ಆ್ಯಪ್ನಗರ

ಜನಸಾಮಾನ್ಯರಿಗೆ ಸರ್ಕಾರಿ ಆಸ್ಪತ್ರೆ, ಜನನಾಯಕರಿಗೆ ಐಷಾರಾಮಿ ಖಾಸಗಿ ಆಸ್ಪತ್ರೆ! ಚರ್ಚೆಗೆ ಗ್ರಾಸವಾದ ತಾರತಮ್ಯ

ಸಿಎಂ ಬಿ.ಎಸ್ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೋವಿಡ್‌ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಜನನಾಯಕರ ಈ ನಡೆ ಚರ್ಚೆಗೆ ಗ್ರಾಸವಾಗಿದೆ.

Authored byಇರ್ಷಾದ್ ಉಪ್ಪಿನಂಗಡಿ | Vijaya Karnataka Web 4 Aug 2020, 10:48 am
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೋವಿಡ್‌ ಪಾಸಿಟಿವ್‌ ಆಗಿದೆ. ಇಬ್ಬರು ಜನನಾಯಕರು ಬೆಂಗಳೂರಿನ ಪ್ರತಿಷ್ಠಿತ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
Vijaya Karnataka Web siddaramaiah and bsy


ರಾಜ್ಯದಲ್ಲಿ ಬಡವರು, ಜನಸಾಮಾನ್ಯರು ಕೋವಿಡ್‌ ಚಿಕಿತ್ಸೆಗಾಗಿ ಪರದಾಡುತ್ತಿರುವ ಸಂದರ್ಭದಲ್ಲಿ ಈ ಇಬ್ಬರು ಜನನಾಯಕರು ಪ್ರತಿಷ್ಠಿತ ಐಷಾರಾಮಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ರಾಜ್ಯದಲ್ಲಿ ಕೋವಿಡ್‌ ಅಟ್ಟಹಾಸ ಸಾರ್ವಜನಿಕ‌ ಆರೋಗ್ಯ ಕ್ಷೇತ್ರದ ಸ್ಥಿತಿಗತಿಯನ್ನು ತೆರೆದಿಟ್ಟಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿರುವ ಕುಂದುಕೊರತೆಗಳು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಜನರು ಅನುಭವಿಸುತ್ತಿರುವ ನೋವು, ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗೆ ಕೈಗೆಟಕದ ಚಿಕಿತ್ಸೆ ಎಲ್ಲವೂ ಬಹಿರಂಗಗೊಳಿಸಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕೊರೊನಾ: ಶೀಘ್ರ ಗುಣಮುಖರಾಗಲು ಗಣ್ಯರ ಹಾರೈಕೆ

ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲೂ ಖಾಸಗಿ ಆಸ್ಪತ್ರೆಗಳು ದುಬಾರಿ ಬಿಲ್‌ಗಳನ್ನು ಪಾವತಿಸುವಂತೆ ಒತ್ತಡ ಹೇರುತ್ತಿವೆ. ಕೆಲವು ಕಡೆಗಳಲ್ಲಿ ಬಿಲ್‌ ಪಾವತಿ ಮಾಡಿಲ್ಲ ಎಂದು ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡದೇ ಇದ್ದ ಪ್ರಕರಣಗಳು ವರದಿಯಾಗಿವೆ.

ಕೋವಿಡ್‌ ಸೋಂಕಿತರಿಗೆ ರಾಜ್ಯದಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಜನರು ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ, ವೆಂಟಿಲೇಟರ್‌ ಕೊರತೆ ಪರಿಣಾಮ ಖಾಸಗಿ ಆಸ್ಪತ್ರೆಗಳಿಗೆ ಅನಿವಾರ್ಯವಾಗಿ ದಾಖಲಾಗುವ ಪರಿಸ್ಥಿತಿಯಲ್ಲಿದ್ದಾರೆ. ಈ ಸಂಕಷ್ಟದ ಸಂದರ್ಭದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಣೆ ಮಾಡಿದರೆ ಮತ್ತೆ ಕೆಲವು ಆಸ್ಪತ್ರೆಗಳು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ರೋಗಿಗಳಿಂದ ದುಬಾರಿ ದರ ವಸೂಲಿ ಮಾಡುತ್ತಿವೆ.

ಇಂತಹ ಸಂದರ್ಭದಲ್ಲಿ ರಾಜ್ಯದ ಸಿಎಂ ಹಾಗೂ ಮಾಜಿ ಸಿಎಂ ಕೋವಿಡ್‌ ಸೋಂಕಿಗೆ ತುತ್ತಾಗಿ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇವರಿಬ್ಬರಿಗೂ ಕೋವಿಡ್ ರೋಗ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹಾಗಿದ್ದರೂ ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಣಿಪಾಲ್ ಆಸ್ಪತ್ರೆಯ 11 ನೇ ಮಹಡಿಯಲ್ಲಿ ಹಾಲಿ, ಮಾಜಿ ಸಿಎಂಗಳಿಗೆ ಕೋವಿಡ್‌ ಚಿಕಿತ್ಸೆ

ಸದ್ಯದ ಸನ್ನಿವೇಶದಲ್ಲಿ ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದು ತಪ್ಪು ಸಂದೇಶ ಕೊಡುತ್ತದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಕೇವಲ ಬಡವರಿಗೆ ಸೀಮಿತವೇ? ಇವರುಗಳೇ ನಿರ್ಮಿಸಿದ ಸರ್ಕಾರಿ ಆಸ್ಪತ್ರೆಗಳಲ್ಲಿ ಇವರಿಗೆ ನಂಬಿಕೆ ಇಲ್ಲವೇ ಎಂಬ ಪ್ರಶ್ನೆಗಳನ್ನು ಜನರು ಮುಂದಿಟ್ಟಿದ್ದಾರೆ.

“ಕೋವಿಡ್‌ ರೋಗ ಲಕ್ಷಣಗಳು ಇಲ್ಲ ಅಂದಮೇಲೆ ಮನೆಯಲ್ಲೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಚಿಕಿತ್ಸೆ ಪಡೆಯಬಹುದಿತ್ತು ಅಥವಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಅದನ್ನು ಬಿಟ್ಟು ಐಷಾರಾಮಿ ಮಣಿಪಾಲ್ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದು ಮುಖ್ಯಮಂತ್ರಿಯಾಗಿ ನಿಮ್ಮ ನೈತಿಕ ಜವಾಬ್ದಾರಿಯನ್ನೆ ಪ್ರಶ್ನೆ ಮಾಡುತ್ತದೆ. ರಾಜ್ಯದ ಸಾಮಾನ್ಯ ಜನರಿಗೆ ನಿಮ್ಮ ಸರ್ಕಾರ ಯಾವ ಆರೋಗ್ಯ ವ್ಯವಸ್ಥೆ ರೂಪಿಸಿದೆ ಆ ವ್ಯವಸ್ಥೆಯಲ್ಲಿ ನೀವು ಚಿಕಿತ್ಸೆ ಪಡೆಯಬೇಕಾಗಿದ್ದು ನಿಮ್ಮ ಕರ್ತವ್ಯ ಆಗಬೇಕಿತ್ತು. ಆದರೆ ನಿಮ್ಮನ್ನು ನೀವು ಶ್ರೇಷ್ಠ ಎಂದು ಭಾವಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೀರಿ” ಎಂದು ಬರಹಗಾರರಾದ ನಾಗೇಗೌಡ ಕೀಲಾರ ಶಿವಲಿಂಗಯ್ಯ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯಗೂ ಕೊರೊನಾ ದೃಢ, ಮಣಿಪಾಲ್ ಆಸ್ಪತ್ರೆಗೆ ದಾಖಲು!

“ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಬ್ಬರೂ ಪಂಚತಾರಾ ದರ್ಜೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಇಡೀ ವ್ಯವಸ್ಥೆ ಮುಂದೆ ನಿಂತು ಅತ್ಯುತ್ತಮ ಚಿಕಿತ್ಸೆಗೆ ಏರ್ಪಾಡು ಮಾಡುತ್ತಿತ್ತು. ಆದರೂ ಯಾವುದೇ ರೋಗ ಲಕ್ಷಣಗಳಿಲ್ಲದ ಇವರು ಹಾಗೆ ಮಾಡಲಿಲ್ಲ. ಬಡವರು, ಜನಸಾಮಾನ್ಯರು ಮಾತ್ರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಇವರುಗಳು ನಿರ್ಮಿಸಿದ ಸರಕಾರಿ ಆಸ್ಪತ್ರೆಗಳ ಮೇಲೆ ಇವರಿಗೆ ನಂಬಿಕೆ ಇಲ್ಲ. ಬಹುಷ: ನಾಡಿನ‌ ಸಾರ್ವಜನಿಕ‌ ಆರೋಗ್ಯ ಕ್ಷೇತ್ರದ ಸ್ಥಿತಿಯನ್ನು ಬಂಡವಾಳಶಾಹಿ ಪಕ್ಷ/ಸರಕಾರಗಳು ಯಾವ ಸ್ಥಿತಿಯಲ್ಲಿ ಇಟ್ಟಿದೆ ಎಂಬುವುದನ್ನು ನಾಯಕರ ಈ ನಡೆಗಳು ಬಹಿರಂಗ ಪಡಿಸಿದೆ‌” ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಿನಲ್ಲಿ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಪರದಾಡುತ್ತಿದ್ದರೆ ಜನನಾಯಕರು ಐಷಾರಾಮಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಬಡವರು ಹಾಗೂ ಶ್ರೀಮಂತರ ನಡುವಿನ ತಾರತಮ್ಯವನ್ನು ಎತ್ತಿತೋರಿಸುತ್ತಿದೆ ಎಂಬವುದು ಹಲವರ ಅಭಿಪ್ರಾಯವಾಗಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ