ಆ್ಯಪ್ನಗರ

ಉಪ ಸಮರ ಸೇನಾನಿಗಳ ಪಟ್ಟಿ ರೆಡಿ

ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಎರಡೂ ಪಕ್ಷಗಳು ರಾಜ್ಯ ಹಂತದಿಂದ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿವೆ.

Vijaya Karnataka 26 Apr 2019, 5:00 am
ಬೆಂಗಳೂರು: ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್‌, ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಎರಡೂ ಪಕ್ಷಗಳು ರಾಜ್ಯ ಹಂತದಿಂದ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿವೆ.
Vijaya Karnataka Web banar


ಬಿಜೆಪಿಯಿಂದ ಚಿಂಚೋಳಿಗೆ ಡಾ.ಉಮೇಶ್‌ ಜಾಧವ್‌ ಸಹೋದರ ರಾಮಚಂದ್ರ ಜಾಧವ್‌ ಹಾಗೂ ಕುಂದಗೋಳಕ್ಕೆ ಕಳೆದ ಬಾರಿಯ ಅಭ್ಯರ್ಥಿ ಎಸ್‌.ಐ.ಚಿಕ್ಕನಗೌಡ ಹೆಸರನ್ನು ಪಕ್ಷದ ಕೋರ್‌ ಕಮಿಟಿ ಅಂತಿಮಗೊಳಿಸಿದೆ. ಈ ಹೆಸರುಗಳನ್ನು ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿ ಕೊಡಲಾಗುತ್ತಿದೆ. ಈ ನಡುವೆಯೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವೇಳೆ ಆದ ಕಹಿ ಅನುಭವದ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಕ್ಕೂ ತಲಾ ಇಬ್ಬರ ಹೆಸರನ್ನು ಶಿಫಾರಸು ಮಾಡಲಾಗಿದೆ. ಕುಂದಗೋಳ ಕ್ಷೇತ್ರಕ್ಕೆ ಚಿಕ್ಕನಗೌಡ ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಹಾಲಿ ಸಂಸದರೊಬ್ಬರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಎಂ.ಆರ್‌.ಪಾಟೀಲ್‌ ಹೆಸರು ಸೇರಿಸಲಾಗಿದೆ. ಜತೆಗೆ ಚಿಂಚೋಳಿ ಕ್ಷೇತ್ರಕ್ಕೆ ಸುನೀಲ್‌ ವಲ್ಯಾಪೂರೆ ಅವರ ಹೆಸರು ಪಟ್ಟಿಯಲ್ಲಿದೆ.

ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಪಕ್ಷದ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಉಭಯ ಕ್ಷೇತ್ರಗಳ ಪ್ರಮುಖರು ಹಾಜರಿದ್ದ ಈ ಸಭೆಯಲ್ಲಿ ಕುಂದಗೋಳಕ್ಕೆ ದಿವಂಗತ ಸಿ.ಎಸ್‌.ಶಿವಳ್ಳಿ ಪತ್ನಿ ಕುಸುಮಾ ಅವರನ್ನು ಆಯ್ಕೆ ಮಾಡುವ ತೀರ್ಮಾನಕ್ಕೆ ಬರಲಾಯಿತು. ಚಿಂಚೋಳಿಯಲ್ಲಿ ಪೈಪೋಟಿ ಇರುವುದರಿಂದ ಹೊನ್ನಾ ನಾಯಕ್‌, ಬಾಬುರಾವ್‌ ಚೌಹಾಣ್‌, ಸುಭಾಷ್‌ ರಾಥೋಡ್‌ ಹೆಸರು ಸೂಚಿಸಲಾಗಿದೆ. ಈ ಪಟ್ಟಿಯನ್ನು ಹೈಕಮಾಂಡ್‌ಗೆ ರವಾನಿಸಲಾಗುತ್ತಿದೆ. ಚಿಂಚೋಳಿ ಕ್ಷೇತ್ರದ ಬಗ್ಗೆ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ಪಡೆದ ಬಳಿಕ ವರಿಷ್ಠರು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.

ಉಪ ಚುನಾವಣೆ ನಡೆಯುವ ಎರಡೂ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವುದಿಲ್ಲ. ಮಿತ್ರಪಕ್ಷ ಕಾಂಗ್ರೆಸ್‌ಗೆ ಬೆಂಬಲಿಸುವುದಾಗಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಈಗಾಗಲೇ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ವರಿಷ್ಠರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೃತಜ್ಞತೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಏಪ್ರಿಲ್‌ 29 ಕಡೆಯ ದಿನವಾಗಿದ್ದು ಒಂದೆರಡು ದಿನದಲ್ಲಿ ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಪ್ರಕಟವಾಗುವ ಸಾಧ್ಯತೆಯಿದೆ.

ಉಸ್ತುವಾರಿಗಳ ನೇಮಕ

ಈ ಮಧ್ಯೆ ಬಿಜೆಪಿಯಿಂದ ಕುಂದಗೋಳಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್‌, ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ, ಸಂಸದ ಪ್ರಹ್ಲಾದ ಜೋಶಿ ಹಾಗೂ ಚಿಂಚೋಳಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ವಿ.ಸೋಮಣ್ಣ, ಲಕ್ಷ್ಮಣ ಸವದಿ, ಬಾಬುರಾವ್‌ ಚಿಂಚನಸೂರ್‌, ಸುಭಾಷ್‌ ಗುತ್ತೇದಾರ್‌ ಅವರನ್ನು ಚುನಾವಣಾ ಉಸ್ತುವಾರಿಗಳಾಗಿ ನಿಯೋಜಿಸಲಾಗಿದೆ.

ಲೋಕಸಭಾ ಚುನಾವಣೆ ಬೆನ್ನಲ್ಲೇ ಎದುರಾಗುತ್ತಿರುವ ವಿಧಾನಸಭಾ ಚುನಾವಣೆ ಉಸ್ತುವಾರಿ ವಹಿಸಿಕೊಳ್ಳುವುದಕ್ಕೆ ಬಿಜೆಪಿ ನಾಯಕರಲ್ಲಿ ಹೇಳಿಕೊಳ್ಳುವಂಥ ಉತ್ಸಾಹ ವ್ಯಕ್ತವಾಗಿಲ್ಲ. ಆರ್‌.ಅಶೋಕ್‌, ಅರವಿಂದ ಲಿಂಬಾವಳಿ, ಸಿ.ಟಿ.ರವಿ ಉತ್ತರ ಭಾರತದಲ್ಲಿ ನಡೆಯುವ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಲು ತೆರಳುತ್ತಿದ್ದಾರೆ. ಮೈತ್ರಿ ಸರಕಾರ ಈ ಎರಡು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿದೆ. ಹಾಗಾಗಿ ಬಿಜೆಪಿಯೂ ಗಂಭೀರ ಹೋರಾಟ ನಡೆಸಲು ಸಜ್ಜಾಗುತ್ತಿದೆ. ಈ ಕಾರಣದಿಂದ ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉಸ್ತುವಾರಿಯಾಗಿ ಕೆಲಸ ಮಾಡಿದ್ದ ವಿಧಾನ ಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರಿಗೆ ಚಿಂಚೋಳಿ ಕ್ಷೇತ್ರದ ಜವಾಬ್ದಾರಿ ವಹಿಸಲಾಗಿದೆ. ಖರ್ಗೆ ವಿರುದ್ಧ ರವಿಕುಮಾರ್‌ ಪಕ್ಷ ಸಂಘಟನೆ ಮಾಡಿದ ರೀತಿ ಯಡಿಯೂರಪ್ಪ ಮೆಚ್ಚುಗೆಗೆ ಪಾತ್ರವಾಗಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ