ಆ್ಯಪ್ನಗರ

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಬಿಎಸ್‌ವೈಗೆ 4 ಕೋಟಿ ರೂ. ಕಿಕ್‌ಬ್ಯಾಕ್‌ : ಉಗ್ರಪ್ಪ

ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, 4 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದುಕೊಂಡಿದ್ದರು ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.

Vijaya Karnataka 7 Apr 2018, 7:03 am
ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆ ಟೆಂಡರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, 4 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದುಕೊಂಡಿದ್ದರು ಎಂದು ವಿಧಾನ ಪರಿಷತ್‌ ಸದಸ್ಯ ವಿ.ಎಸ್‌. ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.
Vijaya Karnataka Web 0604-2-2-10


ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಅವರೊಂದಿಗೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ''ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 2009 ರಿಂದ 2011 ರ ಅವಧಿಯಲ್ಲಿ ಈ ಭ್ರಷ್ಟಾಚಾರ ನಡೆದಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿ ಕ್ಯಾಷ್‌ ರೂಪದಲ್ಲಿ ಆರ್‌ಎನ್‌ಎಸ್‌ ಸಂಸ್ಥೆಯಿಂದ ಲಂಚ ಪಡೆದುಕೊಂಡಿದ್ದಾರೆ,'' ಎಂದು ಆಪಾದಿಸಿ, ದಾಖಲೆಗಳನ್ನು ಬಿಡುಗಡೆ ಮಾಡಿದರು.

''ಯೋಜನೆಗೆ 1,033 ಕೋಟಿ ರೂ. ಟೆಂಡರ್‌ ಕರೆದಿದ್ದು, ಆರ್‌ಎನ್‌ಎಸ್‌ನ ಅಂಗಸಂಸ್ಥೆ ಮುರುಡೇಶ್ವರ ಪವರ್‌ ಕಾರ್ಪೊರೇಷನ್‌ಗೆ ಗುತ್ತಿಗೆ ನೀಡಲಾಗಿತ್ತು. ಈ ಯೋಜನೆಯಡಿ 2009-10 ರಲ್ಲಿ 1 ಕೋಟಿ ರೂ., 2010-11 ರಲ್ಲಿ 1 ಕೋಟಿ ರೂ. ಹಾಗೂ 2011-12 ರಲ್ಲಿ 2 ಕೋಟಿ ರೂ. ಲಂಚ ಪಡೆದುಕೊಂಡಿದ್ದಾರೆ. ಐಟಿ ದಾಳಿಯಾದಾಗ ಸಂಸ್ಥೆಯ ಸುನೀಲ್‌ ಸಹಸ್ರಬುಧೆ ಎಂಬುವರು ಯಡಿಯೂರಪ್ಪ ಅವರಿಗೆ ಲಂಚ ನೀಡಿದ್ದನ್ನು ಲಿಖಿತವಾಗಿ ಒಪ್ಪಿಕೊಂಡಿದ್ದಾರೆ. ಬಿಎಸ್‌ವೈ ಅವರಿಗೆ ಒಟ್ಟಾರೆಯಾಗಿ 4,11,13,823 ರೂ. ನೀಡಿರುವುದಾಗಿ ಅವರು ಐಟಿ ಅಧಿಕಾರಿಗಳಿಗೆ ತಿಳಿಸಿದ್ದಾರೆ,'' ಎಂದು ಹೇಳಿದರು.

''ಈ ಪ್ರಕರಣದ ಬಳಿಕ ಆದಾಯ ತೆರಿಗೆ ಪಾವತಿಸುವಾಗ ಯಡಿಯೂರಪ್ಪ ಈ ಸಂಬಂಧ ಮಾಹಿತಿ ನೀಡಿರಲಿಲ್ಲ. ಹಾಗಾಗಿ ಬಿಎಸ್‌ವೈ ಅವರಿಗೆ ಐಟಿ ಇಲಾಖೆ 2.22 ಕೋಟಿ ರೂ. ದಂಡ ವಿಧಿಸಿತ್ತು,'' ಎಂದು ತಿಳಿಸಿದರು.

''ರಾಜ್ಯ ಸರಕಾರ ಕಮಿಷನ್‌ ಸರಕಾರವೆಂದು ವಿರುದ್ಧ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳುತ್ತಾರೆ. ಆದರೆ, ಕಮಿಷನ್‌ ಸರಕಾರ ನಡೆಸಿದವರು ಯಾರು ಎನ್ನುವುದು ಈ ಪ್ರಕರಣದಿಂದ ಗೊತ್ತಾಗುತ್ತದೆ. ಇದಕ್ಕೆ ಅವರೆಲ್ಲ ಉತ್ತರಿಸಲಿ,''ಎಂದು ಸವಾಲು ಹಾಕಿದರು.

ಮುಗಿದು ಹೋದ ಪ್ರಕರಣ: ಬಿಜೆಪಿ

ಭದ್ರಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ಈ ಹಿಂದೆ ಬಂದ ಖಾಸಗಿ ದೂರಿನ ತನಿಖೆ ನಡೆಸಿದ ಲೋಕಾಯುಕ್ತ ಪೊಲೀಸರು ಪ್ರಕರಣ ಇತ್ಯರ್ಥಗೊಳಿಸಿ, ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ,''ಎಂದು ರಾಜ್ಯ ಬಿಜೆಪಿ ಮಾಧ್ಯಮ ವಿಭಾಗ ಸ್ಪಷ್ಟೀಕರಣ ನೀಡಿದೆ.

''ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದಾಗ ಯಡಿಯೂರಪ್ಪ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್‌, ಈ ಎಫ್‌ಐಆರ್‌ ಅನ್ನು ವಜಾಗೊಳಿಸಿದೆ. ಐಟಿ ಇಲಾಖೆಯಿಂದ ಬಂದಿರುವ ನೋಟಿಸ್‌ಗೂ ಯಡಿಯೂರಪ್ಪ ಅವರಿಗೂ ಸಂಬಂಧವಿಲ್ಲ. ಈ ಕುರಿತೂ ಐಟಿ ಇಲಾಖೆಗೆ ಸಮಜಾಯಿಷಿ ನೀಡಲಾಗಿದೆ,'' ಎಂದು ಬಿಜೆಪಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ