Mar 2019, 5:00 am
ಬೆಂಗಳೂರು : ಪದ್ಮಶ್ರೀ ಪುರಸ್ಕೃತ ವೈದ್ಯ ಡಾ.ರಮಣರಾವ್‌ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟು ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಪಬ್ಲಿಕ್‌ ಟಿವಿಯ ಪತ್ರಕರ್ತ ಹೇಮಂತ್‌ ಕಶ್ಯಪ್‌ನನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯ ಬುಧವಾರ ನಾಲ್ಕು ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.
Vijaya Karnataka Web hemanth


ಬ್ಲ್ಯಾಕ್‌ಮೇಲ್‌ ಮಾಡಿ ವೈದ್ಯರಿಂದ ಪಡೆದುಕೊಂಡಿರುವ 5 ಲಕ್ಷ ರೂ ನಗದು, ಬ್ಲ್ಯಾಕ್‌ಮೇಲ್‌ಗೆ ಬಳಸಲು ಉದ್ದೇಶಿಸಿದ್ದ ವೈದ್ಯರ ಖಾಸಗಿತನದ ಸಿ.ಡಿ ಯನ್ನು ಆರೋಪಿಯಿಂದ ವಶಪಡಿಸಿಕೊಳ್ಳಬೇಕಿದೆ. ಜತೆಗೆ ಕೃತ್ಯದಲ್ಲಿ ಇನ್ನೂ ನಾಲ್ವರು ಟಿ.ವಿ.ವರದಿಗಾರರು ಮತ್ತು ಕ್ಯಾಮೆರಾಮೆನ್‌ಗಳು ಭಾಗಿ ಆಗಿರುವ ಬಗ್ಗೆ ದೂರು ನೀಡಿರುವುದರಿಂದ ಅವರೆಲ್ಲರನ್ನೂ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ ಆರೋಪಿಯನ್ನು 7 ದಿನಗಳ ಕಸ್ಟಡಿಗೆ ಒಪ್ಪಿಸುವಂತೆ ಪೊಲಿಸರು ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ನಾಲ್ಕು ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿದೆ.

ನಡೆದದ್ದೇನು ?

ಖ್ಯಾತ ವೈದ್ಯ ರಮಣರಾವ್‌ ಅವರನ್ನು ಸಂಪರ್ಕಿಸಿದ್ದ ಹೇಮಂತ್‌ ಕಶ್ಯಪ್‌, ತಾನು ಟಿ.ವಿ.9 ವರದಿಗಾರ ಎಂದು ಪರಿಚಯಿಸಿಕೊಂಡಿದ್ದಲ್ಲದೆ ''ನನ್ನ ಬಳಿ ನಿಮ್ಮ ಖಾಸಗಿತನದ ಸಿ.ಡಿ. ಇದೆ. ಇದನ್ನು ಪ್ರಸಾರ ಮಾಡಿದರೆ ನಿಮ್ಮ ಘನತೆಗೆ ಧಕ್ಕೆ ಆಗುತ್ತದೆ. ಈ ಸಿ.ಡಿ. ಐದು ಮಂದಿ ಟಿ.ವಿ ವರದಿಗಾರರ ಬಳಿ ಇದ್ದು ಎಲ್ಲರಿಗೂ ತಲಾ ಒಂದೊಂದು ಲಕ್ಷ ಕೊಟ್ಟರೆ ನಿಮಗೆ ಸಮಸ್ಯೆ ಆಗುವುದಿಲ್ಲ,'' ಎಂದು ಹೇಳಿದ್ದ. ಈ ಮಾತಿನಿಂದ ಹೆದರಿದ ವೈದ್ಯರು ಒಟ್ಟು 5 ಲಕ್ಷ ರೂ.ಗಳನ್ನು ನೀಡಿದ್ದರು. ಈ ಹಣ ಪಡೆದ ನಂತರವೂ ಸಮಯವಾಹಿನಿ ವರದಿಗಾರ ಮಂಜುನಾಥ್‌ ಎಂಬಾತ ತನ್ನ ಕ್ಯಾಮೆರಾಮನ್‌ ಜತೆಗೆ ವೈದ್ಯರ ಬಳಿಗೆ ಬಂದು, ನಿಮ್ಮ ಸಿ.ಡಿ ಇದೆ ಎಂದು ಹೇಳಿ ಹಣ ಕೇಳಿದ್ದ. ಆ ನಂತರ ಮತ್ತೆ ಹೇಮಂತ್‌ ವೈದ್ಯರಿಗೆ ಕರೆ ಮಾಡಿ ''ಐದು ಮಂದಿ ಟಿ.ವಿ.ವರದಿಗಾರರಿಗೆ ತಲಾ 10 ಲಕ್ಷದಂತೆ 50 ಲಕ್ಷ ರೂ.ಕೊಡಲೇಬೇಕು.ಇಲ್ಲದಿದ್ದರೆ ಸಮಸ್ಯೆ ಆಗುತ್ತದೆ'' ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪರಮೇಶ್ವರ್‌ ಮೊರೆ ಹೋದ ವೈದ್ಯರು

ವೈದ್ಯ ರಮಣರಾವ್‌ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರಿಗೂ ಸ್ನೇಹಿತರಾಗಿದ್ದು, ಟಿ.ವಿ.ವರದಿಗಾರರಿಂದ ತಮಗೆ ಆಗುತ್ತಿರುವ ಬ್ಲ್ಯಾಕ್‌ಮೇಲನ್ನು ಅವರ ಬಳಿ ಹೇಳಿಕೊಂಡಿದ್ದರು. ಬಳಿಕ ಡಿಸಿಎಂ ಅವರು ಸದಾಶಿವನಗರದ ಇನ್ಸ್‌ಪೆಕ್ಟರ್‌ ಅವರನ್ನು ಕರೆದು ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದರು. ವೈದ್ಯರು ಮಂಗಳವಾರ ವಾಟ್ಸ್‌ ಆ್ಯಪ್‌ನಲ್ಲಿ ಕರೆ ಮಾಡಿ ಹಣ ಕೊಡುವುದಾಗಿ ಹೇಳಿ ಹೇಮಂತ್‌ಗೆ ಬರಲು ಹೇಳಿದ್ದರು. ಆತ ಕ್ಲಿನಿಕ್‌ಗೆ ಬರುತ್ತಿದ್ದಂತೆ ಮಫ್ತಿಯಲ್ಲಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಪ್ರಾಥಮಿಕ ಸುಳಿವು ಸಿಕ್ಕುತ್ತಿದ್ದಂತೆ ಆತನನ್ನು ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಈ ಮುಂಚೆಯೂ ರಮಣರಾವ್‌ ಬಳಿ ಬಂದು ಹಣ ಪಡೆದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಗೊತ್ತಾಗಿದೆ.

ತನಿಖೆ ಮುಂದುವರಿಸಿರುವ ಪೊಲೀಸರು ನಿಜಕ್ಕೂ ಆ ರೀತಿಯ ಸಿ.ಡಿ ಇವರ ಬಳಿ ಇದೆಯೇ ? ಅಥವಾ ತಿರುಚಿದ ಸಿ.ಡಿ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿತ್ತೇ ಎನ್ನುವ ದಿಕ್ಕಿನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಹೇಮತ್‌ ಕೆಲಸದಿಂದ ವಜಾ

ತಮ್ಮ ಸಿಬ್ಬಂದಿ ಹೇಮಂತ್‌ ಕಶ್ಯಪ್‌ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿರುವ 'ಪಬ್ಲಿಕ್‌ ಟಿವಿ' ಸಂಪಾದಕ ರಂಗನಾಥ್‌ ಅವರು, ಇಂಥಾ ಬೆಳವಣಿಗೆ ವೃತ್ತಿಗೆ ಕೆಟ್ಟ ಹೆಸರು ತರುತ್ತದೆ. ಇದನ್ನು ಸಂಸ್ಥೆ ಸಹಿಸುವುದಿಲ್ಲ . ವೈಯುಕ್ತಿಕ ನೆಲೆಯಲ್ಲಿ ನಡೆದಿರುವ ಕೃತ್ಯ ಇದಾಗಿದ್ದು, ಆರೋಪ ಬಂದಿರುವ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಸಂಸ್ಥೆ ಮುಖ್ಯಸ್ಥರು ನಗರ ಪೊಲೀಸ್‌ ಕಮಿಷನರ್‌ಗೆ ಪತ್ರ ಬರೆದು, ಘಟನೆ ಕುರಿತು ತನಿಖೆ ನಡೆಸುವಂತೆ ಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ